ಚಿಕ್ಕಮಂಗಳೂರು-ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದವರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗ್ತಾರೆ ಅನ್ನೋ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕರು ಕೆಲ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕ ಸಮರಕ್ಕೂ ಮುನ್ನ ಆಪರೇಷನ್ ಹಸ್ತದ ಸುಳಿವು ಸಿಕ್ತಿದ್ದಂತೆ ಬಿಜೆಪಿ ನಾಯಕರು ಅಲರ್ಟ್ ಆಗಿದ್ದಾರೆ. ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗದಂತೆ ತಡೆಯಲು ನಾನಾ ಸರ್ಕಸ್ ಮಾಡುತ್ತಿದ್ದಾರೆ. ಈ ಮಧ್ಯೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪಕ್ಷ ಬಿಟ್ಟು ಹೋದವರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್‌ಗೆ ಕೌಂಟರ್ ಕೊಡಲು ಬಿಜೆಪಿಯಿಂದ ಘಟಾನುಘಟಿ ನಾಯಕರನ್ನು ಸೆಳೆಯುವ ತಂತ್ರಗಾರಿಕೆ ಆರಂಭವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪರೋಕ್ಷವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿಗೆ ಪರೋಕ್ಷ ಆಹ್ವಾನ ಕೊಟ್ಟಿದ್ದಾರೆ. ಬಿಜೆಪಿ ಬಿಟ್ಟೋದವರು ಮತ್ತೆ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ. ಮೋದಿಗಾಗಿ ಯಾರು ಬೇಕಾದರೂ ಬಿಜೆಪಿಗೆ ಬರಬಹುದು. ಮೋದಿಗಾಗಿ, ದೇಶಕ್ಕಾಗಿ, ಮುಂದಿನ ಪೀಳಿಗೆಗಾಗಿ ಅವರು ಬಿಜೆಪಿ ಬರಲಿ ಎಂದಿದ್ದಾರೆ.
ಚಿಕ್ಕಮಗಳೂರಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ಪ್ರಧಾನಿ ಮೋದಿಗಾಗಿ, ಯಾರೇ ಪಕ್ಷ ಬಿಟ್ಟು ಹೋದವರು ವಾಪಸ್ ಬಂದ್ರೆ ಸ್ವಾಗತವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷ ಬಿಟ್ಟು ಹೋದವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ದೇಶದ ರಾಜಕೀಯ ಪರಿಸ್ಥಿತಿಯಲ್ಲಿ ಹುಡುಕಿದರೂ ಯಾವುದೇ ಪ್ರಬಲ ವಿರೋಧ ಪಕ್ಷಗಳಿಲ್ಲ. ಮೋದಿಯಂತಹ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಯಾರೇ ಪಾರ್ಟಿ ಬಿಟ್ಟು ಹೋದರೂ ವಾಪಸ್ ಬರಲು ವಿನಂತಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.