ಬೆಳಗಾವಿ, : “ಮಾನವ ಕುಲಕ್ಕೆ ಶಿಲ್ಪಕಲೆ ಎಂಬುದು ವರ. ಶತಮಾನಗಳ ಹಿಂದೆಯೇ ಶಿಲ್ಪಕಲೆಯನ್ನು ಜಗತ್ತಿಗೆ ಪರಿಚಯಿಸಿದ್ದು ಅಮರ ಶಿಲ್ಪಿ ಜಕಣಾಚಾರಿ” ಎಂದು ವಿಶ್ವಕರ್ಮ ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷರಾದ ಆರ್.ಶ್ರೀನಿವಾಸ್ ಆಚಾರ್ಯ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಜ.1) ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಲ್ಪಕಲೆ ನಮ್ಮ ದೇಶದ ಸಂಸ್ಕೃತಿ ಹಾಗೂ ಹೆಮ್ಮೆ. ಅಮರಶಿಲ್ಪಿ ಜಕಣಾಚಾರಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರ. ರಾಜ, ಮಹಾರಾಜರ ಕಾಲದಿಂದ ಇಲ್ಲಿಯವರೆಗೂ ಅಮರಶಿಲ್ಪಿ ನಮ್ಮೆಲ್ಲರ ಕಾಯಕದಲ್ಲಿ ಅಮರವಾಗಿದ್ದಾರೆ ಎಂದು ಅವರು ತಿಳಿಸಿದರು.
ಅಮರಶಿಲ್ಪಿ ಜಕಣಾಚಾರಿ ಹುಟ್ಟು, ಜೀವನ ಚರಿತ್ರೆ, ಅವರು ನೀಡಿದಂತಹ ವಾಸ್ತುಶಿಲ್ಪ ಕಲೆ, ಬೇಲೂರು, ಹಳೆಬೀಡು ಶಿಲ್ಪ ಕಲೆಯ ಕೊಡುಗೆಯ ಕುರಿತು ಆರ್.ಶ್ರೀನಿವಾಸ್ ಆಚಾರ್ಯ ಅವರು ವಿಶೇಷ ಉಪನ್ಯಾಸ ನೀಡಿದರು.
ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ ಅವರು ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸತ್ಯನಾರಾಯಣ ಭಟ್ ಹಾಗೂ ತಂಡದವರಿಂದ ಕನಕದಾಸರ, ಪುರಂದರದಾಸರ ಕೀರ್ತನೆಗಳು ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ವಿದ್ಯಾವತಿ ಭಜಂತ್ರಿ, ಡಾ.ನಿರ್ಮಲಾ ಬಟ್ಟಲ, ವಿಶ್ವಕರ್ಮ ಸಮಾಜದ ಮುಖಂಡರಾದ ಎನ್.ಎಸ್ ಶಂಕರಾಚಾರ್ಯ, ಕಲ್ಲಪ್ಪ ಬಡಿಗೇರ, ಸಿ.ವಾಯ್. ಪತ್ತಾರ ಸುರೇಶ್ ಪೊತದಾರ ಮತ್ತಿತರರು ಉಪಸ್ಥಿತರಿದ್ದರು.
*****