ಬೆಳಗಾವಿ-ಮುಸ್ಲಿಂ ಸಮುದಾಯಕ್ಕೆ ಸೇರಿದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಠಾಣೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ಜಾಕೀರ್ ಪಾಶಾ ಕಾಲಿಮಿರ್ಚಿ ಅವರು ಹಿಂದು ಸಂಪ್ರದಾಯದಂತೆ ಸ್ವತಃ ತಾವೇ ಗಣೇಶ ಮೂರ್ತಿಯನ್ನು ಹೊತ್ತು ತಂದರು. ಸಮವಸ್ತರದಲ್ಲೇ ಹಣೆ ಮೇಲೆ ತಿಲಕವನ್ನಿಟ್ಟು, ತಲೆ ಮೇಲೆ ಕೇಸರಿ ಗೋಪಿ, ಕೇಸರಿ ಶಾಲು ಹಾಕಿಕೊಂಡು, ಬರಿಗಾಲಿನಲ್ಲಿ ಗಣೇಶ ಮೂರ್ತಿಯನ್ನು ತಂದು, ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಪೂಜೆ, ಪುನಸ್ಕಾರಗಳನ್ನು ನೆರವೇರಿಸಿದರು. ತಮ್ಮ ಸಿಬ್ಬಂದಿ ಜೊತೆಗೆ ಗಣಪತಿ ಬಪ್ಪ ಮೋರಯಾ ಎಂಬ ಘೋಷಣೆಯನ್ನು ಕೂಗಿದರು.
ಈ ಅಧಿಕಾರಿ ಜಾತಿ, ಧರ್ಮವನ್ನು ಮೀರಿ ಬೆಳೆದು, ಹಿಂದುಗಳ ಜೊತೆ ಸೇರಿ ಗಣೇಶ ಹಬ್ಬವನ್ನು ಆಚರಿಸುವ ಮೂಲಕ ಇತರೇ ಅಧಿಕಾರಿಗಳಿಗೂ ಮಾದರಿಯಾಗಿದ್ದಾರೆ. ಈ ಪೊಲೀಸ್ ಅಧಿಕಾರಿ ನಡೆಗೆ ಭಾರೀ ಮೆಚ್ಚಿಗೆ ವ್ಯಕ್ತವಾಗಿದೆ.
ಈ ಹಿಂದೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆಯೂ ಅವರು ಗಣೇಶೋತ್ಸವದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.