ಅನುದಾನ ನಾನು ತರುವೆ; ಅದರ ಸದ್ಭಳಕೆ ನಿಮ್ಮ ಜವಾಬ್ದಾರಿ, ಸಿಇಓ ರಾಮಚಂದ್ರನ್ ಅಧ್ಯಕ್ಷೆಗೆ ಕಿವಿಮಾತು:
ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯಿತಿಯ ನೂತನ ಸಿಇಓ ಆಗಿ ೩೦ ರ ಹರೆಯದ ಯುವ ಐಎಎಸ್ ಅಧಿಕಾರಿ ಆರ್. ರಾಮಚಂದ್ರನ್ ಇಂದು ಅಧಿಕಾರ ಸ್ವೀಕರಿಸಿದರು.
೨೦೧೨ ನೇ ಐಎಎಸ್ ಬ್ಯಾಚ್ ನ ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಮೂಲದ ರಾಮಚಂದ್ರನ್ ಹಾಸನದಲ್ಲಿ ಐಎಎಸ್ ಪ್ರೋಬೇಷನರಿ ಮುಗಿಸಿ, ಚಿಕ್ಕಮಗಳೂರು ಸಹಾಯಕ ಆಯುಕ್ತ, ಕೊಪ್ಪಳ ಜಿಪಂ. ಸಿಇಓ ಆಗಿ ಈ ಮುಂಚೆ ಕೆಲಸ ನಿರ್ವಹಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿ ಆಡಳಿತಕ್ಕೆ ಚುರುಕು ಮುಟ್ಟಿಸಿ, ಬಯಲು ಶೌಚ ಮುಕ್ತಗೊಳಿಸಲಾಗುವುದು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯಲಾಗುವುದು, ಸ್ವಚ್ಛ ಭಾರತ ಯೋಜನೆ ಜಾರಿ, ನರೇಗಾ ಅಡಿ ಜನರಿಗೆ ಉದ್ಯೋಗ, ಬರ ಕಾಮಗಾರಿ ವ್ಯವಸ್ಥಿತ ನಿರ್ವಹಣೆ, ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತಿತರ ಅನುಕೂಲತೆಗಳನ್ನು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಪರಿಣಾಮಕಾರಿ ಯಾಗಿ ಜಾರಿಗೆ ತರಲಾಗುವುದು ಎಂದು ರಾಮಚಂದ್ರನ್ ತಿಳಿಸಿದ್ದಾರೆ.
ಜಿಪಂ. ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯ ರಮೇಶ ದೇಶಪಾಂಡೆ, ಪ್ರಶಾಂತರಾವ್ ಐಹೊಳೆ ನೂತನ ಸಿಇಓ ಅವರಿಗೆ ಶುಭ ಕೋರಿ ಚರ್ಚಿಸಿದರು. ಜಿಪಂ.ಗೆ ಅನುದಾನ ತರುವುದು ನನ್ನ ಜವಾಬ್ದಾರಿ, ಅನುದಾನದ ಸದ್ಭಳಕೆ ನಿಮ್ಮ ಜವಾಬ್ದಾರಿ ಎಂದು ರಾಮಚಂದ್ರನ್ ಅಧ್ಯಕ್ಷೆ ಆಶಾ ಐಹೊಳೆ ಮತ್ತು ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು. ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎಸ್. ಬಿ. ಮುಳ್ಳಳ್ಳಿ, ಡಿಎಸ್ ಡ್ಬ್ಲೂ ಉಮಾ ಸಾಲಿಗೌಡರ, ಬಿಸಿಎಂ ಜಿಲ್ಲಾ ಅಧಿಕಾರಿ ಪ್ರಕಾಶ ಹರಗಾಪುರ ಸೇರಿದಂತೆ ಅನೇಕ ಅಧಿಕಾರಿಗಳು ಸ್ವಾಗತಿಸಿದರು.