ಚ.ಕಿತ್ತೂರು(ಮೇ-29) : ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಗಳಲ್ಲಿನ ಚರಂಡಿಯಲ್ಲಿ ನೀರು ಸಂಗ್ರಹವಾಗದಂತೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ನೀರಿನ ಟ್ಯಾಂಕ್ ಗಳನ್ನು ಆಗಾಗ ಸ್ವಚ್ಚಗೊಳಿಸುತ್ತಿರಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಹೇಳಿದರು.
ಚನ್ನಮ್ಮ ಕಿತ್ತೂರು ತಾಲೂಕು ಪಂಚಾಯಿತಿ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು, ಪ್ರಗತಿ ಹಂತದಲ್ಲಿರುವ ಶಾಲಾ ಕಾಮಗಾರಿಗಳುನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಹಾಗೂ ಮನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಜನರಿಗೆ ಕೆಲಸ ನೀಡುವುದರ ಜೊತೆ ಹೆಚ್ಚು ಮಾನವ ದಿನಗಳ ಸೃಜನೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮ ಪಂಚಾಯಿತಿಗಳ ಆಸ್ತಿ ಸಮೀಕ್ಷೆ, ಸಕಾಲ ಅರ್ಜಿಗಳ ವಿಲೇವಾರಿ ಮಾಡುವುದು ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರಗತಿಯಲ್ಲಿರುವ ಸಮುದಾಯ ಶೌಚಾಲಯಗಳನ್ನು ಹಾಗೂ ಎಸ್.ಡಬ್ಲೂ.ಎಂ ಘಟಕಗಳ ಕಾಮಗಾರಿಗಳನ್ನು ಒಂದು ವಾರದೊಳಗೆ ಮುಕ್ತಾಯ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ಭೀಮಪ್ಪ ತಳವಾರ, ಸಹಾಯಕ ನಿರ್ದೇಶಕ ಪಂ.ರಾ ಸುರೇಶ ನಾಗೋಜಿ, ಸಹಾಯಕ ನಿರ್ದೇಶಕ ಗ್ರಾಉ ಲಿಂಗರಾಜ ಹಲಕರ್ಣಿಮಠ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಪಂ ಸಿಬ್ಬಂದಿಗಳು ಹಾಜರಿದ್ದರು