ಸ್ಮಾರ್ಟ್ ರಸ್ತೆಗಳ ಮ್ಯಾಜಿಕ್
ಅರ್ಧ ಗಂಟೆಯಲ್ಲಿ ಐದು ಬೈಕ್ ಸ್ಕಿಡ್
ಬೆಳಗಾವಿ: ಸ್ಮಾರ್ಟ್ ಸಿಟಿಯ ಒಂದೊಂದೇ ಹುಳುಕುಗಳು ಕಾಮಗಾರಿ ಮುಗಿದ ಬಳಿಕ ಹೊರಬರುತ್ತಿವೆ. ನಗರದ ಪ್ರಮುಖ ರಸ್ತೆಗಳೆಲ್ಲ ಸಿಮೆಂಟ್ ರಸ್ತೆಗಳಾಗಿ ಪರಿವರ್ತನೆಗೊಂಡಿದ್ದು, ನೋಡಲಿಕ್ಕೇನೊ ಸುಂದವಾಗಿ ಕಾಣಿಸುತ್ತಿವೆ. ಆದರೆ, ಅವುಗಳ ಸೈಡ್ ಎಫೆಕ್ಟ್ ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಒದ್ದೆಯಾಗಿದ್ದು, ತಿರುವುಗಳಲ್ಲಿ ಬೈಕ್ ಗಳು ಸ್ಕಿಡ್ ಆಗುತ್ತಿವೆ. ಅಶೋಕನಗರದ ಬಸ್ ನಿಲ್ದಾಣ ಬಳಿಯ ತಿರುವಿನಲ್ಲಿ ಇಂದು ಬೆಳಗ್ಗೆ 8 ರಿಂದ 8.30ರ ಅವಧಿಯಲ್ಲಿ ಸುಮಾರು ಐದು ಬೈಕ್ ಗಳು ಸ್ಕಿಡ್ ಆಗಿ ಸವಾರರು ಸ್ವಲ್ಪದರಲ್ಲೇ ಪ್ರಾಣಾಮಾಯದಿಂದ ಪಾರಾದ ಘಟನೆ ನಡೆಯಿತು.
ಧರ್ಮವೀರ ಮಹಾವಿರ ವರ್ತುಳ ಕಡೆಯಿಂದ ಬರುತ್ತಿದ್ದ ಬೈಕ್ ಸವಾರರು ಗಾಂಧಿನಗರ ಕಡೆಗೆ ಹೋಗಲು ಸರ್ವಿಸ್ ರಸ್ತೆ ಕೂಡಲು ತಿರುವಿನಲ್ಲಿ ಬೈಕ್ ಹೊರಳಿಸುತ್ತಿದ್ದಂತೆ ಬೈಕ್ ಗಳು ಸ್ಕಿಡ್ ಆಗಿ ಜಾರಿ ಹೋಗಲಾರಂಭಿಸಿದವು.
ಸ್ಥಳದಲ್ಲಿ ಅಟೋಚಾಲಕರು ಪರಿಸ್ಥಿತಿ ಗಂಭೀರತೆ ಅರಿತು. ಕೆಲ ಹೊತ್ತು ರಸ್ತೆಯಲ್ಲಿ ನಿಂತು ಸವಾರರಿಗೆ ಎಚ್ಚರಿಕೆ ನೀಡಲಾರಂಭಿಸಿದರು. ಸ್ವಲ್ಪ ಹೊತ್ತಿನ ಬಳಿಕ ತಿರುವಿನತ್ತ ಬೈಕ್ ಗಳು ಬರದಂತೆ ರಸ್ತೆಗೆ ಅಡ್ಡಲಾಗಿ ಕಲ್ಲು, ಕಟ್ಟಿಗೆ ಇಟ್ಟರು. ಒಟ್ಟಿನಲ್ಲಿ ಇಲ್ಲಿಯವರೆಗೆ ಬಿಸಿಲಿನಿಂದ ಬಿಸಿ ಗಾಳಿ ಉಗುಳುತ್ತಿದ್ದ ಸಿಮೆಂಟ್ ರಸ್ತೆಗಳು ಈಗ ಮಳೆಯಾಗುತ್ತಿದ್ದಂತೆ ಬೈಕ್ ಸವಾರರಿಗೆ ಯಮರೂಪಿಯಾಗಿ ಪರಿವರ್ತನೆಯಾಗಿವೆ.