Breaking News

ಕನ್ನಡದ ಮಹಾಪುರುಷರನ್ನು ಮರೆತ ತ್ರೀಮೂರ್ತಿಗಳು!!

ಬೆಳಗಾವಿ: ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಓಲೈಕೆ ಜೋರಾಗಿಯೇ ನಡೆದಿದೆ. ಇದರ ಪರಿಣಾಮ ವಿವಿಧ ಕಡೆಗಳಲ್ಲಿ ಶಿವಾಜಿ ಮಹಾರಾಜರ ಪುತ್ಥಳಿಗಳು ಪ್ರತಿಷ್ಠಾಪನೆಗೊಳ್ಳುತ್ತಿವೆ. ಮರಾಠಿ ಮತದಾರರು ನಿರ್ಣಾಯಕರಾಗಿರುವ ಬೆಳಗಾವಿಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರಂತೂ ಕ್ಷೇತ್ರಗಳಲ್ಲಿ ಬೇರೆ ಮತದಾರರರೆ ಇಲ್ಲವೇನೋ ಎಂಬಂತೆ ಮರಾಠಾ ಮತರದಾರರ ಮನಗೆಲ್ಲಲು ಪೈಪೋಟಿ ನಡೆಸಿದ್ದಾರೆ.

ಕನ್ನಡದ ಮಹಾಪುರುಷರನ್ನು ಮರೆತ ತ್ರೀಮೂರ್ತಿಗಳು

ಮರಾಠಿಗರ ಮನಗೆಲ್ಲುವ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಗಳ ಶಾಸಕರು ಛತ್ರಪತಿ ಶಿವಾಜಿ ಮಹಾರಾಜರಿಗೆ ಬಹುಪರಾಕ್ ಹಾಕುತ್ತಿದ್ದಾರೆ. ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಜಹಂಸಘಡದಲ್ಲಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ನಿರ್ಮಿಸಿದ್ದು, ಭರ್ಜರಿ ಉದ್ಘಾಟನಾ ಸಮಾರಂಭ ಆಯೋಜಿಸಿ ಮರಾಠಿಗರ ಮನಗೆಲ್ಲುವ ತಂತ್ರ ಹೆಣೆದಿದ್ದಾರೆ. ಇನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ಸಹ ಛತ್ರಪತಿ ಶಿವಾಜಿ ಮಹಾರಜರ ಜೀವನ ಚರಿತ್ರೆ ಮಹಾರಾಜರ ಇತಿಹಾಸದ ಗತವೈಭವವನ್ನು ಬಿಂಬಿಸುವ ಶಿವಚರಿತ್ರೆ ನಿರ್ಮಿಸಿದ್ದು ಇದರ ಉದ್ಘಾಟನೆಗೆ ಭರ್ಜರಿ ತಯಾರಿ ನಡೆಸಿದ್ದಾರ.

ಬೆಳಗಾವಿ ಉತ್ತರದ ಶಾಸಕ ಅನಿಲ ಬೆನಕೆ ಸಂಭಾಜಿ ವೃತ್ತದಲ್ಲಿ ಶಿವನೇರಿ ಕೋಟೆ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಈ ವೃತ್ತವನ್ನು ಲೋಕಾರ್ಪಣೆ ಮಾಡಿ, ಮರಾಠಿಗರಿಗೆ ಜೈ ಎಂದಿದ್ದಾರೆ.

ನೆನಪಾಗದ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ;

ಶಿವಾಜಿ ಮಹಾರಾಜರಿಗೆ ಏಕಿಷ್ಟು ಮಹತ್ವ ಅಂತಲ್ಲ. ನಗರದಲ್ಲಿ ಶಿವಾಜಿ ಮಹಾರಾಜರ ಹಾಗೆಯೇ ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಅನೇಕ ಮಹನೀಯರ ವರ್ತುಳಗಳಿವೆ. ಇವುಗಳೇಕೆ ಈ ಶಾಸಕರ ಕಣ್ಣಿಗೆ ಬೀಳುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ನಗರದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ವರ್ತುಳ ಇಡೀ ರಾಜ್ಯದ ಗಮನ ಸೆಳೆಯುತ್ತದೆ. ಆದರೆ, ಯಾವುದೇ ಶಾಸಕರು ಚನ್ನಮ್ಮಳ ವೃತ್ತವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮನಸ್ಸು ಮಾಡುತ್ತಿಲ್ಲ. ಚನ್ನಮ್ಮಳ ಬಲಗೈ ಬಂಟ ಶೂರ ಸಂಗೊಳ್ಳಿ ರಾಯಣ್ಣನ ವರ್ತುಳವಂತೂ ಇದ್ದೂ ಇಲ್ಲದಂತಿದೆ. ಕನಿಷ್ಟಪಕ್ಷ ವರ್ತುಳದಲ್ಲಿ ರಾಯಣ್ಣನ ಮೂರ್ತಿಯನ್ನಾದರೂ ಪ್ರತಿಷ್ಠಾಪಿಸುವ ಗೋಜಿಗೆ ಹೋಗಿಲ್ಲ. ಪೀರಣವಾಡಿಯಲ್ಲಿ ಅಭಿಮಾನಿಗಳೇ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಿಸಿದ್ದರೂ ವಿವಾದ ತಲೆದೋರಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.

ಪಕ್ಕದ ಕೊಲ್ಲಾಪುರದಲ್ಲೂ ಇಲ್ಲ ಬೆಳಗಾವಿಯಷ್ಟು ಪ್ರತಿಮೆ: ಅಚ್ಚರಿಯ ಸಂಗತಿ ಎಂದರೆ ಕೆಲವು ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದ ಪ್ರಮುಖ ನಗರವೆನಿಸಿಕೊಂಡಿರುವ ಬೆಳಗಾವಿಯ ನೆರೆಯ ನಗರ ಕೊಲ್ಲಾಪುರದಲ್ಲೂ ಸಹ ಬೆಳಗಾವಿ ನಗರದಲ್ಲಿ ಇರುವಷ್ಟು ಶಿವಾಜಿ ಮಹಾರಾಜರ ಪುತ್ಥಳಿಗಳು ಇಲ್ಲವೆಂಬ ಅಂಶ ಕಂಡುಬರುತ್ತದೆ. ಇದನ್ನು ನೋಡಿದರೆ ಸ್ಥಳೀಯ ಶಾಸಕರು ಯಾವ ಪ್ರಮಾಣದಲ್ಲಿ ಮರಾಠಿ ಮತಗಳ ಓಲೈಕೆಗೆ ಪೈಪೋಟಿ ನಡೆಸಿದ್ದಾರೆ ಎಂಬುದು ಗೊತ್ತಾಗುತ್ತದೆ.ಬೆಳಗಾವಿಯ ಕನ್ನಡಿಗರು ಛತ್ರಪತಿ ಶಿವಾಜಿ ಮಹಾರಾಜರ,ಸಂಬಾಜಿ ಮಹಾರಾಜರ ಪ್ರತಿಮೆಗಳ ನಿರ್ಮಾಣಕ್ಕೆ ಯಾವತ್ತೂ ವಿರೋಧ ಮಾಡಿಲ್ಲ.ಎಂದಿಗೂ ವಿರೋಧ ಮಾಡುವುದು ಇಲ್ಲ.ಆದ್ರೆ ಜನ ಪ್ರತಿನಿಧಿಗಳು ಕನ್ನಡದ ಮಹಾಪುರುಷರನ್ನು ನಿರ್ಲಕ್ಷ್ಯ ಮಾಡಿದ್ರೆ ಸಹಿಸುವದಿಲ್ಲ.

ಕನ್ನಡಿಗರು ಲೆಕ್ಕಕ್ಕೇ ಇಲ್ಲವೇ ? :

ಈ ಮೂರು ಕ್ಷೇತ್ರಗಳಲ್ಲಿ ಮರಾಠಿ ಮತಗಳು ನಿರ್ಣಾಯಕವಾಗಿದ್ದರೂ ಕನ್ನಡಿಗರೂ ಸಹ ಗಣನೀಯ ಪ್ರಮಾಣದಲ್ಲಿ ಇದ್ದಾರೆ. ಬೆಳಗಾವಿ ಉತ್ತರ ಹಾಗೂ ಗ್ರಾಮೀಣ ಮತಕ್ಷೇತ್ರಗಳಲ್ಲಿ ಕನ್ನಡಿಗ ಮತದಾರರೂ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಆದರೂ ಇಲ್ಲಿನ ಜನಪ್ರತಿಧಿನಿಗಳು ಕನ್ನಡಿಗರು ಲೆಕ್ಕಕ್ಕೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕನ್ನಡಗರಲ್ಲಿನ ಒಗ್ಗಟ್ಟು ಕೊರತೆ. ಇದನ್ನು ಚೆನ್ನಾಗಿ ಅರಿತಿರುವ ಈ ಜನಪ್ರತಿನಿಧಿಗಳು ಕನ್ನಡಿಗರ ಮತಗಳನ್ನು ಸೆಳೆಯಲು ವಿಶೇಷವಾದ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ತಾಯ್ನಾಡಿಗಾಗಿ, ಜೀವನವನ್ನೇ ಸಮರ್ಪಿಸಿದ ವೀರನಾರಿ ಕಿತ್ತೂರು ಚನ್ನಮ್ಮ, ಶೂರ ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವಣ್ಣ ಮಹರ್ಷಿ ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ್, ಮುಂತಾದವರ ಹೆಸರು ಜಯಂತಿಗಳಲ್ಲಿ ಮಾತ್ರ ಕೇಳಿಬರುತ್ತವೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *