ಬೆಳಗಾವಿ: ಹೆಣ್ಣು ಕುಲದ ಕಣ್ಣು. ಬೇಡವಾದ ಹೆಣ್ಣು ಮಗುವನ್ನು ಕಸದ ತೊಟ್ಟಿಯಲ್ಲಿಯೋ ಅಥವಾ ತಿಪ್ಪೆ ಗುಂಡಿಯಲ್ಲಿ ಬಿಟ್ಟು ಹೋಗಬಾರದೆಂದು ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಅವರು ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಬೇಡವಾದ ಮಗುವನ್ನು ಇಲ್ಲಿ ಬಿಡಲು ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ವಿಶೇಷ ತೊಟ್ಟಿಲಿನ ವ್ಯವಸ್ಥೆ ಮಾಡಿದ್ದಾರೆ.
ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಇರುವ ಜನರಲ್ ವೇಟಿಂಗ್ ಹಾಲ್ ನ ಪ್ಯಾಸೇಜ್ ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಚಿಕ್ಕುಂಬಿಮಠ ಆಶ್ರಮದ ಸಹಯೋಗದಲ್ಲಿ ಈ ತೊಟ್ಟಿಲಿನ ವ್ಯವಸ್ಥೆ ಮಾಡಿದ್ದು, ಬೇಡವಾದ ಮಗುವನ್ನು ತೊಟ್ಟಿಲಿಗೆ ಹಾಕಿ, ತೊಟ್ಟಿಲಿನ ಬದಿಯ ಬಟನ್ ಒತ್ತಿದರೆ ತೊಟ್ಟಿಲಿಗೆ ಮಗು ಬಂದಿದೆ ಎಂಬ ಸಂದೇಶ ಸ್ಟೇಶನ್ ಮಾಸ್ತರ್ ಗೆ ರವಾನೆ ಆಗುತ್ತದೆ.
ಬುಧವಾರ ಬೆಳಗ್ಗೆ ಸಚಿವರಾದ ಸುರೇಶ ಅಂಗಡಿ, ಶಶಿಕಲಾ ಜೊಲ್ಲೆ, ಡಾ.ಪ್ರಭಾಕರಕೋರೆ, ಶಾಸಕ ಅನಿಲ ಬೆನಕೆ ಅವರು ಖಾಲಿ ತೊಟ್ಟಿಲನ್ನು ತೂಗುವ ಮೂಲಕ ಸೇವೆ ಸಮರ್ಪಿಸಿದರು.
ಈ ಮುಂಚೆ ಬೇಡವಾದ ಮಗುವನ್ನು ತಿಪ್ಪೆ ಗುಂಡಿಯಲ್ಲಿ, ಕಸದ ತೊಟ್ಟಿಯಲ್ಲಿ ಹಾಕುವ ಮೂಲಕ ಅಮಾನವೀಯತೆ ಮೆರೆಯಲಾಗುತ್ತಿತ್ತು. ಈಗ ಈ ತಾಯಿಯ ಮಡಿಲು ಎಂಬ ವಿಶೇಷ ತೊಟ್ಟಿಲು ನಿರ್ಮಿಸಿ ಲೋಕಾರ್ಪಣೆ ಮಾಡುವ ಮೂಲಕ ರೈಲ್ವೆ ಸಚಿವರು ಮಾನವೀಯತೆ ಮೆರೆದಿದ್ದಾರೆ.