ಬೆಳಗಾವಿ-: ಲೋಕಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಪಾಲನೆಗೆ ವಿವಿಧ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿಯೋಜಿಸಲಾಗಿರುವ ತಂಡಗಳ ಮುಖ್ಯಸ್ಥರು ಹಾಗೂ ಸೆಕ್ಟರ್ ಅಧಿಕಾರಿಗಳ ಜತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಸಮಾಲೋಚನೆ ನಡೆಸಿದರು.
ಭಾನುವಾರ (ಮಾ.28) ಗೋಕಾಕ, ಅರಭಾಂವಿ, ರಾಮದುರ್ಗ, ಸವದತ್ತಿ ಮತ್ತು ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಂಡಗಳ ಜತೆ ಪ್ರತ್ಯೇಕವಾಗಿ ಸಮಾಲೋಚನಾ ಸಭೆಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದಷ್ಟು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಸಾಧ್ಯವಾಗಲಿದೆ. ಆದ್ದರಿಂದ ನೀತಿಸಂಹಿತೆ ಪಾಲನೆಗೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಯಾವುದೇ ರೀತಿಯ ಲೋಪಗಳಿಗೆ ಆಸ್ಪದ ನೀಡದೇ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಸೂಚನೆ ನೀಡಿದರು.
ಇಡೀ ರಾಜ್ಯದಲ್ಲಿಯೇ ಒಂದೇ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ವೇಳೆ ಎಲ್ಲರ ಗಮನ ಇಲ್ಲಿಯೇ ಕೇಂದ್ರೀಕೃತ ಆಗಿರುವುದರಿಂದ ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಾ ಎಚ್ಚರಿಕೆಯಿಂದ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು.
ಎಲ್ಲ ತಂಡಗಳಿಗೂ ಈಗಾಗಲೇ ಹಲವಾರು ಸುತ್ತಿನ ತರಬೇತಿಯನ್ನು ನೀಡಲಾಗಿದೆ. ಚುನಾವಣಾ ಕೆಲಸಕ್ಕೆ ಸಂಬಂಧಿಸಿದಂತೆ ತಮ್ಮ ಅನುಭವವನ್ನು ಬಳಸಿಕೊಂಡು ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.
ನೀತಿಸಂಹಿತೆ ಉಲ್ಲಂಘ ಮತ್ತು ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರುಗಳು ಬಂದಾಗ ಸಂಬಂಧಿಸಿದ ತಂಡಗಳು ತಕ್ಷಣವೇ ಸ್ಥಳಕ್ಕೆ ತೆರಳಿ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಪ್ರಕರಣಗಳನ್ನು ದಾಖಲಿಸಬೇಕು.
ಚುನಾವಣಾ ಪ್ರಚಾರಸಭೆಗಳು ಹಾಗೂ ರಾಜಕೀಯ ಪಕ್ಷಗಳ ಸಭೆ-ಸಮಾರಂಭಗಳು ನಡೆಯುತ್ತಿರುವ ಸ್ಥಳಗಳಲ್ಲಿ ನೀತಿಸಂಹಿತೆ ಉಲ್ಲಂಘನೆ ಹಾಗೂ ಖರ್ಚುವೆಚ್ಚಗಳ ಬಗ್ಗೆ ನಿಗಾ ವಹಿಸುವುದರ ಜತೆಗೆ ವಿಡಿಯೋ ಚಿತ್ರೀಕರಣವನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ನಿರ್ದೇಶನಗಳನ್ನು ನೀಡಿದರು.
ಎಲ್ಲ ತಂಡಗಳ ಜತೆ ಮುಕ್ತ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು, ಉಪ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಸಮಾಲೋಚನಾ ಸಭೆಯಲ್ಲಿ ಫ್ಲೈಯಿಂಗ್ ಸರ್ವಲನ್ಸ್, ಎಸ್‌ಎಸ್ ಟಿ, ವಿಎಸ್ ಟಿ, ವಿವಿಟಿ ಸೇರಿದಂತೆ ಎಲ್ಲ ತಂಡಗಳ ಮುಖ್ಯಸ್ಥರು, ಸೆಕ್ಟರ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ವೇಳೆ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಗುರ್ಲಾಪೂರ ಕ್ರಾಸ್ ಚೆಕ್ ಪೋಸ್ಟ್,ಮಾಲದಿನ್ನಿ ಕ್ರಾಸ್ ಚೆಕ್ ಪೋಸ್ಟ್ ಮತ್ತು ಯ ರಗಟ್ಟಿ ಚೆಕ್ ಪೋಸ್ಟ್ ಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ