Breaking News

ಕಣ್ಣೀರಿಟ್ಟ ಬೆಳಗಾವಿ ಪತ್ರಕರ್ತರು….

ಇಂದು ಬೆಳಗಾವಿ ಪತ್ರಕರ್ತರು ಭಾವಜೀವಿಗಳಗಾಗಿದ್ದರು,ಇಬ್ಬರು ಸಹಮಿತ್ರರನ್ನು ಕಳೆದುಕೊಂಡ ಗೆಳೆಯರು ಅಗಲಿದ ಗೆಳೆಯರನ್ನು ಸ್ಮರಿಸಿ ಕಣ್ಣೀರು ಸುರಿಸಿದ್ದು ವಿಶೇಷ

 

ಬೆಳಗಾವಿ: ಕೆಲವು ತಿಂಗಳ ಹಿಂದೆ ಬೆಳಗಾವಿಯ ಪತ್ರಿಕಾ ಛಾಯಾಗ್ರಾಹಕರಾದ ಚೇತನ ಕುಲಕರ್ಣಿ ಮತ್ತು ಪರಶುರಾಮ ಗುಂಜಿಕರ ಅವರ ಅಕಾಲಿಕ ನಿಧನವಾಗಿತ್ತು. ದುಡಿಯುವ ಕುಟುಂಬ ಸದಸ್ಯನ ಆಸರೆ ಕಳೆದುಕೊಂಡು ಅತಂತ್ರವಾಗಿದ್ದ ಎರಡೂ ಕುಟುಂಬಗಳಿಗೆ ಎಸ್.ಎಸ್.ಫೌಂಡೇಶನ್ ವತಿಯಿಂದ ಇಂದು ಅಗತ್ಯ ನೆರವು ನೀಡಲಾಯಿತು. ಜೊತೆಗೆ ಮುರಗೋಡದ ಪತ್ರಕರ್ತ ಮಹಾಂತೇಶ ಬಾಳಿಕಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚೆಕಿತ್ಸೆ ವೆಚ್ಚಕ್ಕಾಗಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಯಿತು.

ಹಿರಿಯ ಪತ್ರಕರ್ತರಾಗಿರುವ ದಿಲೀಪ ಕುರುಂದವಾಡೆ ಅವರು ತಮ್ಮ ತಾಯಿಯ ಸ್ಮರಣೆಯಲ್ಲಿ ಎಸ್.ಎಸ್.ಫೌಂಡೇಶನ್ ಸ್ಥಾಪನೆ ಮಾಡಿದ್ದಾರೆ. ಈ ಫೌಂಡೇಶನ್ ಮೂಲಕ ಸಂಕಷ್ಟಕ್ಕೆ ಈಡಾಗಿರುವ ಪತ್ರಕರ್ತರು ಮತ್ತು ಬಡಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಭಾನುವಾರ ವಾರ್ತಾ ಇಲಾಖೆಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫೌಂಡೇಶನ್ ನ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಗುಂಜಿಕರ ಮನೆಗೆ ಇತ್ತೀಚಿಗೆ ಭೇಟಿ ನೀಡಿದ್ದ ಎಸ್,ಎಸ್,ಫೌಂಡೇಶನ್ ತಂಡ, ತಾವೇ ಮುಂದಾಗಿ ದಾಖಲೆಗಳನ್ನು ಸಂಗ್ರಹಿಸಿ, ಮೃತರ ತಂದೆ-ತಾಯಿಗೆ ವೃದ್ಧಾಪ್ಯ ವೇತನ ಹಾಗೂ ಪತ್ನಿಗೆ ವಿಧವಾ ವೇತನ ಮಂಜೂರು ಮಾಡಿಸಿದೆ. ಅಲ್ಲದೆ, ಮೃತನ ಮೂರು ವರ್ಷದ ಪುತ್ರಿಗೆ ಎಲ್.ಕೆ.ಜಿ ಯಿಂದ ಹಿಡಿದು ಎಸ್.ಎಸ್.ಎಲ್.ಸಿ ವರೆಗಿನ ವಿದ್ಯಾಭ್ಯಾಸದ ಎಲ್ಲ ಜವಾಬ್ದಾರಿಗಳನ್ನು ಫೌಂಡೇಶನ್ ಹೊತ್ತುಕೊಂಡಿದೆ. ಅಷ್ಟೇ ಅಲ್ಲದೆ, ಮೃತ ಪರಶುರಾಮ ಪತ್ನಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಹತೆಗೆ ತಕ್ಕ ನೌಕರಿ ಕೊಡಿಸುವ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.

ಮೃತ ಚೇತನ ಕುಲಕರ್ಣಿ ಅವರ ಪತ್ನಿಗೆ ಫೌಂಡೇಶನ್ ವತಿಯಿಂದ ಪೂರ್ವ ಪ್ರಾಥಮಿಕ ಶಾಲೆಯೊಂದನ್ನು ತೆರೆದು ಕೊಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಎರಡೂ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಾಯಿತು. ತುಂಬಾ ಭಾವನಾತ್ಮವಾಗಿ ಜರುಗಿದ ಕಾರ್ಯಕ್ರಮದಲ್ಲಿ ಬಹುತೇಕರ ಕಣ್ಣುಗಳು ಒದ್ದೆಯಾಗಿದ್ದವು.

ಮೂರೂ ಕುಟುಂಬಗಳಿಗೆ ನೆರವು ನೀಡಿ ಮಾತನಾಡಿದ ಪತ್ರಕರ್ತ ದಿಲೀಪ ಕುರುಂದವಾಡೆ ಅವರು, “ಪತ್ರಕರ್ತರಾದ ನಾವು ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ಸುತ್ತ ಇರುತ್ತೇವೆ. ಅವರ ಸುದ್ದಿಗಳನ್ನು ಮಾಡುತ್ತೇವೆ. ಅಪಾಯವಿದ್ದರೂ ಲೆಕ್ಕಿಸದೆ ಗಲಾಟೆ ಗದ್ದಲಗಳಿದ್ದಲ್ಲಿಗೆ ಹೋಗಿ ವರದಿ ಮಾಡುತ್ತೇವೆ. ಜನರಿಗೆ ಏನು ಸಂಕಷ್ಟವಿದೆ ಎನ್ನುವುದನ್ನು ಹೇಳುತ್ತೇವೆ. ಆದರೆ ನಮ್ಮ ಮನೆಯಲ್ಲಿಯೇ ಹಲವಾರು ಸಮಸ್ಯೆಗಳು ಹೊದ್ದು ಮಲಗಿದ್ದರೂ ಅವುಗಳತ್ತ ನೋಡುವುದಿಲ್ಲ. ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಹೀಗಿರುವಾಗ ಆಕಸ್ಮಿಕವಾಗಿ ನಾವು ಇಹಲೋಕ ತ್ಯಜಿಸಿದರೆ ನಮ್ಮ ಕುಟುಂಬಗಳು ಅತಂತ್ರವಾಗುತ್ತವೆ. ನಾನು ಪತ್ರಕರ್ತನಾಗಿ ಅತ್ಯಂತ ಕೆಳಮಟ್ಟದಿಂದ ಬೆಳೆದು ಬಂದಿದ್ದೇನೆ. ಹೀಗಾಗಿ ಪತ್ರಕರ್ತರ ಸಂಕಷ್ಟಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ನಮ್ಮ ತಾಯಿ ತೀರಿ ಹೋಗುವ ಮುನ್ನ ಸಾಧ್ಯವಾದರೆ ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯ ಮಾಡು ಎಂದು ಹೇಳಿದ್ದರು. ಈ ಫೌಂಡೇಶನ್ ಮೂಲಕ ಅವರು ಹೇಳಿದಂತೆ ನಡೆಯುತ್ತಿದ್ದೇನೆ” ಎಂದರು.

ವಾರ್ತಾ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ದಿಲೀಪ ಕುರುಂದವಾಡೆ ಅವರ ಎಸ್.ಎಸ್.ಫೌಂಡೇಶನ್ ಕಾರ್ಯವನ್ನು ಶ್ಲಾಘಿಸಿದರು. ಕುರುಂದವಾಡೆ ಅವರು ನಿಸ್ವಾರ್ಥದಿಂದ ಫೌಂಡೇಶನ್ ಸ್ಥಾಪಿಸಿ ನೊಂದವರ ಕಷ್ಟಕ್ಕೆ ಸಹಾಯವಾಗುತ್ತಿದ್ದಾರೆ. ನೊಂದವರನ್ನು ಕಂಡು ಬರೀ ಬಾಯುಪಚಾರಕ್ಕೆ ಅನುಕಂಪ ತೋರಿಸಿ ಹೋಗುವವರ ಮಧ್ಯೆ ಕುರುಂದವಾಡೆ ಅವರು ನಿಜಕ್ಕೂ ನೊಂದವರ ನೆರವಿಗೆ ಮುಂದಾಗಿರುವುದು ಶ್ಲಾಘನೀಯ. ಅವರ ಈ ಒಳ್ಳೆಯ ಕಾರ್ಯಕ್ಕೆ ತಾವೂ ಕೈಜೋಡಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ‘ಇನ್ ಬೆಳಗಾವಿ’ ಸಂಪಾದಕ ರಾಜಶೇಖರ ಪಾಟೀಲ ಅವರು ಎಸ್.ಎಸ್.ಫೌಂಡೇಶನ್ ಗೆ ರೂ.51 ಸಾವಿರ ವೈಯಕ್ತಿಕ ದೇಣಿಕೆ ಘೋಷಣೆ ಮಾಡಿದರು. ಹಿರಿಯ ಪತ್ರಕರ್ತ ವಿಲಾಸ ಜೋಶಿ ಮಾತನಾಡಿ, ದಿಲೀಪ ಕುರುಂದವಾಡೆ ಅವರ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಸಹಕಾರ ಇರಲಿದೆ ಎಂದರು. ಮಾಜಿ ಮೇಯರ್ ವಿಜಯ ಮೋರೆ, ಪತ್ರಕರ್ತ ಸಹದೇವ ಮಾನೆ, ಛಾಯಾಗ್ರಾಹಕ ಡಿ.ಬಿ.ಪಾಟೀಲ ಮಾತನಾಡಿದರು.

ಶ್ರೀಕಾಂತ ಕುಬಕಡ್ಡಿ, ಅರುಣ ಪಾಟೀಲ, ಪುಂಡಲಿಕ ಬಾಳೋಜಿ ವೇದಿಕೆ ಮೇಲಿದ್ದರು.ಮೆಹಬೂಬ್ ಮಕಾನದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ತಾರಿಹಾಳ ಕಾರ್ಯಕ್ರಮ ನಿರೂಪಿಸಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *