ಬೆಳಗಾವಿ
ತುಕ್ಕಾನಟ್ಟಿ ಗ್ರಾಮದಲ್ಲಿ ಜೂ.2ರಂದು ನಡೆದ ತುರ್ತು ಗ್ರಾಮ ಸಭೆಯಲ್ಲಿ ಆಯ್ಕೆಯಾದ ಆಶ್ರಯ ಮನೆಗಳನ್ನು ತಡೆಹಿಡಿಯುವಂತೆ ಆಗ್ರಹಿಸಿ ಬುಧವಾರ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತುಕ್ಕಾನಟ್ಟಿ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಆಶ್ರಯಮನೆಗಳ ಆಯ್ಕೆಯಲ್ಲಿ ತಮಗೆ ಬೇಕಾದ ವ್ಯಕ್ತಿಗಳಿಗೆ ಮನೆ ಹಂಚಿಕೆ ಮಾಡಿದ್ದಾರೆ. ಬಡತನದ ರೇಖೆಗಿಂತ ಕೆಳಗಿನ ಕುಟುಂಬದವರು ನಾಲ್ಕೈದು ಸಲ ಅರ್ಜಿ ಸಲ್ಲಿಸಿದರೂ ಮನೆ ಹಂಚಿಕೆ ಮಾಡದಿರುವುದು ಹಲವು ಅನುಮಾನಲ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಐದರಿಂದ ಹತ್ತು ಎಕರೆ ಜಮೀನು ಹೊಂದಿದ ಕುಟುಂಬದವರ ಕಡೆಯಿಂದ 30 ಸಾವಿರ ರು. ಹಣ ಪಡೆದು ಆಶ್ರಯ ಮನೆ ಹಂಚಿಕೆ ಮಾಡಿದ್ದಾರೆ. ಒಂದೇ ಕುಟುಂಬದವರಿಗೆ ಎರಡು ಮನೆಗಳನ್ನು ಹಂಚಿಕೆ ಮಾಡಿದ್ದಲ್ಲದೆ, ಓರ್ವ ವಿದ್ಯಾರ್ಥಿಯ ಹೆಸರಿನಲ್ಲಿ ಮನೆ ಹಂಚಿಕೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಹಲವಾರು ವರ್ಷಗಳಿಂದ ಆಶ್ರಯ ಮನೆ ಮಂಜೂರಾತಿಗಾಗಿ ಗ್ರಾಮಸ್ಥರು ಹೋರಾಟ ನಡೆಸಿದ್ದೇವೆ. ನಾವು ಕಡು ಬಡವರು ಹಲವಾರು ಸಲ ಗ್ರಾಪಂನಲ್ಲಿ ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸಿದ್ದೇವು. ಅರ್ಹರಿಹೆ ಮನೆ ಹಂಚಿಕೆ ಮಾಡುವ ಬದಲು ಅಕ್ರಮವಾಗಿ ಶ್ರೀಮಂತರಿಗೆ ಮನೆ ಹಂಚಿಕೆ ಮಾಡಿರುತ್ತಾರೆ. ಕೂಡಲೇ ಅದನ್ನು ತಡೆ ಹಿಡಯಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಭೀಮಪ್ಪ ಗಡಾದ, ಗೌರಿ ಹಮ್ಮನ್ನವರ, ರೂಪಾ ಬಬಲೆನ್ನವತ, ಯಲ್ಲಪ್ಪಾ ಮರ್ದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.