ಬೆಳಗಾವಿ-ಸಿಎಂ ಖುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ರಾಮಯ್ಯ ಸಹನೆ ಕಳೆದುಕೊಂಡಿದ್ದು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸತ್ತಿದ್ದಾರೆ,ಮುಖ್ಯಮಂತ್ರಿಗಳ ಅಸಭ್ಯ ವರ್ತನೆಯಿಂದ ಅಧಿಕಾರಿ ವರ್ಗ ಭೀತಿಯ ವಾತಾವರಣದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಎದರಾಗಿದೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು,ಮುಖ್ಯಮಂತ್ರಿಗಳ ವರ್ತನೆಯಿಂದ,ಗೌರವಸ್ಥ, ಕ್ರಿಯಾಶೀಲ, ನಿಷ್ಠಾವಂತ ಸರ್ಕಾರಿ ಅಧಿಕಾರಿಗಳಿಗೆ ಅವಮಾನ ಆಗತ್ತಿದೆ. ಸಾರ್ವಜನಿಕವಾಗಿ ಬಹಿರಂಗ ವೇದಿಕೆಯಲ್ಲೇ ಅಪಮಾನಿಸುವುದು, ಏಕವಚನದಲ್ಲಿ ಸಂಬೋಧಿಸುವುದು, ಶ್ರದ್ಧೆಯಿಂದ ಕರ್ತವ್ಯ ನಿಭಾಯಿಸುವ ಅಧಿಕಾರಿಗಳು ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯುವ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ.ರಾಜ್ಯದಲ್ಲಿ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಸರ್ಕಾರದ ವಿರುದ್ಧ ಬಂಡೆದ್ದು ಸಿ ಎಂ ಬದಲಾವಣೆಯ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿದ್ದು ಸರ್ಕಾರ ದಿವಾಳಿಯಾಗುವ ಹಂತ ತಲುಪಿದೆ ಎಂದು ಸುಭಾಷ್ ಪಾಟೀಲ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಹನೆ ಕಳೆದುಕೊಂಡ ಮುಖ್ಯಮಂತ್ರಿಗಳಿಗೆ ಬೆಳಗಾವಿ ಮಹಾನಗರದಲ್ಲಿ ಪೋಲೀಸ್ ಕಮಿಷನರ್ ಇದ್ದಾರೆ ಅನ್ನೋದು ಗೊತ್ತಿರಲಿಲ್ಲ, ಏ ಇಲ್ಲಿರುವ ಎಸ್ ಪಿ ಯಾರು ? ಎಂದು ಕೇಳಿದ ಸಿಎಂ ಬಂದೋಬಸ್ತಿಗೆ ಧಾರವಾಡದಿಂದ ಬೆಳಗಾವಿಗೆ ಬಂದಿದ್ದ ಖಡಕ್ ಪೋಲೀಸ್ ಅಧಿಕಾರಿ ನಾರಾಯಣ ಭರಮಣಿ ಅವರ ಮೇಲೆ ಕೈ ಮಾಡಿ ಮುಖ್ಯಮಂತ್ರಿ ಸಿದ್ರಾಮಯ್ಯ ಗೂಂಡಾವರ್ತನೆ ಮಾಡಿದ್ದು ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿರುವ ಪೋಲೀಸ್ ಅಧಿಕಾರಿ ಈಗ ರಾಜೀನಾಮೆ ನೀಡಲು ಮುಂದಾಗಿದ್ದು ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಗೆ ಕನ್ನಡಿಯಾಗಿದೆ ಎಂದು ಸುಭಾಷ್ ಪಾಟೀಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.