ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಧ್ವನಿವರ್ಧಕಗಳ ಬಳಕೆ ನಿಯಂತ್ರಿಸಲು ಹೊಸ ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲಿ ಪರಿಷ್ಕೃತ ಆದೇಶ ಹೊರಬೀಳಲಿದ್ದು, ಆ ಬಳಿಕ ನಿಗದಿತ ಮಿತಿಗಿಂತ ಹೆಚ್ಚಿನ ಧ್ವನಿ ಹೊರಡಿಸುವ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ.
ಮಸೀದಿಗಳಲ್ಲಿ ಆಜಾನ್ ಕೂಗುವ ಧ್ವನಿವರ್ಧಕಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಸೇರಿದಂತೆ ಹಿಂದುತ್ವ ಪರ ಸಂಘಟನೆಗಳು ಅಭಿಯಾನ ನಡೆಸಲು ಮುಂದಾಗಿವೆ. ಆಜಾನ್‌ಗೆ ಪ್ರತಿಯಾಗಿ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್ ಚಾಲೀಸಾ ಪಠಣವೂ ಕೆಲವೆಡೆ ಆರಂಭವಾಗಿದೆ.
ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧ್ವನಿವರ್ಧಕಗಳ ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಚರ್ಚಿಸಿದರು. ಸುಪ್ರೀಂಕೋರ್ಟ್ ಆದೇಶ, ನಂತರ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಹಾಗೂ 2002ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಆಧಾರವಾಗಿಟ್ಟುಕೊಂಡು ಹೊಸ ಸುತ್ತೋಲೆ ಹೊರಡಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ‘ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆ ನಿಯಂತ್ರಣ ಕುರಿತು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. 2002ರಲ್ಲಿ ರಾಜ್ಯ ಸರ್ಕಾರವೂ ಒಂದು ಆದೇಶ ಹೊರಡಿಸಿತ್ತು. ಅವುಗಳನ್ನು ಅತ್ಯಂತ ಸೌಹಾರ್ದಯುತವಾಗಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕವನ್ನು ಹೇಗೆ ಬಳಸಬೇಕು ಎಂಬುದಕ್ಕೆ ಸುಪ್ರೀಂಕೋರ್ಟ್ ಆದೇಶವಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸಿನಂತೆ ಕೇಂದ್ರ ಸರ್ಕಾರವೂ ಆದೇಶ ಹೊರಡಿಸಿದೆ. ವಿವಿಧ ಸಂದರ್ಭ ಹಾಗೂ ಧ್ವನಿವರ್ಧಕಗಳಲ್ಲಿ ಎಷ್ಟು ಪ್ರಮಾಣದ (ಡೆಸಿಬಲ್) ಶಬ್ದ ಹೊರಡಿಸಲು ಅನುಮತಿ ಇದೆ ಎಂಬ ಕೋಷ್ಠಕವೂ ಇದೆ. ಅವುಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ 2002ರಲ್ಲಿ ಹೊರಡಿಸಿದ್ದ ಆದೇಶವೂ ಇದೆ. ಎಲ್ಲವನ್ನೂ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಆದೇಶದ ಅನುಷ್ಠಾನಕ್ಕೆ ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಬೇಕು. ವರ್ಷವಿಡೀ ಧ್ವನಿವರ್ಧಕ ಬಳಸುವವರು ಅನುಮತಿ ಪಡೆಯುವುದು ಕಡ್ಡಾಯ. ಈ ಎಲ್ಲ ಅಂಶಗಳನ್ನೂ ಜಾರಿಗೆ ತರಲು ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದರು.
‘ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸುಪ್ರೀಂಕೋರ್ಟ್ ಆದೇಶದ ಅನುಷ್ಠಾನ ಆಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿ ಮಾಡಲಾಗುವುದು. ಆದೇಶವನ್ನು ಎಲ್ಲರೂ ಪಾಲಿಸಬೇಕು. ಈ ವಿಚಾರದಲ್ಲಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು’ ಎಂದು ಬೊಮ್ಮಾಯಿ ಹೇಳಿದರು.