ಬೆಳಗಾವಿ : ಕರ್ನಾಟಕ ರಾಜಕೀಯದ ಮಟ್ಟಿಗೆ ರಾಜಾಹುಲಿ ಎಂದೇ ಖ್ಯಾತವಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ 80ರ ಇಳಿವಯಸ್ಸಿನಲ್ಲೂ ಪಕ್ಷ ಸಂಘಟನೆಗೆ ಅವರಿಗಿರುವ ತುಡಿತ ಪ್ರಶ್ನಾತೀತ. ಇದಕ್ಕೆ ಇಂದು ನಗರದಲ್ಲಿ ನಡೆದ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಆರಂಭಕ್ಕು ಮುಂಚೆ ನಡೆದ ಮೆರವಣಿಗೆ ಸಾಕ್ಷಿಯಾಯಿತು.
ರೈತಮುಖಂಡ ಎಂದೇ ಖ್ಯಾತಿ ಪಡೆದ ಬಿಎಸ್ ವೈ ಬೆಳಗಾವಿಯಲ್ಲಿ ರವಿವಾರ ನಡೆದ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿಗೆ ಚಕ್ಕಡಿಯಲ್ಲಿ ಆಗಮಿಸಿ ಗಮನ ಸೆಳೆದರು. ಎಲ್ಲರೂ ಮೆರವಣಿಗೆಗೆ ಚಾಲನೆ ನೀಡಿ ಕಾರಲ್ಲಿ ಹೋಗುತ್ತಾರೆ ಎಂದೇ ಭಾವಿಸಿದ್ದರು. ಆದರೆ, ಇಳಿವಯಸ್ಸು ಲೆಕ್ಕಿಸದೆ ಚಕ್ಕಡಿ ಏರಿ ರೈತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು. ಅವರಿಗೆ ಬೆಳಗಾವಿ ಉತ್ತರದ ಶಾಸಕ ಅನಿಲ್ ಬೆನಕೆ ಸಾಥ್ ನೀಡಿ ಹಗ್ಗ ಹಿಡಿದು ಚಕ್ಕಡಿ ನಡೆಸಿದರು.
ಮುಂದಿನ ತಿಂಗಳು 80 ವರ್ಷಕ್ಕೆ ಪಾದಾರ್ಪಣೆ ಮಾಡಲಿರುವ ಬಿ.ಎಸ್. ಯಡಿಯೂರಪ್ಪ ಅವರಲ್ಲಿರುವ ಉತ್ಸಾಹ ಗಮನಿಸಿದ ಬಿಜೆಪಿ ಕಾರ್ಯಕರ್ತರು ರೋಮಾಂಚನಗೊಂಡರು.
ಮೆರವಣಿಗೆ ಬಸವೇಶ್ವರ ವೃತ್ತದಿಂದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿರುವ ಮಯೂರ ರೆಸಿಡೆನ್ಸಿವರೆಗೆ ಸಾಗಿತು. ಈ ವೇಳೆತಮ್ಮ ಅಚ್ಚುಮೆಚ್ಚಿನ ಕಾರ್ಯಕರ್ತರ ಪಡೆಯತ್ತ ಯಡಿಯೂರಪ್ಪ ಕೈಬೀಸಿದರು.
ಸರ್ಕಾರ ರಚನೆ ವೇಳೆ ಹಸಿರು ಶಾಲು ಹಾಕಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್ ವೈ, ದೇಶದಲ್ಲಿ ಪ್ರಥಮ ಕೃಷಿ ಬಜೆಟ್ ಮಂಡಿಸಿದ ಖ್ಯಾತಿ ಹೊಂದಿದ್ದು, ಮತ್ತೊಮ್ಮೆ ರೈತರ ಬಗ್ಗೆ ತಮಗಿರುವ ಕಾಳಜಿ ತೋರ್ಪಡಿಸಿದರು.