Breaking News

ನದಿ, ಹಳ್ಳ ,ದಾಟಲು ಖಾನಾಪೂರದಲ್ಲಿ ಕಿರುಸೇತುವೆ ನಿರ್ಮಾಣಕ್ಕೆ ಚಿಂತನೆ-ಜಾರಕಿಹೊಳಿ

ಬೆಳಗಾವಿ, ): ಮಳೆಗಾಲದಲ್ಲಿ ಖಾನಾಪುರ ಸೇರಿದಂತೆ ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ನದಿ ದಾಟಲು ಅನುಕೂಲವಾಗುವಂತೆ ಕಿರುಸೇತುವೆಗಳನ್ನು ನಿರ್ಮಿಸುವ ಬಗ್ಗೆ ವಿಶೇಷ ಯೋಜನೆಯನ್ನು ಜಾರಿಗೆ ತರುವ ಚಿಂತನೆ ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾಮಕ್ಜೆ ಭೇಟಿ ನೀಡಿ ಮನೆಹಾನಿಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ನದಿ ದಾಟಲು ಅನುಕೂಲವಾಗುವಂತೆ ಐದರಿಂದ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಕಿರುಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಅದೇ ರೀತಿ ಖಾನಾಪುರ ತಾಲ್ಲೂಕಿನಲ್ಲಿ ಸೇತುವೆ ನಿರ್ಮಾಣಕ್ಕೆ ವಿಶೇಷ ಅಭಿಯಾನ ಮಾದರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು

ಮನೆಹಾನಿ-ಹೆಚ್ಚಿನ ಪರಿಹಾರಕ್ಕೆ ಚಿಂತನೆ:

ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಸದ್ಯಕ್ಜೆ ಮಾರ್ಗಸೂಚಿ ಪ್ರಕಾರ ಪರಿಹಾರವನ್ನು ನೀಡಲಾಗುತ್ತಿದೆ. ಸಂಪೂರ್ಣವಾಗಿ ಕುಸಿದಿರುವ ಮನೆಗಳ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನು ನೀಡುವ ಬಗ್ಗೆ ಸರಕಾರದ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ಸದ್ಯಕ್ಜೆ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ನವೆಂಬರ್ ಬಳಿಕ ರಸ್ತೆ ನಿರ್ಮಾಣದ ಕುರಿತು ಪರಿಶೀಲಿಸಲಾಗುವುದು ಎಂದರು.

ಖಾನಾಪುರದಲ್ಲಿ 87 ಮನೆ ಭಾಗಶಃ ಕುಸಿತ:

ಖಾನಾಪುರ ತಾಲ್ಲೂಕಿನಲ್ಲಿ 87 ಮನೆಗಳು ಭಾಗಶಃ ಕುಸಿದಿವೆ. ನಾಲ್ಕು ಸಂಪೂರ್ಣವಾಗಿ ಕುಸಿದಿದ್ದು, ನಾಲ್ಕು ಮನೆಗಳು ಸಂಪೂರ್ಣವಾಗಿ ಕುಸಿದಿವೆ ಎಂದು ಮಾಹಿತಿ ನೀಡಿದ ಸಚಿವರು, ಮಳೆಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಹಾನಿಯ ಪ್ರಮಾಣ ಕೂಡ ಹೆಚ್ಚಾಗಬಹುದು ಎಂದು ತಿಳಿಸಿದರು.

ಸಂಭವನೀಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿರುತ್ತದೆ. ವೇದಗಂಗಾ-ದೂಧಗಂಗಾ ಸೇರಿದಂತೆ ಎಲ್ಲ ನದಿಗಳ ಒಳಹರಿವು ಪ್ರಮಾಣದ ಮೇಲೆ ನಿಗಾವಹಿಸಲಾಗಿದೆ ಎಂದರು.
ಆಲಮಟ್ಟಿ ಜಲಾಶಯ ಭರ್ತಿಯಾದ ಬಳಿಕ ಒಳ ಹರಿವು ಆಧರಿಸಿ ಅದೇ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಮನೆಹಾನಿ ಪರಿಹಾರ ಚೆಕ್ ವಿತರಣೆ:

ಖಾನಾಪುರ ತಾಲ್ಲೂಕಿನ ಭೂರಣಕಿ ಗ್ರಾಮದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿದಿರುವುದನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಎರಡು ಕುಟುಂಬಗಳಿಗೆ ತಲಾ 1.20 ಲಕ್ಷ ರೂಪಾಯಿ ಪರಿಹಾರದ ಚೆಕ್ ಗಳನ್ನು ವಿತರಿಸಿದರು.
ಖೈರುನ್ನೀಸಾ ಹೇರೆಕರ ಹಾಗೂ ಗೋಪಾಲ್ ತಾರೋಡಕರ್ ಕುಟುಂಬದ ಸದಸ್ಯರು ಪರಿಹಾರದ ಚೆಕ್ ಸ್ವೀಕರಿಸಿದರು.

ಪರಿಹಾರದ ಚೆಕ್ ಜತೆಗೆ ಅಕ್ಕಿ, ಬೆಲ್ಲ, ಚಹಾಪುಡಿ ಸೇರಿದಂತೆ ದೈನಂದಿನ ಬಳಕೆಗೆ ಅಗತ್ಯವಿರುವ ಆಹಾರ ಕಿಟ್ ಗಳನ್ನು ಕೂಡ ಸಂತ್ರಸ್ತ ಕುಟುಂಬಗಳಿಗೆ ನೀಡಲಾಯಿತು.

ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಉಪ ವಿಭಾಗಾಧಿಕಾರಿ ರಾಜೇಶ್ ನಾಯಕ, ತಹಶಿಲ್ದಾರ ಪ್ರಕಾಶ್ ಗಾಯಕವಾಡ ಮತ್ತಿತರರು ಉಪಸ್ಥಿತರಿದ್ದರು.
ಇದಾದ ಬಳಿಕ ಭೂರಣಕಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ಗ್ರಾಮಸ್ಥರ ಅಹವಾಲು ಕೇಳಿದರು.
***

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *