ಕಬ್ಬಿನ ಬಾಕಿ ಬಿಲ್ ಬಾಕಿ ವಸೂಲಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ
—————————————————————-
ಹೆಚ್ಚಿನ ದರ ಲಿಖಿತ ಒಡಂಬಡಿಕೆಗೆ ಸಚಿವ ಸಿ.ಟಿ.ರವಿ ಮನವಿ
ಬೆಳಗಾವಿ,
ರಾಜ್ಯದಲ್ಲಿ ೬೯ ಕಾರ್ಖಾನೆಗಳ ಪೈಕಿ ೬೧ ಕಾರ್ಖಾನೆಗಳು ಕಬ್ಬು ಅರಿಯುವಿಕೆ ಆರಂಭಿಸಿಭಿವೆ. ಎಫ್.ಆರ್.ಪಿ. ಪ್ರಕಾರ ೧೧೯೪೮ ಕೋಟಿ ಬಿಲ್ ಬಾಕಿ ಇತ್ತು. ಇದುವರೆಗೆ ಒಟ್ಟಾರೆ ೧೨೦೫೫ ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಸಕ್ಕರೆ ಇಲಾಖೆಯ ಸಚಿವರಾದ ಸಿ.ಟಿ.ರವಿ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ(ಡಿ.೨೦) ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಟ್ಟು ೮ ಕಾರ್ಖಾನೆಗಳು ೩೯ ಕೋಟಿ ಬಾಕಿ ಉಳಿಸಿಕೊಂಡಿವೆ. ಇಳಿದಂತೆ ಶೇ. ೯೯.೫೦ ಕಾರ್ಖಾನೆಗಳು ಬಿಲ್ ಪಾವತಿಸಿವೆ. ಕಬ್ಬು ಅರಿಯುವ ಮುಂಚೆ ಸಂಪೂರ್ಣ ಬಾಕಿ ಪಾವತಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನಿಜಲಿಂಗಪ್ಪ ಸಂಸ್ಥೆಗೆ ೨ ಕೋಟಿ ನೆರವು ನೀಡಲಾಗಿದೆ. ಆಸ್ಟ್ರೇಲಿಯಾದ ಮಾದರಿಯಲ್ಲಿ ಸಕ್ಕರೆ ಪ್ರಮಾಣ ಅಳೆಯುವ ಯಂತ್ರ ಅಳವಡಿಸಿಕೊಂಡರೆ ಕಬ್ಬಿನಲ್ಲಿರುವ ಸಕ್ಕರೆ ಪ್ರಮಾಣ ತಿಳಿಯುವುದು ಸಾಧ್ಯ.
ಸಕ್ಕರೆ ಪ್ರಮಾಣ ತಿಳಿಯಲು ನೂತನ ಯಂತ್ರ ಅಳವಡಿಕೆಗೆ ನೀತಿಯಲ್ಲಿ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ಅಖಿಲ ಭಾರತ ಮಟ್ಟದ ಸಭೆಯಲ್ಲಿ ಪ್ರಸ್ತಾವ ಸಲ್ಲಿಸಲಾಗುವುದು.
ಪ್ರವಾಹದಿಂದ ೬೬ ಲಕ್ಷ ಟನ್ ಇಳುವರಿ ಕಡಿಮೆ ನಿರೀಕ್ಷೆಯಿದ್ದು, ರೈತರಿಗೆ ಹೆಚ್ಚಿನ ದರ ನೀಡಲು ಕಾರ್ಖಾನೆಗಳು ಮುಂದಾಗಬಹುದು.
ಲಿಖಿತ ಒಡಂಬಡಿಕೆಗೆ ಮನವಿ:
ಎಫ್.ಆರ್.ಪಿಗಿಂತ ಹೆಚ್ಚಿನ ಘೋಷಣೆ ಮಾಡುವ ಕಾರ್ಖಾನೆಗಳ ಜತೆ ರೈತರು ದರ ಘೋಷಣೆ ಬಗ್ಗೆ ಲಿಖಿತ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ಸಿ.ಟಿ.ರವಿ ಮನವಿ ಮಾಡಿಕೊಂಡರು.
ಒಡಂಬಡಿಕೆ ಮಾಡಿಕೊಂಡರೆ ಬಾಕಿ ವಸೂಲಿಗೆ ಕಾನೂನಿನ ಮಾನ್ಯತೆ ಸಿಗಲಿದೆ. ಆದ್ದರಿಂದ ರೈತರು ಕಡ್ಡಾಯವಾಗಿ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದರು.
ಫಸಲ್ ಭಿಮಾ ಯೋಜನೆಗೆ ಕಬ್ಬು ಮತ್ತು ಕಾಫಿ ಬೆಳೆಯನ್ನು ಸೇರ್ಪಡೆಗೊಳಿಸಲು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಗೊಳಿಸಲು ನಿರ್ಧಾರ.
ಪ್ರವಾಹದಿಂದ ಬೆಳೆಹಾನಿಗೆ ಇದುವರೆಗೆ ಪ್ರತಿ ಹೆಕ್ಟೇರಿಗೆ ೧೮ ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿ
೧೮ ಸಾವಿರ ರೂಪಾಯಿ ಜತೆ ೧೦ ಸಾವಿರ ಸೇರಿಸಿ ಒಟ್ಟು ೨೮ ಸಾವಿರ ಪ್ರತಿ ಹೆಕ್ಟೇರ್ ಗೆ ಪರಿಹಾರ ನೀಡಲಾಗುತ್ತದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
****
ಪೌರತ್ವ ಕಾಯಿದೆ: ಭಾರತೀಯರಿಗೆ ತೊಂದರೆಯಿಲ್ಲ-ಸಿ.ಟಿ.ರವಿ
ಬೆಳಗಾವಿ, ಡಿ.೨೦(ಕರ್ನಾಟಕ ವಾರ್ತೆ): ಪೌರತ್ವ ಕಾಯಿದೆ ಜಾರಿಯಿಂದ ಮುಸಲ್ಮಾನರೂ ಸೇರಿದಂತೆ ೧೩೦ ಕೋಟಿ ಭಾರತೀಯರಿಗೆ ಯಾವುದೇ ತೊಂದರೆಯಿಲ್ಲ ಎಂದು ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದರು.
ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದ ನಿರಾಶ್ರೀತರಿಗೆ ಆಶ್ರಯ ನೀಡುವುದು ಕಾಯ್ದೆಯ ಉದೇಶವಾಗಿದೆ.
ಕಾಯ್ದೆ ಸಂವಿಧಾನಬಾಹಿರ ಆಗಿದ್ದರೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಿ. ಕಾಯ್ದೆ ವಿರುದ್ದ ವದಂತಿಗಳನ್ನು ಪಸರಿಸಿ ಶಾಂತಿ-ಸುವ್ಯವಸ್ಥೆಗೆ ಭಂಗ ತರಲು ಕೆಲವು ಪಿತೂರಿ ನಡೆಸಿದ್ದಾರೆ.
ಚಳವಳಿ ನೆಪದಲ್ಲಿ ಹಿಂಸಾಚಾರ ನಡೆಸಲಾಗುತ್ತಿದ್ದು, ಕೋಮುಭಾವನೆ ಕೆರಳಿಸುವ ಕೆಲಸ ಮಾಡಲಾಗುತ್ತಿದೆ.
ಸಂಚಿಗೆ ಬಲಿಯಾಗಿ ಹಿಂಸಾಚಾರಕ್ಕೆ ಇಳಿದವರು ಇದನ್ನು ಅರಿತುಕೊಳ್ಳಬೇಕು. ಹಿಂಸಾಚಾರವನ್ನು ಪ್ರಜಾಪ್ರಭುತ್ವ ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಪ್ರಚೋದಿಸುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕಳಸಾ-ಬಂಡೂರಿ ಯೋಜನೆಗೆ ಕೊಟ್ಟಿದ್ದ ಅನುಮತಿಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಆದ್ದರಿಂದ ಕೇಂದ್ರಕ್ಕೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮನವರಿಕೆ ಮಾಡಿಕೊಟ್ಟು ಅನುಮತಿ ಪಡೆಯಲು ಪ್ರಯತ್ನಿಸಡಲಾಗುವುದು ಎಂದು ಸಿ.ಟಿ.ರವಿ ತಿಳಿಸಿದರು.
***