ಬೆಳಗಾವಿ-ರಾಜ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ತಮ್ಮ ಬೆಂಬಲಿಗರನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳ ಮಾಡಿಸಿ ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಗಾವಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಕೇವಲ ರಮೇಶ ಜಾರಕೀಹೊಳಿ, ಲಕ್ಷ್ಮೀ ಹೆಬ್ಬಾಳಕರ ಅವರ ಮೇಲಷ್ಟೆ ಐಟಿ ದಾಳಿ ಏಕೆ? ಪ್ರಭಾಕರ ಕೋರೆ ಹತ್ತೀರ ದುಡ್ಡಿಲ್ವಾ? ಯಡೂರಪ್ಪಾ ಲೂಟಿ ಹೊಡೆದಿಲ್ವಾ? ಸುರೇಶ ಅಂಗಡಿ, ಜಗದೀಶ ಶೆಟ್ಟರ ಅವರ ಮೇಲೆ ಏಕೆ ಐಟಿ ದಾಳಿ ಆಗೋಲ್ಲ? ಎಂದು ಪ್ರಶ್ನೀಸಿದ ಅವರು ಐಟಿ ಇಲಾಖೆ ಇರೋದೆ ದಾಳಿ ಮಾಡೋದಕ್ಕೆ, ಆದರೆ ಒಂದೇ ಪಕ್ಷದವರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ಮಾಡುವುದು ಸೇಡಿನ ರಾಜಕೀಯ ಎಂದು ಸಿಎಂ ಸಿದ್ಧರಾಮಯ್ಯ ಕಿಡಿ ಕಾರಿದರು.
ಬದಾಮಿಯಿಂದ ಸ್ಪರ್ಧೆ ಮಾಡಿರುವುದು ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಭೀತಿಯಿಂದಲ್ಲ, ಉತ್ತರ ಕರ್ನಾಟಕದ ನಾಯಕರು ಈ ಭಾಗದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದರು. ಜೊತೆಗೆ ಹೈ-ಕಮಾಂಡ್ ಕೂಡ ಸೂಚನೆ ನೀಡಿದ ಹಿನ್ನಲೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿರಲಿಲ್ವಾ ಎಂದು ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಬಹುಮತ ಸಾಧಿಸುವುದು ನಿಶ್ಚಿತ ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದ್ದು, ಸ್ಥಿರ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ. ನಾವಂತೂ ಕೀಳು ಮಟ್ಟದ ರಾಜಕೀಯ ಮಾಡುವುದಿಲ್ಲ. ವ್ಯಯಕ್ತಿವಾಗಿ ಯಾರೋಬ್ಬರ ತೇಜೊವದೆ ಮಾಡುವುದಿಲ್ಲ. ಟೀಕಿಸುವುದಿಲ್ಲ ಆದರೆ ಬಿ.ಜೆ.ಪಿ. ನಾಯಕರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದರೆ ಅದನ್ನು ಸಹಿಸಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಅದಕ್ಕೆ ತಕ್ಕ ಉತ್ತರ ಕೊಡಲೇಬೇಕಾಗುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಪಕ್ಷ ಇನ್ನೊಂದು ಬಾರಿ ಅಧಿಕಾರಕ್ಕೆ ಬರುತ್ತದೆ. ಈ ಭಾಗದ ತಾರತಮ್ಯ ನಿವಾರಣೆಗಾಗಿ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ. ಈ ಭಾಗದ ಅಭಿವೃದ್ಧಿಗೆ ಅಗತ್ಯ ಅನುದಾನ ಕೊಡುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ಭರವಸೆ ನೀಡದರು.
ಚಾಮುಂಡೇಶ್ವರಿಯಿಂದ ಬಾದಾಮಿಯ ಬನಶಂಕರಿಗೆ ವಲಸೆಬರಲು ಕಾರಣ ಏನು ಎಂದು ಮಾದ್ಯಮ ಮಿತ್ರರು ಪ್ರಶ್ನಿಸಿದಾಗ ನನಗೆ ಜನರ ಆಶೀರ್ವಾದ ಇದೆ ಜೊತೆಗೆ ದೇವರ ಆಶೀರ್ವಾದವೂ ಇದೆ ಕೇವಲ ಆಶೀರ್ವಾದ ಇದ್ದರೆ ಸಾಲದು ಜೊತೆಗೆ ಪ್ರಯತ್ನ ಕೂಡಾ ಮಾಡಬೇಕು ಮಂತ್ರ ಹೇಳಿದರೆ ಮಾವಿನಕಾಯಿ ಉದರುತ್ತಾ? ಎಂದು ಸಿಎಂ ಮರು ಪ್ರಶ್ನೀಸಿದರು.
ಹೆಬ್ಬಾಳಕರ ಗೆಲ್ಲೋದು ನಿಶ್ಚಿತ-ಸಿಎಂ
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಗೆಲ್ಲೋದು ನಿಶ್ಚಿತ. ಖಾನಾಪೂರದಲ್ಲಿಯೂ ನಾವು ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.