ಬೆಳಗಾವಿ- ಮಾಜಿ ಸಚಿವ, ರಾಯಲ್ ಲೀಡರ್, ಕಿತ್ತೂರು ಕ್ಷೇತ್ರದ ಧನಿ ಡಿ.ಬಿ ಇನಾಮದಾರ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಒಂದು ತಿಂಗಳ ಹಿಂದೆ ಅವರ ಆರೋಗ್ಯ ಹದಗೆಟ್ಟಿಧದರಿಂದ, ಡಿ.ಬಿ ಇನಾಮದಾರ್ ಅವರನ್ನು ಬೆಂಗಳೂರಿನ ಮನಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಚಿಕಿತ್ಸೆ ಫಲಕಾರಿ ಆಗದೇ ಇಂದು ಬೆಳಗ್ಗೆ ಇಹಲೋಕವನ್ನು ತ್ಯೇಜಿಸಿದ್ದಾರೆ.
ಕಿತ್ತೂರು ಕ್ಷೇತ್ರದ ಶಾಸಕರಾಗಿ,ಹಲವಾರು ಬಾರಿ ಮಂತ್ರಿಗಳಾಗಿ, ಹಲವಾರು ದಶಕಗಳ ಕಾಲ ರಾಣಿ ಶುಗರ್ಸ್ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಿರುವ ಡಿಬಿ ಇನಾಮದಾರ್ ಕಿತ್ತೂರು ನಾಡಿನ ಧನಿ ಎಂದೇ ಖ್ಯಾತಿ ಪಡೆದಿದ್ದರು.ಪ್ರಸಕ್ತ ವಿಧಾನಸಭೆ ಚುನಾವಣೆ ಯಲ್ಲಿ ಕಿತ್ತೂರು ಕ್ಷೇತ್ರದಿಂದ ಸ್ಪರ್ದೆ .ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಅವರು,ಕಾಂಗ್ರೆಸ್ಸಿನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು.
ತಿಂಗಳ ಹಿಂದೆ ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ಮನಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು ಬೆಳಗ್ಗೆ9-00 ಗಂಟೆಗೆ ಡಿ.ಬಿ ಲಿಂಗಕ್ಕೆ ರಾಗಿದ್ದಾರೆ.ನಾಳೆ ಬುಧವಾರ ಮಧ್ಯಾಹ್ನ 2-00 ಗಂಟೆಗೆ ಅವರ ಸ್ವಗ್ರಾಮ ನೇಗಿನಹಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ರಾಜಕೀಯ ಪಯಣ…
ತಂದೆ ಬಿ. ಡಿ. ಇನಾಮದಾರ ನಿಧನಾ ನಂತರ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿರುವ ‘ರಾಣಿ ಶುಗರ್’ ಮೂಲಕ ಸಾರ್ವಜನಿಕ ರಂಗಕ್ಕೆ ಬಂದ ಡಿ. ಬಿ. ಇನಾಮದಾರ ಹೋದ ಪಕ್ಷಕ್ಕೆ ಭದ್ರ ನೆಲೆಯೊದಗಿಸಿ ಕೊಟ್ಟ ಇನಾಮದಾರ ಶುದ್ಧ ಹಸ್ತದ ಮೌಲ್ಯಾಧಾರಿತ ರಾಜಕಾರಣಿ
ಸ್ಪರ್ಧಿಸಿದ್ದ 9 ವಿಧಾನಸಭೆ ಚುನಾವಣೆಯಲ್ಲಿ 5 ಚುನಾವಣೆ ಗೆದ್ದಿದ್ದಾರೆ. 4ರಲ್ಲಿ ಸೋಲು ಅನುಭವಿಸಿದರು. ಇನಾಮದಾರ ಅವರ ಸಾಂಪ್ರದಾಯಿಕ ರಾಜಕೀಯ ವೈರಿಯಾಗಿದ್ದ ಬಾಬಾಗೌಡ ಪಾಟೀಲ ಅವರನ್ನು ಹೊರತು ಪಡಿಸಿದರೆ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಸುರೇಶ ಮಾರಿಹಾಳ, ಮಹಾಂತೇಶ ದೊಡ್ಡಗೌಡರ ಗುರು ಮತ್ತು ಮಾರ್ಗದರ್ಶಕರಾಗಿದ್ದ ಇನಾಮದಾರ ಅವರನ್ನು ಸೋಲಿಸಿದ್ದು ವಿಶೇಷ.
ಜಾತಿಕಾರಣದಲ್ಲಿ ಎಂದೂ ಗುರುತಿಸಿಕೊಳ್ಳದ ಅಜಾತಶತ್ರು ಇನಾಮದಾರ ಅವರು ಇತ್ತೀಚೆಗೆ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ವಸತಿ ಸೈನಿಕ ಶಾಲೆಯ ಚೇರಮನ್ನರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
1883ರಲ್ಲಿ ಅಂದಿನ ಜನತಾ ಪಕ್ಷದಿಂದ ಕಿತ್ತೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇನಾಮದಾರ ಅವರು ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಂ. ಎನ್. ನಾಗನೂರ ಅವರನ್ನು ಪರಾಭವಗೊಳಿಸಿದ್ದರು. ಮೊದಲ ಆಯ್ಕೆಯಲ್ಲಿಯೇ ಗಣಿ ಮತ್ತು ಭೂಗರ್ಭ ಖಾತೆ ರಾಜ್ಯ ಸಚಿವರಾದರು. ಮುಂದೆ ಓಬಂದ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಸರ್ಕಾರ ವಿಸರ್ಜಿಸಿ, ಹೊಸ ಜನಾದೇಶ ಪಡೆಯಲು ಮುಂದಾದರು. ಮತ್ತೆ ಸ್ಪರ್ಧಿಸಿದ್ದ ಇನಾಮದಾರ ಈಗಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ತಂದೆ ಬಸವಂತರಾಯ ದೊಡ್ಡಗೌಡರ ಅವರನ್ನು ಪರಾಭಗೊಳಿಸಿದ್ದರು.ಮತ್ತೆ ಹೆಗಡೆ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ಸಿಕ್ಕಿತು.
1989ರಲ್ಲಿ ರೈತಸಂಘದ ಪ್ರಭಾವ ಈ ಭಾಗದಲ್ಲಿ ದೊಡ್ಡದಾಗಿತ್ತು. ಹಳ್ಳಿ, ಹಳ್ಳಿಗಳಲ್ಲಿ ಜನಸಂಘಟನೆ ಮಾಡಿ ಬಹುದೊಡ್ಡ ಜನಶಕ್ತಿಯನ್ನು ಬಾಬಾಗೌಡ ಪಾಟೀಲ ಹೊಂದಿದ್ದರು. ಆ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಕಿತ್ತೂರು ಹಾಗೂ ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದಿಂದ ಬಾಬಾಗೌಡರು ಆಯ್ಕೆಯಾಗಿ ಬಂದಿದ್ದರು.
ಜನತಾಪಕ್ಷ ಜನತಾದಳವಾಗಿ ರೂಪಾಂತರಗೊಂಡಿತ್ತು. ನಾಯಕರ ಜೊತೆಗಿನ ಅಸಮಾಧಾನದಿಂದಾಗಿ 91ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
1994ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸಾಂಪ್ರದಾಯಿಕ ರಾಜಕೀಯ ಎದುರಾಳಿಗಳಾಗಿದ್ದರು. ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಇನಾಮದಾರ, ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದ ರೈತಸಂಘದ ಬಾಬಾಗೌಡರನ್ನು ಸೋಲಿಸಿ 89 ಚುನಾವಣೆಯ ಸೇಡು ತೀರಿಸಿಕೊಂಡಿದ್ದರು.
1999 ರಲ್ಲಿ ಮತ್ತೆ ಬಂದ ಚುನಾವಣೆಯಲ್ಲಿ ಪುನರಾಯ್ಕೆಗೊಂಡರು. ಎಸ್. ಎಂ. ಕೃಷ್ಣ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದರು. ಅನಂತರ ನಡೆದ ಪುನರ್ ರಚನೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಸಚಿವರಾಗಿ ಕೆಲಸ ಮಾಡಿದರು.2004ರಲ್ಲಿ ಇನಾಮದಾರ ಸಂಗ ತೊರೆದು ಬಿಜೆಪಿ ಸೇರಿದ್ದ ಶಿಷ್ಯ ಸುರೇಶ ಮಾರಿಹಾಳರಿಂದ ಪರಾಭವಗೊಂಡರು. 2008ರಲ್ಲೂ ಮಾರಿಹಾಳ ವಿರುದ್ಧ ಸ್ಪರ್ಧಿಸಿ ಸೋತರು. 2013ರಲ್ಲಿ ಸ್ಪರ್ಧಿಸಿ ಸೋಲಿನ ಸೇಡು ತೀರಿಸಿಕೊಂಡರು.
2018ರಲ್ಲಿ ಮತ್ತೊಬ್ಬ ಶಿಷ್ಯ ಮಹಾಂತೇಶ ದೊಡ್ಡಗೌಡರ ವಿರುದ್ಧ ಸ್ಪರ್ಧಿಸಿ ಸೋತರು. ಕಾಂಗ್ರೆಸ್ಸಿನಲ್ಲಿಯ ಭಿನ್ನಾಭಿಪ್ರಾಯ ಇನಾಮದಾರ ಸೋಲಿಗೆ ಕಾರಣವಾಗಿತ್ತು.