Breaking News

ಹೊಂದಾಣಿಕೆ ಇಲ್ಲದೆ, ಪಕ್ಷಪಾತ ವಹಿಸದೆ ನನ್ನ ಕರ್ತವ್ಯ ನಾನು ನಿರ್ವಹಿಸಿದ್ದೇನೆ

ಬೆಳಗಾವಿ-

ರಾಜಕಾರಣಿಗಳೊಂದಿಗೆ ಒಳ ಒಪ್ಪಂದಂಥ ಯಾವುದೇ ರೀತಿಯ ಹೊಂದಾಣಿಕೆಗೆ ಒಳಪಡದೆ,  ನೇಕ ಭಾಷೆ, ಸಮುದಾಯಗಳ ಸಮ್ಮಿಳತವಾದ ಬೆಳಗಾವಿಯಲ್ಲಿ ಸಾಂಸ್ಕøತಿಕ ಪಕ್ಷಪಾತ ವಹಿಸಿದೆ ಒಬ್ಬ ಸರಕಾರಿ ಅಧಿಕಾರಿಯಾಗಿ ಕಾನೂನಿನ ವ್ಯಾಪ್ತಿಗೊಳಪಟ್ಟು, ಒಂದಿಷ್ಟು ಹೃದಯ ಶ್ರೀಮಂತಿಕೆಯೊಂದಿಗೆ  ನನ್ನ  ಜವಾಬ್ದಾರಿಯನ್ನು ಒಬ್ಬ ಜಿಲ್ಲಾ ಅಧಿಕಾರಿಯಾಗಿ ನಿರ್ವಹಿಸಿದ್ದೇನೆ ಎಂದು ಪದನ್ನೋತ್ತಿ ಪಡದು ಬೆಂಗಳೂರಿಗೆ ವರ್ಗವಣೆ ಹೊಂದಿ, ತೆರಳುತ್ತಿರುವ ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ವಿನಮ್ರವಾಗಿ ನುಡಿದಿದ್ದಾರೆ. 

ನಾಲ್ಕೂವರೆ ವರ್ಷಗಳ ದೀರ್ಘಕಾಲ ಜನಾನುರಾಗಿಯಾಗಿ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳು ಇಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾದ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಎದೆ ತುಂಬಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗತ ಲಾಭಕ್ಕೆ ಮುಂದಾಗದೇ ನನಗೆ ದೊರೆತ ದೀರ್ಘ ಸಾರ್ವಜನಿಕ ಸೇವಾ ಆಡಳಿತ ಅನುಭವದ ನೆಲೆಯಲ್ಲಿ ಬೆಳಗಾವಿಯಂತಹ ದೊಡ್ಡಜಿಲ್ಲೆಯಲ್ಲಿ  ಜನತೆಯ ವಿಶ್ವಾಸಕ್ಕೆ ಬದ್ಧರಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಸಾಮಾಜಿಕ ಹಿತಾಸಕ್ತಿ ಹಾಗೂ ಸಾಮರಸ್ಯ ಕಾಯ್ದುಕೊಂಡು ಕೆಲಸ ನಿರ್ವಹಿಸಲು ನಮ್ಮಂಥ ಅಧಿಕಾರಿಗಳನ್ನು ನೇಮಕ ಮಾಡುವುದರಿಂದ ನಾವು ನಿರ್ವಹಿಸುವ ಕೆಲಸದಲ್ಲಿ ಹೆಚ್ಚುಗಾರಿಕೆ ಏನೂ ಇರದು ಎಂದು ತಮ್ಮ ಕರ್ತವ್ಯ ಪ್ರಜ್ಞೆಗೆ ಸಾಕ್ಷಿ ನುಡಿದರು.

ಜವಾಬ್ದಾರಿ ಹೊತ್ತಾಗ ವ್ಯಕ್ತಿತ್ವ ಪರಿಚಯ : ಯಾವುದೇ ಜವಾಬ್ದಾರಿಗಳನ್ನು ಪಡೆಯುದಕ್ಕಿಂತ ಮುಂಚೆ ಏನೆಲ್ಲ ಸಾಧನೆಯ ಬಗ್ಗೆ ಮಾತನಾಡುತ್ತೇವೆ. ಆದರೆ, ಅದೇ ಜವಾಬ್ದಾರಿ ನಿರ್ವಹಣೆ ಅಧಿಕಾರಿ ದೊರೆತಾದ ಅದನ್ನು ನಿರ್ವಹಿಸುವ ಸಂದರ್ಭದಲ್ಲಿ ವ್ಯಕ್ತಿಯ ನಿಜವಾದ ವ್ಯಕ್ತಿತ್ವದ ಪರಿಚಯವಾಗುತ್ತದೆ ಎಂದು ಅವರು ಹೇಳಿದರು.

ಜನತೆಯ ಹೃದಯ ಶ್ರೀಮಂತಿಕೆ : ಬೆಳಗಾವಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವಾಗ ಬೆಳಗಾವಿ ಜನತೆಯ ಹೃದಯ ಶ್ರೀಮಂತಿಕೆಯ ಅನುಭವ ನನಗಾಗಿದೆ. ನನ್ನ ಕಚೇರಿಯ ಒಳಗಡೆ ಪ್ರವೇಶಿಸುವ ಸಂದರ್ಭದಲ್ಲಿ ಗ್ರಾಮೀಣ ಭಾಗದಿಂದ ಬಂದ ಜನರು ತಮ್ಮ ಚಪ್ಪಲಿಗಳನ್ನು ಹೊರಗಡೆಯೇ ಕಳೆದಿಟ್ಟು ಒಳಬರುತ್ತಿದ್ದರು. ಆವಾಗ ಚಪ್ಪಿಲಿ ಧರಿಸಿಕೊಂಡೇ ಒಳಗೆ ಬರುವಂತೆ ಸೂಚಿಸಲು ಒಬ್ಬ ನೌಕರರನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಂಡು ಚಪ್ಪಲಿ ಸಹಿತ ಒಳಗೆ ಬರುವಂತೆ ಸೂಚಿಸಿದ್ದೇನೆ. ಒಳಬಂದಾಗ ಕುಳಿತುಕೊಳ್ಳಲು ಸಂಕೋಚಪಡುವ ಅವರಿಗೆ ಸಂಯಮದಿಂದ ಸಮಸ್ಯೆ ಆಲಿಸಿ, ಸಾಧ್ಯವಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದ್ದೇನೆ. ಪರಿಹಾರ ದೊರೆತಾದ ಮರಳಿ ಬಂದು ಥ್ಯಾಂಕ್ಸ್ ಹೇಳಿ ಋಣ ತೀರಿಸಿದ ಮುಗ್ಧರನ್ನು ಈ ನೆಲದಲ್ಲಿ ಕಂಡು ಅವರ ಪ್ರೀತಿ ಅನುಭವಿಸಿದ ಅದೃಷ್ಟವಂತ ಎಂದು ಅವರು ಸೇವಾನುಭವದ ಆತ್ಮೀಯತೆ ನೆನಪಿಸಿಕೊಂಡರು.

ಭಾಷಾ ಅಲ್ಪಸಂಖ್ಯಾತರು ಮುಖ್ಯವಾಹಿನಿಗಾಗಿ ಕಾತರ: ಬೆಳಗಾವಿಯ ನೆಲದಲ್ಲಿ ವಿವಿಧ ಭಾಷೆಗಳನ್ನಾಡುವ ಸಮುದಾಯದವರಿದ್ದಾರೆ. ಅವರೆಲ್ಲರೂ ಒಳ್ಳೆಯ ಮನಸ್ಸಿನವರೇ ಆಗಿದ್ದು, ಅವರ ಮಾತೃಭಾಷೆ ಬೇರೆಯಾಗಿರಬಹುದು ಅವರಲ್ಲೂ ಕನ್ನಡಿಗರೆ. ಅವರಿಗಾದರೂ ಪ್ರಾದೇಶಿಕ ಭಾಷಾ ಮುಖ್ಯವಾಹಿನಿಗೆ ಸೇರುವ ಆಶೆ ಆತುತರೆ ಹೊಂದಿದ್ದಾರೆ ಎಂದು ಭಾಷಾ ಅಲ್ಪಸಂಖ್ಯಾತರ ತುಡಿತವನ್ನು ಬಿಡಿಸಿದರು.

ಯಳ್ಳೂರು ಫಲಕ ತೆಗೆಸಲು ನ್ಯಾಯಾಲಯದ ಆದೇಶ ಇರಲಿಲ್ಲ: ಕೆಲ ಕಿಡಿಗೇಡಿಗಳು ಯಳ್ಳೂರು ಗ್ರಾಮದಲ್ಲಿ ನಿರ್ಮಿಸಿದಿ ಮಹಾರಾಷ್ಟ್ರ ರಾಜ್ಯ  ಎಂಬ ಫಲಕ ತೆಗೆಸಲು ಸರಕಾರಕ್ಕೆ ನ್ಯಾಯಾಲಯದ ಆದೇಶವಿರಲಿಲ್ಲ. ನ್ಯಾಯಾಲಯದ ಅದೇಶವಿಲ್ಲದೆ, ಆ ಗ್ರಾಮದ ಜನತೆಯ ಮನವೊಲಿಸಿ, ತಿಳಿಹೇಳಿ ಜಿಲ್ಲಾ ಆಡಳಿತ ಫಲಕ ತೆಗಿಸಿದೆ. ಈ ಫಲಕದ ಹಿನ್ನಲೆಯಲ್ಲಿ  ನ್ಯಾಯಾಲಯದ ಕಟ್ಟೆ ಹತ್ತಿದ್ದರಿಂದ ನ್ಯಾಯಾಲಯ ಈ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ವಿವರಣೆ ಮಾತ್ರ ಕೇಳಿತ್ತು ಹೊರತು ಆದೇಶವಿರಲಿಲ್ಲ. ಈ ಫಲಕ ತೆಗೆದ ನಂತರ ಯಳ್ಳೂರ ಗ್ರಾಮದ ಜನತೆಯೇ ಸಂತಸಪಟ್ಟು ಚಹಾಕೂಟದ ಉಪಚಾರ ಮಾಡಿ ಸಂತಸ ವ್ಯಕ್ತವ್ಯಕ್ತಪಡಿಸಿದರು ಎಂದು ಅವರು ನೆನಪಿಸಿಕೊಂಡರು.

ಬೆಳಗಾವಿ ಮಿನಿ ಇಂಡಿಯಾ : ಬೆಳಗಾವಿಯಲ್ಲಿ ಎಲ್ಲ ಭಾಷಾಗಳನ್ನಾಡುವ ಜನರಿದ್ದಾರೆ. ಎಲ್ಲ ಧರ್ಮಗಳೂ ಇಲ್ಲಿವೆ. ಭಾರತೀಯ ವೈವಿದ್ಯಮಯ ಸಂಸ್ಕøತಿ ಬೆಳಗಾವಿಯಲ್ಲಿರುವುದರಿಂದ ಇದೊಂದು ಮಿನಿ ಇಂಡಿಯಾ ಎಂದು ಎನ್. ಜಯರಾಮ್ ಬಣ್ಣಿಸಿದರು. ಇಲ್ಲಿ ಕೃಷಿ, ವಾಣಿಜ್ಯ ವ್ಯವಹಾರದ ಜೊತೆಗೆ ಗಡಿಭಾಗದ ವಿಶಿಷ್ಟ ಸಂವೇದನೆ ಇದೆ. ಇಂಥ ಸೂಕ್ಷ್ಮ ನೆಲದಲ್ಲಿ ನನ್ನ ಕರ್ತವ್ಯವನ್ನು ನಾನು ನಿರ್ವಹಿಸಿದ್ದೇನೆ ಹೊರತು ಹೆಚ್ಚಿನದು ಸಾಧಿಸಿದ್ದೇನೆ ಎಂದೆನಿಸುವುದಿಲ್ಲ ಎಂದು ಸರಕಾರಿ ಅಧಿಕಾರಿಯ ಕರ್ತವ್ಯ ಪ್ರಜ್ಞೆಯ ಬಗ್ಗೆ ತಿಳಿಸಿದರು.

ಗ್ರಾಮೀಣ ಪ್ರತಿಭೆ : ಗ್ರಾಮೀಣ ಬಡ ಕೃಷಿಕ ಕುಟುಂಬದ ಮೂಲಕದಿಂದ ಬಂದ ನಾನು ಸರಕಾರ ಸಾರ್ವಜನಿಕ ಶಾಲೆಯಲ್ಲಿಯೇ ಓದಿ ಬೆಳದವನು ಎಂದು ತಮ್ಮ ನೆಲಮೂಲ ಸಂವೇದನೆಯ ಬಗ್ಗೆ ಎನ್. ಜಯರಾಮ್ ಅವರು ಬಿಡಿಸಿಟ್ಟರು. ನಮ್ಮ ತಂದೆ- ತಾಯಿಗೆ ಏಳು ಜನ ಮಕ್ಕಳಾದ ನಮಗೆ ಕಷ್ಟಪಟ್ಟು ಓದಿಸಿದ್ದಾರೆ. ನಾನು ಜನಿಸಿದ ಊರಿಗೆ ಸರಿಯಾದ ಸಾರಿಗೆ ಸಂಪರ್ಕವೂ ಸಹಿತ ಇಲ್ಲದೆ ಹಳ್ಳಿ ಅದು. ಅಂಥ ಗ್ರಾಮೀಣ ಪ್ರದೇಶದಿಂದ ಬೆಳೆದು ಬಂದ ಹೆಮ್ಮೆ ನನಗಿದೆ ಎಂದು ಹೇಳಿದರು.

ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರ ಹರ್ಷೋದ್ಘಾರದ ಮಧ್ಯ ಅಭಿನಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತು. ವಾಹನ ಚಾಲಕರ ಸಂಘಟನೆ, ಮಾಧ್ಯಮದವರು, ಹಿರಿಯ ಗಣ್ಯರು ಜನಾನುರಾಗಿ ಅಧಿಕಾರಿ ಎನ್. ಜಯರಾಮ್ ಅವರಿಗೆ ಹೂಗುಚ್ಚ ನೀಡಿ, ಶಾಲು ಹೊದಿಸಿ, ಪ್ರೀತಿಯ ನೆನಪಿನ ಕಾಣಿಕೆಗಳನ್ನು ನೀಡಿ ಅಭಿನಂದನೆಯ ಹೊಳೆಯೇ ಹರಿಸಿದರು. ಹೃದಯ ತುಂಬಿ ಬಂದ ಎನ್. ಜಯರಾಮ್ ಅವರು ಸಂಯಮದಿಂದ ಬೆಳಗಾವಿ ಜನತೆಯೆ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಿದರು. ಅನೇಕರು ಅಭಿನಂದಪರ ಮಾತುಗಳನ್ನಾಡಿದರು. ವೇದಿಕೆಯ ಮೇಲೆ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠದ ಶ್ರೀ ಸಿದ್ರಾಮ ಮಹಾಸ್ವಾಮಿಗಳು, ನಿವೃತ್ತ ನ್ಯಾಯಾಧೀಶರಾದ ಜನದತ್ತ ದೇಸಾಯಿ, ಬೆಳಗಾವಿ ಪಾಲಿಕೆ ಆಯುಕ್ತ ಶಶಿಧರ ಕುರೇರ, ಜಿಲ್ಲಾ ಪಂಚಾಯತ್ ಸಿಇಓ ರಾಮಚಂದ್ರನ್ ಉಪಸ್ಥಿತರಿದ್ದು, ಜಯರಾಮ್ ಅವರು ಸಾಧನೆ , ಸಾರ್ವಜನಿಕ ಜನಪರ ಸೇವೆಯ ಬಗ್ಗೆ ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧನಗೌಡ ಪಾಟೀಲ ವಹಿಸಿದರು. ಅಶೋಕ ಚಂದರಗಿ ಪ್ರಾಸ್ತಾವಿಕ ಮಾತನಾಡಿದರು. ಕನ್ನಡಪರ ಸಂಘಟನೆಯ ಮುಖಂಡರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *