Breaking News
Home / Breaking News / ಕನ್ನಡ ಸಂವೇದನೆ, ಬಡ ಮಕ್ಕಳ ವೇದನೆ ಅರ್ಥೈಯಿಸಿದ ಸಂವೇದನಾಶೀಲ ಅಧಿಕಾರಿ ಎನ್. ಜಯರಾಮ್

ಕನ್ನಡ ಸಂವೇದನೆ, ಬಡ ಮಕ್ಕಳ ವೇದನೆ ಅರ್ಥೈಯಿಸಿದ ಸಂವೇದನಾಶೀಲ ಅಧಿಕಾರಿ ಎನ್. ಜಯರಾಮ್

 

*- ಡಾ. ಕೆ. ಎನ್. ದೊಡ್ಡಮನಿ*

ಯವ್ವನದ ಹುರುಪಿನಲ್ಲಿ ಗುರಿ ಸಾಧನೆಗೆ ಗುದಮುರಗಿ ಹಾಕುತ್ತ, ಸಾಮಾಜಿಕ ತುಡಿತದ ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡು, ಸಾರ್ವಜನಿಕ ಸೇವೆಗೆ ಸರಕಾರದ ಒಬ್ಬ ಉನ್ನತ ಅಧಿಕಾರಿಯಾಗಿ ಪಾದಾರ್ಪಣೆ ಮಾಡುವ ವ್ಯಕ್ತಿ ಸಾಮಾಜಿಕ ಸೂಕ್ಷ್ಮ ಸಂವೇದನೆ ಹಾಗೂ ತನ್ನ ನೆಲದ ಅಸ್ಮಿತೆ ಹೊಂದಿದ್ದರೆ ಮಾತ್ರ ಜನಾನುರಾಗ ಸಾಧಿಸಲು ಸಾಧ್ಯ. ಇಂಥ ವ್ಯಕ್ತಿ ಒಂದು ನಿರ್ಧಿಷ್ಟ ವ್ಯಾಪ್ತಿಯಲ್ಲಿ ಜನಾನುರಾಗ ಸಂಪಾದಿಸಿದ ನಂತರ ಆ ಸ್ಥಳದಿಂದ ಬೇರೆಡೆ ನಿರ್ಗಮಿಸುವಾಗ “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತ್ತಿದೆ” ಎಂಬ ಸದ್ಭಾವ ಸಾರ್ವಜನಿಕರಿಂದ ವ್ಯಕ್ತವಾಗುವುದು ಸಹಜ. ಉದ್ದಕ್ಕೂ ಸಾಮಾಜಿಕ ಜವಾಬ್ದಾರಿಯ ಬದ್ಧತೆ ಕಾಯ್ದುಕೊಂಡು ಈ ರೀತಿಯ ಜನತೆಯ ಗೌರವಕ್ಕೆ ಪಾತ್ರವಾಗುವ ಅಧಿಕಾರಿಗೆ ತನ್ನ ಕನಸುಗಳ ಕಾಮನಬಿಲ್ಲು ಎಷ್ಟು ಸುಂದರ ಎಂಬುದು ಅನುಭವಗಮ್ಯೆವಾಗುತ್ತದೆ. ಇಂಥ ಸಾಮಾಜಿಕ ಕಾಮನಬಿಲ್ಲಿನ ಕಮಾನುಕಟ್ಟಿ ಜನತೆಯ ಬದುಕಿನಲ್ಲಿ ಭರವಸೆಯ ಬಣ್ಣ ತುಂಬುವ ವ್ಯಕ್ತಿಗಳು ಅಪರೂಪ. ಅದರಲ್ಲೂ ವಿಶೇಷವಾಗಿ ಪ್ರಸ್ತುತ ಕೊಳ್ಳುಬಾಕ ಸಂಸ್ಕøತಿಯ ಭರಾಟೆಯ ಮಧ್ಯೆ ರಾಜಕೀಯ ಮತ್ತು ಸಾರ್ವಜನಿಕ ಸರಕಾರ ಸೇವಾ ವಲಯದಲ್ಲಿ ಇನ್ನೂ ಅಪರೂಪ. ಸಮಾಜ ಇಂಥವರನ್ನು ಯಾವತ್ತೂ ಅಪೇಕ್ಷಿಸುತ್ತ ಬಂದಿರುವುದು ಮಾತ್ರವಲ್ಲ, ಅಂಥವರು ದಕ್ಕಿದಾಗ ಭಾವ ತುಂಬಿ ಗೌರವಿಸುತ್ತ ಬಂದಿದೆ. ಇಂದು ಇಂಥ ವ್ಯಕ್ತಿಗಳ ಅವಶ್ಯಕತೆಯ ಸಾಮಾಜಿಕ ಹಸಿವು ಜಾಸ್ತಿಯಾಗಿದೆ. ಈ ಹಸಿವಿಗೆ ಅಷ್ಟಿಷ್ಟು ಪ್ರಾಮಾಣಿಕತೆ ದಕ್ಕಿದರೆ ಅದೇ ಮೃಷ್ಟಾನವಾಗುತ್ತದೆ.

*****

ಇಂದು ಒಬ್ಬ ಜಿಲ್ಲಾಧಿಕಾರಿ ಒಂದು ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ವರೆಗೆ ಒಂದೆಡೆ ಉಳಿದುಕೊಂಡು ಸೇವೆ ಸಲ್ಲಿಸುವುದು ಅಪರೂಪ. ಅದರಲ್ಲೂ ವಿಶೇಷವಾಗಿ ಪ್ರಾಮಾಣಿಕತೆಯಿಂದ ಗುರುತಿಸಿಕೊಳ್ಳುವ ಅಧಿಕಾರಿಗಳು  ದೀರ್ಘಕಾಲ ಉಳಿಯುವುದು ಪವಾಡವೇ ಸರಿ. ಇಂಥ ಪರಿಸ್ಥಿತಿಯ ಮಧ್ಯ, ಭಾವನಾತ್ಮಕ ಅತ್ಯಂತ ಸೂಕ್ಷ್ಮ ನೆಲ ಎಂದು ಗುರುತಿಸಿಕೊಂಡಿರುವ ಗಡಿನಾಡು ಪ್ರದೇಶ ಬೆಳಗಾವಿಯಲ್ಲಿ ಸಾರ್ವಜನಿಕ ಆಡಳಿತದ ದೀರ್ಘ ಅನುಭವ ಪಡೆದ ಎನ್. ಜಯರಾಮ್ ಅವರು, ಒಬ್ಬ ಕನ್ನಡದ ಪ್ರಾಮಾಣಿಕ ಅಧಿಕಾರಿಯಾಗಿ, ಬಡ ಮಕ್ಕಳ ಸಂವೇದಾಶೀಲರಾಗಿ ನಾಲ್ಕು ವರ್ಷಗಳ ವರೆಗೆ ಜಿಲ್ಲಾಧಿಕಾರಿಗಳಿಗಳಾಗಿ ಸುದೀರ್ಘ ಸೇವೆ ಸಲ್ಲಿಸಿ, ಪದೋನ್ನತ್ತಿಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದಾರೆ. ಇವರ ಸೇವೆಯನ್ನು ಮಾಧ್ಯಮಗಳು ಮುಕ್ತಕಂಠದಿಂದ ಹೊಗಳಿವೆ. ಕನ್ನಡಪರ ಸಂಘಟನೆಗಳು ರವಿವಾರ ಜುಲೈ 30ರಂದು ಆತ್ಮೀಯವಾದ ಸನ್ಮಾನ ಸಮಾರಂಭವನ್ನೇ ಹಮ್ಮಿಕೊಂಡಿವೆ. ಕೆಲ ಸಂಘಟನೆಗಳು ವರ್ಗವಣೆ ಮಾಡಕೂಡದು ಎಂದು ಆಗ್ರಹಿಸಿವೆ.

ಬೆಳಗಾವಿ, ಅನೇಕ ಭಾಷೆ-ಸಂಸ್ಕøತಿಯನ್ನು ಒಳಗೊಂಡಿರುವ ಅತ್ಯಂತ ಸೂಕ್ಷ್ಮ  ಪ್ರದೇಶ. ಕೆಲವರು ಭಾಷಾ ವಿವಾದವನ್ನು ಮುಂದು ಮಾಡಿಕೊಂಡು ಕಾಲು ಕೆದರಿ ಜಗಳವಡುತ್ತ ಬಂದ  ಈ ನೆಲದಲ್ಲಿ  ಸಾಮರಸ್ಯ ಕಾಯ್ದುಕೊಂಡು ಕನ್ನಡದ ಅಸ್ಮಿತೆ ಉಳಸಿ ಬೆಳಸಿಕೊಂಡು ಹೋಗುವುದು ಸರಕಾರಿ ಅಧಿಕಾರಿಗಳಿಗೆ ತುಂಬಾ ಕಷ್ಟ-ಸಂಕಷ್ಟದ ಕೆಲಸ. ಇಂಥ ಅನೇಕ ಸಂಕಷ್ಟಗಳನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸುತ್ತ ಬಂದ ಎನ್. ಜಯರಾಮ್ ಅವರು, ಯಾವುದೇ ಭಾವಪ್ರಚೋದನೆಗೆ ಅವಾಕಾಶ ದೊರೆಯದಂತೆ ಕನ್ನಡದ ಸಂವೇದನಾ ಸೂಕ್ಷ್ಮತೆಯನ್ನು ಎತ್ತಿ ಹಿಡಿಯುತ್ತ ಬಂದವರು. ಕನ್ನಡದ ನೆಲದಲ್ಲಿಯೇ ಕಳೆದ ಅನೇಕ ವರ್ಷಗಳಿಂದ ‘ಮಹಾರಾಷ್ಟ್ರ ರಾಜ್ಯ’ ಎಂದು ಯಳ್ಳೂರಿನಲ್ಲಿ ಮೆರೆದ ನಾಮಫಲಕವನ್ನು ದಿಟ್ಟತನದಿಂದ ತೆಗೆದುಹಾಕುವಲ್ಲಿ ಯಶಸ್ವಿಯಾದರು. ಬೆಳಗಾವಿಯ ಸಾರ್ವಜನಿಕ ವಲಯದಲ್ಲಿ ಇಂಗ್ಲಿಷ ಹಾಗೂ ಇತರೆ ಭಾಷಾ ನಾಮಫಲಕಗಳು ರಾರಾಜಿಸುತ್ತಿರುವುದನ್ನು ಜಾಗುರುಕತೆಯಿಂದ ತೆಗೆದುಹಾಕಿ, ಕನ್ನಡ ಫಲಕಗಳು ತಲೆ ಎತ್ತುವಂತೆ ಮಾಡಿದರು. ಭಾಷಾ ಸಾಮರಸ್ಯ ಕೆಡಿಸುವ ಕೇಂದ್ರವೆಂದೇ ಹೆಸರಾದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ನಾಡಗೀತೆ ಹಾಡನ್ನು ಧ್ವನಿಎತ್ತಿ ಹಾಡುವ ಪರಂಪರೆಗೆ ನಾಂದಿ ಹಾಡಿದರು. ಭಾಷಾ ಅಲ್ಪಸಂಖ್ಯಾತ ಹೆಸರಿನಲ್ಲಿ ಕನ್ನಡದ ವಿರೋಧಿ ನಿಲುವು ಪ್ರಕಟಿಸಿದವರಿಗೆ ಕನ್ನಡ ನೆಲದ ಭಾಷೆಯನ್ನು ಮನಸ್ಸಾರೆ ಕಲಿತು ಮಾತನಾಡುವಂತೆ ತಕ್ಕ ಪಾಠ ಹೇಳಿಕೊಟ್ಟ ಎದೆಗಾರರು. ಇಂಥ ಅನೇಕ ಕನ್ನಡಪರ ಕಾಳಜಿ ಹಾಗೂ ಕ್ರಿಯಾಶೀಲತೆಯಿಂದ ಬೆಳಗಾವಿ ಕನ್ನಡಿಗರ ಮನಗೆದ್ದವರು.

ಬಡ ಹಾಗೂ ಅನಾಥ ಮಕ್ಕಳಿಗೆ ಸರಕಾರಿ ಅಧಿಕಾರಿಗಳೆಂದರೆ ಸ್ಪರ್ಶಿಸಲು ಸಾಧ್ಯವಾಗದ ಗಗನ ಕುಸುಮದಂತೆ. ಈ ಭಾವವನ್ನು  ಜಿಲ್ಲಾಧಿಕಾರಿಗಳಾಗಿ ಎನ್. ಜಯರಾಮ್ ಅವರು ಮುರಿದುಹಾಕಿ, ಅನಾಥ  ಮಕ್ಕಳನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಹಾಡಿ, ಕುಣಿಸಿದು, ಹಬ್ಬದ ಊಟ ಮಾಡಿ, ಸಿಹಿ ಹಂಚಿಕೆ, ಬಟ್ಟೆಬರೆ ಕಾಣಿಕೆ ನೀಡಿ ಸಂಭ್ರಮಿಸುವುದರ ಮೂಲಕ ಅವರಲ್ಲಿ ಹೊಸ ಭರವಸೆ ಮೂಡಿಸಿದರು. ಬಡ ಪ್ರತಿಭಾವಂತ ಮಕ್ಕಳಿಗೆ, ಸರಕಾರಿ ವಸತಿ ನಿಲಯದಲ್ಲಿ ಇದ್ದು ಓದುತ್ತಿರುವ ತಳ ಸಮುದಾಯದ ಪ್ರತಿಭಾವಂತರಿಗೆ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ನಗದು ಬಹುಮಾನ ನೀಡಿ, ಅವರ ಸಾಧನೆಗೆ ಪ್ರೋತ್ಸಾಹಿಸಿದರು. ಅಂಥ ಅನಾಥ ಮಕ್ಕಳನ್ನು ಸರಕಾರಿ ಅಧಿಕಾರಿಗಳು ದತ್ತು ಪಡೆದು ಅವರ ವಿದ್ಯಾಭ್ಯಾಸ ಪೂರ್ಣಗೊಳ್ಳುವವರೆಗೂ ನೋಡಿಕೊಳ್ಳುವಂತೆ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ. ಒಬ್ಬ ಜಿಲ್ಲಾಧಿಕಾರಿ ನೇರವಾಗಿ ಬಡಮಕ್ಕಳ ಮಗ್ಗಲಿಗೆ ಬಂದು ಅವರ ವೇದನೆಗೆ ಸ್ಪಂದಿಸಿ,  ಈ ರೀತಿ ಪ್ರೋತ್ಸಾಹಿಸಿರುವುದು ಅಪರೂಪ.

ಇಂಥ ಜನಪರ ಕಾರ್ಯಕ್ರಮಗಳಿಂದ ಎನ್. ಜಯರಾಮ್ ಅವರು ಸಾರ್ವಜನಿಕರಲ್ಲಿ ಆಕರ್ಷಿತರಾದವರು. ಸಮಸ್ಯೆಗಳಿಗೆ ತಕ್ಷಣ ಮಿಡಿಯುವ ಮನೋವೃತ್ತಿಯ ಇವರು ಮಾಧ್ಯಮಗಳಿಗೆ ಹತ್ತಿರವಾದವರು. ಕನ್ನಡಪರ ಕಾಳಜಿ ದಿಟ್ಟ ನಿರ್ಧಾರದಿಂದ ಬೆಳಗಾವಿ ಕನ್ನಡಿಗರ ಮೆಚ್ಚುಗೆ ಗಳಿಸಿದವರು. ಇಂಥ ಅಧಿಕಾರಿ ವರ್ಗವಾಗಿ ತೆರಳುವಾಗಿ ಆತ್ಮೀಯವಾಗಿ ಸನ್ಮಾನಿಸುವುದು ಸೂಕ್ತವಾದ ನಿರ್ಧಾರ.

ಈ ಬರವಣಿಗೆ ಹಿರಿಯ ಅಧಿಕಾರಿಗಳಾದ ಎನ್. ಜಯರಾಮ್ ಅವರ ವ್ಯಕ್ತಿಚಿತ್ರವಲ್ಲ. ಒಬ್ಬ ಉನ್ನತ ಅಧಿಕಾರಿಯಾಗಿ ತಮ್ಮ ಅಧಿಕಾರ ಚೌಕಟ್ಟಿನೊಳಗಿದ್ದು, ನೆಲೆದ ಅಸ್ಮಿತೆಗೆ ಸ್ಪಂದಿಸುವ, ನೋವಿಗೆ ಮಿಡಿದು ಮನುಷ್ಯತ್ವ ಮೆರೆಯುವÀ ಸಂದರ್ಭವನ್ನು ಮಾತ್ರ ಪರಿಚಯಿಸುತ್ತದೆ.

ಮಲೆನಾಡಿನ ಸೆರಗಿನ ಅಂಚಿನಲ್ಲಿ ವೈವಿದ್ಯಮಯ ಸಾಂಸ್ಕøತಿಕ ಹಾಗೂ ವಾಣಿಜ್ಯದೋಗ್ಯಮದ ಕೇಂದ್ರವಾಗಿರುವ ಬೆಳಗಾವಿಯ ತಂಪು ನೆಲವನ್ನು ಶಾಸ್ವತವಾಗಿ ಅಭಿವೃದ್ಧಿಯ ಹಸಿರಾಗಿಸುವ ಹಸಿವು ಭಾಳ ದಿನದ್ದು. ಈ ನೆಲದ ಸಾಂಸ್ಕøತಿಕ ಸೂಕ್ಷ್ಮತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅದರ ಸಮಗ್ರತೆಯನ್ನು ಎದುರಿಗಿಟ್ಟುಕೊಂಡು ಅಭಿವೃದ್ಧಿಯ ಕ್ರಾಂತಿ ಮಾಡುವ ಸಮರ್ಥ ರಾಜಕಾರಣ ಹಾಗೂ ಜನಪ್ರತಿನಿಧಿಯ ದೊಡ್ಡ ಕೊರತೆಯನ್ನು ಬೆಳಗಾವಿ ಮೊದಲಿನಿಂದಲೂ ಅನುಭವಿಸುತ್ತ ಬಂದಿದ್ದು, ಈಗಲೂ ಮುಂದುವರೆದಿದೆ. ಇಂಥ ಸಂದರ್ಭದಲ್ಲಿ ಎನ್. ಜಯರಾಮ್‍ರಂಥ ಅಧಿಕಾರಿಗಳು ತಮ್ಮ ಅಧಿಕಾರದ ಇತಿಮಿತಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆ ಕೊರತೆಯನ್ನು ತಕ್ಕಮಟ್ಟಿಗೆ ನಿವಾರಿಸಲು ಪ್ರಯತ್ನಿಸುತ್ತಾ ಬಂದಿದ್ದಾರೆ. ಹೀಗಾಗಿ, ಇಂಥ ಅಧಿಕಾರಿಗಳು ಸಾರ್ವಜನಿಕರಿಂದ ಗೌರವ ಸನ್ಮಾನಕ್ಕೆ ಕಾರಣರಾಗುತ್ತಾರೆ.

*****

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *