Breaking News

ಹುಗ್ಗಿ ಊಟ….ವಿದ್ಯಾರ್ಥಿಗಳಿಗೆ ಪಾಠ….ದೂರವಾಯ್ತು ಸಮಸ್ಯೆಗಳ ಕಾಟ….!!!

ಬೆಳಗಾವಿ, – ಜನರ ಅಹವಾಲುಗಳನ್ನು ಆಲಿಸುವುದರ ಜತೆಗೆ ಸರ್ಕಾರದ ಸಹಾಯ-ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಆರಂಭಗೊಂಡಿರುವ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಎಂಬ ಮೊದಲ

ವಿನೂತನ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಕಂಡಿತು.

ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮದಲ್ಲಿ ಶನಿವಾರ (ಫೆ.20) ನಡೆದ ಮೊದಲ ಕಾರ್ಯಕ್ರಮದಲ್ಲಿ ಸ್ಥಳೀಯ ಜನರು ಅತ್ಯುತ್ಸಾಹದಿಂದ ಭಾಗವಹಿಸಿದರು.

ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.

ಸುಮಾರು ಎರಡು ತಾಸುಗಳ‌ ಕಾಲ ಗ್ರಾಮದ ಓಣಿ ಓಣಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ‌ಸ್ವತಃ ಜನರ ಮನೆಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜನರಿಂದ ಲಿಖಿತ ಹಾಗೂ ಮೌಖಿಕ ಮನವಿಗಳನ್ನು ಪಡೆದುಕೊಂಡರಲ್ಲದೇ ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಮಾಸಾಶನ, ಬಸ್ ಸೌಕರ್ಯ, ವಿದ್ಯುಚ್ಛಕ್ತಿ ಸಮಸ್ಯೆ, ವಸತಿ ವಿಷಯಗಳು ಸೇರಿದಂತೆ 210 ಕ್ಕೂ ಅಧಿಕ ಅಹವಾಲುಗಳನ್ನು ಗ್ರಾಮಸ್ಥರು ಸಲ್ಲಿಸಿದರು.

ಗರ್ಭಿಣಿಯರಿಗೆ ಸೀಮಂತ; ಮಕ್ಕಳಿಗೆ ಅನ್ನಪ್ರಾಶನ:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬೈಲವಾಡ ಗ್ರಾಮದ ಐದು ಜನರಿಗೆ ಸಂಪ್ರದಾಯದ ಪ್ರಕಾರ ಸೀಮಂತ ಕಾರ್ಯವನ್ನು ನೆರವೇರಿಸಲಾಯಿತು.ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಮೂವತ್ತಕ್ಕೂ ಅಧಿಕ ಕುಟುಂಬಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ಗಳನ್ನು ವಿತರಿಸಲಾಯಿತು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದಾದ ಬಳಿಕ ಗ್ರಾಮದ ವಿದ್ಯಾರ್ಥಿಗಳ ಜತೆಗೆ ಮುಕ್ತವಾಗಿ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಮಕ್ಕಳ ಶೈಕ್ಷಣಿಕ ತೊಂದರೆಗಳಿಗೂ ಕಿವಿಯಾದರು.

ಬಸ್ ಸೌಲಭ್ಯ ಕೊರತೆ; ಶಿಕ್ಷಕರ ಕೊರತೆ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿದ ವಿದ್ಯಾರ್ಥಿಗಳು, ಜಿಲ್ಲಾಧಿಕಾರಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ ವಿಧಾನವನ್ನು ಕೇಳಿ ತಿಳಿದುಕೊಂಡರು.

ಮಕ್ಕಳ ಪ್ರತಿಯೊಂದು ಪ್ರಶ್ನೆಗೂ ಶಾಂತಚಿತ್ತರಾಗಿ ಉತ್ತರಿಸಿದ ಜಿಲ್ಲಾಧಿಕಾರಿ ಹಿರೇಮಠ ಅವರು, ಶಿಸ್ತುಬದ್ಧ ಅಧ್ಯಯನದ ಮೂಲಕ ಎಂತಹ ಪರೀಕ್ಷೆಗಳನ್ನೂ ಕೂಡ ಸುಲಭವಾಗಿ ಪಾಸು ಮಾಡಬಹುದು ಎಂದು ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು:
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ಸಂಜೆ ವೇಳೆಗೆ ನಡೆದ ಸಂಗೀತ, ನೃತ್ಯಗಾಯನ, ಸಮೂಹನೃತ್ಯ ಮತ್ತಿತರ ಕಾರ್ಯಕ್ರಮಗಳು ಮನರಂಜಿಸಿದವು.

ಗ್ರಾಮದ ಶಾಲಾ ಮಕ್ಕಳು ಪ್ರದರ್ಶಿದ ನೃತ್ಯ ಪ್ರದರ್ಶನಕ್ಕೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.ಶಾಸಕ ಮಹಾಂತೇಶ ಕೌಜಲಗಿ, ಅಪರ ಜಿಲ್ಲಾಧಿಕಾರಿ ಅಶೋಕ‌ ದುಡಗುಂಟಿ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ನೂರಾರು ‌ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
****

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *