ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಸಾಲಹಳ್ಳಿ (ಕದಾಂಪೂರ) ಗ್ರಾಮದಲ್ಲಿ ವಾಸ್ತವ್ಯ
——————————————————————–
ಗ್ರಾಮದ ಪ್ರತಿ ಮನೆಗಳಿಗೆ ಶೀಘ್ರ ಕುಡಿಯುವ ನೀರು: ಶಾಸಕ ಮಹಾದೇವಪ್ಪ ಯಾದವಾಡ
ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ ಮೂಲಕ ಪಹಣಿ, ಪಿಂಚಣಿ ಆದೇಶ ಪ್ರತಿಗಳು ಸೇರಿದಂತೆ ಕಂದಾಯ ದಾಖಲೆಗಳನ್ನು ಗ್ರಾಮದ ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ತಿಳಿಸಿದರು.
ರಾಮದುರ್ಗ ತಾಲೂಕಿನ ಸಾಲಹಳ್ಳಿ (ಕದಾಂಪೂರ) ಗ್ರಾಮದಲ್ಲಿ ಶನಿವಾರ (ಏ.16) ನಡೆದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳು ಗ್ರಾಮಸ್ಥರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರತಿ 3ನೇ ಶನಿವಾರ ಜಿಲ್ಲಾಧಿಕಾರಿಗಳು ಗ್ರಾಮದ ಜನರ ಕುಂದು ಕೊರತೆಗಳನ್ನು ಆಲಿಸಿ, ಅವರ ಸಮಸ್ಯೆಗೆ ಸ್ಪಂದಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಲಪ್ರಭಾ ನದಿ ಜೋಡಣೆಯ ಮೂಲಕ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಸಾಮಾಜಿಕ ಭದ್ರತೆಗಳಾದ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುವದು ಎಂದು ಶಾಸಕ ಮಹಾದೇವಪ್ಪ ಯಾದವಾಡ ತಿಳಿಸಿದರು.
ಜನರ ಸಮಸ್ಯೆಗೆ ತಕ್ಷಣ ಸ್ಪಂದನೆ:
ಸರ್ಕಾರ ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆಯೋಜಿಸಿದೆ. ಮೂಲಭೂತ ಸೌಕರ್ಯಗಳ ಕೊರತೆ, ಸಾರ್ವಜನಿಕ ಸಮಸ್ಯೆ ಹಾಗೂ ವಯಕ್ತಿಕ ಸೌಲಭ್ಯಗಳ ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ತಕ್ಷಣವೇ ಸ್ಪಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದರು.
ಗ್ರಾಮದಲ್ಲಿ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ಗ್ರಾಮಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಶಾಸಕರ ಕೋರಿಕೆಯಂತೆ ಡಿಎಂಎಫ್ ನಿಂದ ರಾಮದುರ್ಗ ತಾಲ್ಲೂಕಿನ ಆಸ್ಪತ್ರೆಗಳ ಅಭಿವೃದ್ಧಿಗೆ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪಿಂಚಣಿ ಆದೇಶ ಪತ್ರ; ವಿವಿಧ ಸೌಲಭ್ಯಗಳ ವಿತರಣೆ:
ವೇದಿಕೆ ಕಾರ್ಯಕ್ರಮದಲ್ಲಿ ಮಾಸಾಶನ, ವೃದ್ದಾಪ್ಯವೇತನ, ವಿವಿಧ ಪಿಂಚಣಿ ಹಾಗೂ ಗ್ರಾಮದ ಫಲಾನುಭವಿಗಳಿಗೆ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು.
ಅದೇ ರೀತಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ 100 ದಿನ ಪೂರೈಸಿದ ಕಾರ್ಮಿಕರಿಗೆ ಕಾರ್ಮಿಕರ ವಸ್ತ್ರಗಳ ಕಿಟ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಾಗ್ಯ ಲಕ್ಷ್ಮಿ ಬಾಂಡ್, ವಿಕಲಚೇತನರಿಗೆ, ಹಿರಿಯ ನಾಗರೀಕರಿಗೆ ವೀಲ್ ಚೇರ್ ಹಾಗೂ ತ್ರಿಚಕ್ರ ವಾಹನಗಳನ್ನು ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ವಿತರಣೆ ಮಾಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ರಾಮದುರ್ಗ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಶಿಕಾಂತ ಮುನ್ಯಾಳ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಾಲಿ, ಬಿಇಓ ಎಂ.ಆರ್ ಅಲಾಸೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಖಾನಪೇಟ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಊರಿಗೆ ಬಂದ ಜಿಲ್ಲಾಧಿಕಾರಿಗಳಿಗೆ ಅದ್ದೂರಿ ಸ್ವಾಗತ:
ಇದಕ್ಕೂ ಮುಂಚೆ ಸಾಲಹಳ್ಳಿ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಆನೆಯಿಂದ ಮಾಲಾರ್ಪಣೆ ಮಾಡಿಸುವ ಮೂಲಕ ಸ್ವಾಗತಿಸಲಾಯಿತು.
ಡೊಳ್ಳು ಕುಣಿತ, ಕುದುರೆ ಕುಣಿತ, ಬ್ಯಾಂಡ್ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಮುಖ್ಯರಸ್ತೆಯಿಂದ ತೆರೆದ ಜೀಪ್ ನಲ್ಲಿ ಮೆರವಣಿಗೆ ಮೂಲಕ ಸಾಲಹಳ್ಳಿ ಗ್ರಾಮಕ್ಕೆ ಕರೆದೊಯ್ಯಲಾಯಿತು. ಶಾಸಕ ಮಹದೇವಪ್ಪ ಯಾದವಾಡ ಹಾಗೂ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಜತೆಗಿದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ಗ್ರಾಮದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಜನರ ಅಹವಾಲುಗಳನ್ನು ಆಲಿಸಿದರು.
***