ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಡಿಸಿ ಮಹ್ಮದ್ ರೋಷನ್ ಸೂಚನೆ…

ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಪರೀಕ್ಷೆ ಹೆಚ್ಚಿಸಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಬೆಳಗಾವಿ ಜು.10(ಕರ್ನಾಟಕ ವಾರ್ತೆ): ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಡೆಂಗ್ಯೂ‌ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್‌ ಇರುವ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ‌ ರೋಷನ್ ಅವರು ಸೂಚನೆ‌ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ (ಜು.10) ವಿಪತ್ತು ನಿರ್ವಹಣೆ ಹಾಗೂ ಡೆಂಗ್ಯೂ ನಿಯಂತ್ರಣದ ಕುರಿತು ವಿವಿಧ ಇಲಾಖಾ ಅಧಿಕಾರಿಗಳ ವೀಡಿಯೋ ಸಂವಾದ ಸಭೆ ನಡೆಸಿ ಅವರು ಮಾತನಾಡಿದರು.

ಪ್ರಸ್ತುತ ಡೆಂಗ್ಯೂ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಬೇಕು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಅಲ್ಲದೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಡೆಂಗ್ಯೂ ನಿಯಂತ್ರಣಕ್ಕೆ‌ ಮುಂದಾಗಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆ ಹಾಗೂ ತಾಲೂಕು ಪಂಚಾಯತಿಗಳ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವದರ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ‌ ನಿಯಂತ್ರಣಕ್ಕೆ ಮುಂದಾಗುವಂತೆ ಎಂದು ಹೇಳಿದರು.

ವಿಪತ್ತು ನಿರ್ವಹಣೆ;

ಪ್ರಸಕ್ತ ಸಾಲಿನಲ್ಲಿ ಉತ್ತಮ‌ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ನದಿ‌‌‌ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಅಗತ್ಯವಿರುವ ರಕ್ಷಣಾ ಪರಿಕರಗಳ ಸಹವ್ಯವಸ್ಥೆಯಲ್ಲಿರುವ‌ ಕುರಿತು‌ ಪರಿಶೀಲಿಸಿ ವರದಿ ಸಲ್ಲಿಸಬೇಕು.

ಜಿಲ್ಲೆಯ ನಗರ, ಸ್ಥಳೀಯ-ಸಂಸ್ಥೆ ಹಾಗೂ ಗ್ರಾಮ‌ ಪಂಚಾಯತಿಗಳಲ್ಲಿ ಗುರುತಿಸಲಾದ ಪರಿಹಾರ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕೇಂದ್ರಗಳಲ್ಲಿನ ಸೌಲಭ್ಯ ಕುರಿತು ಪರಿಶೀಲಿಸಿ ವರದಿ ನೀಡಬೇಕು. ಇದರ ಜೊತೆಗೆ ಗೋಶಾಲೆಗಳ ವಿವರವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜೀವಹಾನಿ; ಮುನ್ನೆಚ್ಚರಿಕೆ ವಹಿಸಲು ಸೂಚನೆ:

ಅತೀವೃಷ್ಟಿಯಿಂದ ಮನೆ, ಜೀವ ಹಾನಿಯಾದ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೆ ಪರಿಹಾರ ಒದಗಿಸಬೇಕು. ಯಾವುದೇ ಕಾರಣಕ್ಕೂ ಪರಿಹಾರ ವಿತರಣೆಯಲ್ಲಿ ವಿಳಂಬವಾಗದಂತೆ ನಿಗಾ ವಹಿಸಬೇಕು. ಯಾವುದೇ ರೀತಿಯ ಜೀವಹಾನಿಯಾಗದಂತೆ ಸಂಬಂಧಿಸಿದ ಉಪವಿಭಾಗಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಪ್ರವಾಹ ಸಂದರ್ಭದಲ್ಲಿ ಉದ್ಭವಿಸಬಹುದಾದ ಸಾಂಕ್ರಾಮಿಕ ರೋಗಗಳ‌ ನಿಯಂತ್ರಣಕ್ಕೆ ಅಗತ್ಯದ ಜೌಷದಿಗಳು ಈಗಿನಿಂದಲೇ ದಾಸ್ತಾನು‌ ಮಾಡಿಟ್ಟುಕೊಳ್ಳುವದರ ಜೊತೆಗೆ ವಿಷ ಜಂತುಗಳ ಕಡಿತದಿಂದಾಗುವ ಸಾವು‌ ನೋವು ತಪ್ಪಿಸಲು ಬೇಕಾದಂತಹ ಜೌಷಧಿಗಳನ್ನು ತಪ್ಪದೇ ದಾಸ್ತಾನು‌ ಮಾಡಿಟ್ಟುಕೊಳ್ಳಬೇಕು ಎಂದರು.

ಕುಡಿಯುವ ನೀರು:

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರು ಸರಬರಾಜು‌ ಮಾಡಲು ನಿಗಾವಹಿಸಬೇಕು. ಅಲ್ಲದೇ ನಿಯಮಿತವಾಗಿ ನೀರಿನ‌ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಜಿಲ್ಲಾ‌ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ನೆರೆಯ‌ ಮಹಾರಾಷ್ಟ್ರದಲ್ಲಿ‌ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ‌ ನದಿ‌ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗುವ ಸಂಭವವಿದ್ದು, ಈ ಹಿನ್ನಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಅಗತ್ಯದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ತಿಳಿಸಿದರು.

ಪ್ರವಾಹ ಸಂದರ್ಭದಲ್ಲಿ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳ ವಿವರ ಒದಗಿಸಿದಲ್ಲಿ ಅವುಗಳನ್ನು ಪೂರೈಸಲು ಕ್ರಮ ವಹಿಸಲಾಗುವದು. ಅಲ್ಲದೇ ಗ್ರಾಮ ಪಂಚಾಯತಗಳಲ್ಲಿ ವಿಪತ್ತು ನಿರ್ವಹಣಾ ಸಭೆಗಳನ್ನು ಕಡ್ಡಾಯವಾಗಿ ಜರುಗಿಸಿ ವರದಿ ಸಲ್ಲಿಸಬೇಕು ಎಂದು ಎಸ್.ಪಿ ಡಾ.ಭೀಮಾಶಂಕರ ಅವರು ತಿಳಿಸಿದರು.

ವೀಡಿಯೋ ಸಂವಾದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ನಾಯಕ್, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕಿರಪೂರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಜಿ.ಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಗಂಗಾಧರ ದಿವಟರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ ಶಿಂತ್ರೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
***

Check Also

ಬೆಳಗಾವಿ -ಸಾಲಭಾದೆಗೆ ನೇಕಾರ ಆತ್ಮಹತ್ಯೆ

ಬೆಳಗಾವಿ-ಸಾಲಭಾದೆಗೆ ಬೇಸತ್ತು ನೇಣುಬಿಗಿದುಕೊಂಡು ನೇಕಾರ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ನಡೆದಿದೆ. ಪರುಶರಾಮ ವಾಗೂಕರ (47) …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.