Breaking News

ಮಿಡಿಯಾ ಬಳಗದ ಕಲ್ಯಾಣಕ್ಕಾಗಿ ದಿಲೀಪ ಅವರ ಹೊಸ ಐಡಿಯಾ….!!!

ಬೆಳಗಾವಿ ಜಿಲ್ಲಾ ಪತ್ರಕರ್ತರ ಭದ್ರತೆಗಾಗಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಲವು ವಿಶೇಷ ಯೋಜನೆಗಳ ಘೋಷಣೆ
ಬೆಳಗಾವಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರ ಭದ್ರತೆ ಮತ್ತು ಶ್ರೇಯೋಭಿವೃದ್ಧೀಗಾಗಿ ನಿವೇಶನ ಮಂಜೂರಾತಿ ಸೇರಿದಂತೆ ಹಲವಾರು ವಿಶಿಷ್ಠ ಯೋಜನೆಗಳನ್ನು ಸಂಘದ ಗೌರವಾಧ್ಯಕ್ಷ ಭೀಮಶಿ ಜಾರಕಿಹೊಳಿ ಮತ್ತು ಅಧ್ಯಕ್ಷ ದಿಲೀಪ ಕುರಂದವಾಡೆ  ಅವರು ಘೋಷಿಸಿದರು.

ಶುಕ್ರವಾರ ಇಲ್ಲಿಯ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯೋಜನೆಗಳ ವಿವರ ನೀಡಿದ ದಿಲೀಪ ಕುರಂದವಾಡೆ ಅವರು, ದೇಶದಲ್ಲಿಯೇ ಮಾದರಿ ಎನ್ನುವಂತಹ ಹಲವಾರು ಯೋಜನೆಗಳನ್ನು ಬೆಳಗಾವಿ ಜಿಲ್ಲೆಯ ಪತ್ರಕರ್ತರಿಗಾಗಿ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಯಶ್ವಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಮಿಡಿಯಾ ಬಳಗಕ್ಕೆ ಭರವಸೆಯ ಬೆಳಕಾದ ದಿಲೀಪ ಕುರಂದವಾಡೆ

ನಗರದ ವಿಶ್ವೇಶ್ವರಯ್ಯ ನಗರದಲ್ಲಿ ದೇಶಕ್ಕೆ ಮಾದರಿಯಾಗುವಂತಹ ಹೈಟೆಕ್ ಪತ್ರಿಕಾ ಭವನ ಸುಮಾರು ರೂ. 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಅದಕ್ಕಾಗಿ ಸರ್ಕಾರ 12 ಗುಂಟೆ ಜಾಗವನ್ನು ನೀಡಿದೆ. ಐದಂತಸ್ತಿನ ಭವನದಲ್ಲಿ ಪತ್ರಕರ್ತರಿಗಾಗಿ ಹಲವಾರು ಅನುಕೂಲತೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ ಕುರಂದವಾಡೆ ಅವರು, ಈ ಕಾರ್ಯಕ್ಕಾಗಿ ಮುಂದಾಗಿ ನಿಂತು ಸಹಕಾರ ನೀಡುತ್ತಿರುವ ದಕ್ಷಿಣ ಭಾಗದ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಭಾಗದ ಶಾಸಕ ಅನಿಲ ಬೆನಕೆ ಅವರಿಗೆ ಧನ್ಯವಾದ ತಿಳಿಸಿದರು. ಭವನ ನಿರ್ಮಾಣದ ಕಾಮಗಾರಿಗೆ ಮುಂದಿನ ತಿಂಗಳ ಮೊದಲ ವಾರದಲ್ಲಿ ಅಡಿಗಲ್ಲು ನೆರವೇರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಇನ್ನುಳಿದಂತೆ ವಿಶೇಷವಾಗಿ ಸಂಘದ ಸದಸ್ಯರಿಗಾಗಿ ಬೆಳಗಾವಿಯಲ್ಲಿ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ನೀಡುವುದನ್ನು ಆದ್ಯತೆಯ ಮೇಲೆ ಪರಿಗಣಿಸಲಾಗಿದೆ. ಈಗಾಗಲೇ ಬೆಳಗಾವಿ ನಗರ ಮತ್ತು ಹೊರವಲಯದಲ್ಲಿ ಮೂರು ಕಡೆ ಜಾಗಗಳನ್ನು ಗುರುತಿಸಲಾಗಿದ್ದು, ಅರ್ಹ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಹಂಚಲಾಗುವುದು ಎಂದು ಅವರು ಹೇಳಿದರು.

ಪತ್ರಕರ್ತರನ್ನು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಲು, ಜಾಗತಿಕ ಮಟ್ಟದ ಪರಿಣತರಿಂದ ತರಬೇತಿ ಕಾರ್ಯಕ್ರಮವನ್ನು ಮುಂಬೈ, ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ನೀಡಲಾಗುವುದು. ಅಲ್ಲಿಯ ಊಟ ಮತ್ತು ವಸತಿಯ ವೆಚ್ಚವನ್ನು ಪತ್ರಕರ್ತರು ಭರಿಸಿದರೆ, ಸುಮಾರು ರೂ.45 ಸಾವಿರದಷ್ಟು ತರಬೇತಿ ವೆಚ್ಚವನ್ನು ಸಂಘದ ವತಿಯಿಂದ ಭರಿಸಲಾಗುವುದು ಎಂದು ಕುರಂದವಾಡೆ ತಿಳಿಸಿದರು.

ಸಂಘದ ಸದಸ್ಯರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಪರೀಕ್ಷೆಗಳ ಸಿದ್ಧತೆಗಾಗಿ ಬೆಳಗಾವಿಯಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಲಾಗುತ್ತಿದೆ. ಇಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಕೋಚಿಂಗ್ ಜೊತೆಗೆ, ಉಚಿತ ಊಟ ಮತ್ತು ವ್ಯವಸ್ಥೆ ಕಲ್ಪಿಸಲಾಗುವುದು.

ಸಂಘದ ಸದಸ್ಯರ ಮಕ್ಕಳು ಉದ್ಯೋಗ ವಂಚಿತರಾಗಿದ್ದರೆ ಅವರಿಗೆ ಉಚಿತವಾಗಿ ಸ್ವ-ಉದ್ಯೋಗ ತರಬೇತಿ ನೀಡಲಾಗುವುದು. ಇನ್ನು ಸಂಘದ ಸಹಯೋಗದಲ್ಲಿ ದಿಲೀಪ ಕುರಂದವಾಡೆ ಅವರ ಎಸ್.ಎಸ್.ಫೌಂಡೇಶನ್ ವತಿಯಿಂದ 100 ಮಂದಿ ಬಡ ಪತ್ರಕರ್ತರ ಮಕ್ಕಳನ್ನು ದತ್ತು ತೆಗೆದುಕೊಂಡು, ಎಲ್.ಕೆ.ಜಿ ಯಿಂದ ಎಸ್.ಎಸ್.ಎಲ್.ಸಿ ವರೆಗಿನ ಅವರ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿದೆ ಎಂದು ದಿಲೀಪ ಘೋಷಿಸಿದರು.

ಅನಾರೋಗ್ಯಪೀಡಿತ ಪತ್ರಕರ್ತರಿಗೆ ನೆರವಾಗಲು ‘ಆರೋಗ್ಯ ತುರ್ತುನಿಧಿ’ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.  ಈ ಯೋಜನೆ ಅಡಿಯಲ್ಲಿ ಅನಾರೋಗ್ಯಪೀಡಿತ ಪತ್ರಕರ್ತರ ಮನೆಗೇ ಹೋಗಿ ಧನಸಹಾಯ ನೀಡುವುದು ಮತ್ತು ಮೃತಪಟ್ಟ ಪತ್ರಕರ್ತರ ಕುಟುಂಬಸ್ಥರು ಸ್ವಾವಲಂಬಿಗಳಾಗಿ ಬದುಕಲು ಅನುಕೂಲ ಕಲ್ಪಿಸುವುದು ಆಗಿದೆ.

ಜಿಲ್ಲೆಯಲ್ಲಿನ ಬಡ ಮತ್ತು ವಯಸ್ಸಾದ ಪತ್ರಿಕಾ ವಿತರಕರಿಗಾಗಿ 100 ಸೈಕಲ್ ಮತ್ತು 5 ಇ-ಬೈಕ್ ಗಳನ್ನು ಇನ್ನೆರಡು ವಾರದಲ್ಲಿ ವಿತರಿಸಲಾಗುವುದು. ಇವುಗಳ ಜೊತೆಗೆ ಪತ್ರಕರ್ತರ ಆರೋಗ್ಯ ತಪಾಸಣಾ ಶಿಬಿರಗಳು, ಕಾನೂನು ಅರಿವು ಕಾರ್ಯಕ್ರಮಗಳು, ಪತ್ರಕರ್ತರ ಕ್ರೀಡಾಕೂಟ ಮತ್ತು ಕುಟುಂಬ ಮಿಲನ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಹಿರಿಯ ಪತ್ರಕರ್ತರ ಮಾನಸಿಕ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ‘ಭಾನುವಾರದ ಬಾಂಧವ್ಯ’ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಪತ್ರಕರ್ತರು ಅವರ ಮನೆಗೆ ಹೋಗಿ ಉಪಹಾರ ಸೇವಿಸಲಿದ್ದಾರೆ.

ಘೋಷಣೆ ಮಾಡಲಾಗಿರುವ ವಿವಿಧ ಯೋಜನೆಗಳ ಲಾಭ ಪಡೆಯಲು ಅಗತ್ಯವಾದ ಫಾರ್ಮಗಳನ್ನು ಗೌರವಾಧ್ಯಕ್ಷ ಭೀಮಶಿ ಜಾರಕಿಹೊಳಿ ಬಿಡುಗಡೆ ಮಾಡಿದರು. ಚುನಾವಣಾಧಿಕಾರಿ ಗುರುಸಿದ್ದಪ್ಪ ಪೂಜೇರಿ ಮತ್ತು ಹಿರಿಯ ಪತ್ರಕರ್ತ ರೆಹಮತ್ ಕೆಂಚಗಾರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಸದಸ್ಯತ್ವ ಮತ್ತು ನವೀಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಲು ಅಗತ್ಯ ಮಾಹಿತಿಯನ್ನು ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ನೀಡಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ ಪಾಟೀಲ, ಯಲ್ಲಪ್ಪ ತಳವಾರ, ಶ್ರೀಶೈಲ ಮಠದ, ಕಾರ್ಯದರ್ಶಿಗಳಾದ ಶ್ರೀಕಾಂತ ಕುಬಕಡ್ಡಿ, ಈಶ್ವರ ಹೋಟಿ, ತಾನಾಜಿರಾವ್ ಮುರಂಕರ, ಖಜಾಂಚಿ ಚೇತನ ಹೊಳೆಪ್ಪಗೋಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಗೊಂದಿ ಹಾಗೂ ಹಿರಿಯ ಪತ್ರಕರ್ತ ಮಂಜುನಾಥ ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *