ಬೆಳಗಾವಿ- ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದ ಬೆನ್ನಲ್ಲಿಯೇ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮತ್ತೊಂದು ಜನಪ್ರೀಯ ಯೋಜನೆ ಜಾರಿಗೆ ತರಲು ಹೊರಟಿದೆ, ಗೃಹ ಆರೋಗ್ಯ ಯೋಜನೆಯ ಹೆಸರಿನಲ್ಲಿ ಮನೆ,ಮನೆಗೆ ತೆರಳಿ ಎಲ್ಲರ ಆರೋಗ್ಯ ತಪಾಸಣೆ ಮಾಡಿ,ಬಿಪಿ ಶುಗರ್ ಮಾತ್ರೆಗಳು ಸೇರಿದಂತೆ ಇತರ ಮಾತ್ರೆಗಳನ್ನು ಉಚಿತವಾಗಿ ಮನೆ,ಮನೆಗೆ ಹಂಚುವ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದಾರೆ.
ಪ್ರತಿ ತಿಂಗಳು ಬಿಪಿ ಶುಗರ್ ಮಾತ್ರೆ ಖರೀದಿಸಲು ಪರದಾಡುತ್ತಿದ್ದ ಬಡವರ ಪಾಲಿಗೆ ಈ ಯೋಜನೆ ಆಷಾಕಿರಣವಾಗಲಿದೆ. ಬಿಪಿ ಶುಗರ್ ಮಾತ್ರೆಗಳನ್ನು ಬಾಕ್ಸ್ ನಲ್ಲಿ ಪ್ಯಾಕ್ ಮಾಡಿ, ಮನೆ,ಮನೆಗೆ ತಲುಪಿಸುವ ಗೃಹ ಆರೋಗ್ಯ ಯೋಜನೆ ಬರುವ ತಿಂಗಳಲ್ಲಿಯೇ ಪ್ರಾಯೋಗಿಕವಾಗಿ ಬೆಳಗಾವಿ ಮತ್ತು ಗದಗ ಜಿಲ್ಲೆಯಲ್ಲಿ ಆರಂಭವಾಗಲಿದ್ದು ಈ ಯೋಜನೆ ನಂತರ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಬೆಳಗಾವಿ ವಿಭಾಗಮಟ್ಟದ ಆರೋಗ್ಯ ಇಲಾಖೆಯ ಪ್ರಗತಿ ಪರಶೀಲನೆ ಮಾಡಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಈ ಮಹತ್ವದ ಯೋಜನೆ ಘೋಷಣೆ ಮಾಡಿದ್ದಾರೆ.
ಇನ್ಮುಂದೆ ಮನೆ,ಮನೆಗೆ ವೈದ್ಯರು ಬರ್ತಾರೆ,ಆರೋಗ್ಯ ತಪಾಸಣೆ ಮಾಡ್ತಾರೆ,ಬಿಪಿ ಶುಗರ್ ಇದ್ದವರಿಗೆ ಪ್ರತಿ ತಿಂಗಳು ಮಾತ್ರೆಗಳನ್ನು ತಲುಪಿಸುತ್ತಾರೆ.