ಬೆಳಗಾವಿ- ಸಪ್ತರ್ಷಿಗಳ ದಾನ, ಅಷ್ಠ ಋಷಿ ಡಾ.ಪ್ರಭಾಕರ್ ಕೋರೆ ಅವರ ಶ್ರಮದಾನದಿಂದ ಹಳ್ಳಿಯಿಂದ ದೆಹಲಿಗೆ ,ದೆಹಲಿಯಿಂದ ದುಬಾಯಿ ವರೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸೇವೆಯನ್ನು ವಿಸ್ತರಿಸಿರುವ ಬೆಳಗಾವಿಯ ಕೆಎಲ್ಇ ಸಂಸ್ಥೆ ಈಗ ಬೆಳಗಾವಿಯ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ.
ಬೆಳಗಾವಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೆಎಲ್ಇ ಸಂಸ್ಥೆಯ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟಿಸಲು ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಗೌರವಾನ್ವಿತ ರಾಷ್ಟ್ರಪತಿ ಮಾನ್ಯ ದ್ರೌಪದಿ ಮುರುಮು ಅವರನ್ನು ನವ ದೆಹಲಿಯಲ್ಲಿ ಭೇಟಿಯಾಗಿ ಆಸ್ಪತ್ರೆಯನ್ನು ಉದ್ಘಾಟಿಸಲು ಆಹಾನಿಸಿದ್ದಾರೆ.
ಮಹಾಮಾರಿ ಕ್ಯಾನ್ಸರ್ ತೊಡೆದು ಹಾಕಲು ಕೆಎಲ್ಇ ಸಂಸ್ಥೆಯು ಬಹುವಾಗಿ ಶ್ರಮಿಸುತ್ತಿದೆ, ಈ ನಿಟ್ಟಿನಲ್ಲಿ ಸಕಲ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 300 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು ಮಾನ್ಯ ರಾಷ್ಟ್ರಪತಿಗಳು ಅದನ್ನು ಲೋಕಾರ್ಪಣೆಗೊಳಿಸಬೇಕೆಂದು ವಿನಂತಿಸಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ರಾಷ್ಟ್ರಪತಿಗಳು ಸಂಸ್ಥೆಯ ಈ ಮೌಲಿಕ ಸಾಮಾಜಿಕ ಸೇವೆ ಹಾಗೂ ಕೈಂಕರ್ಯವನ್ನು ಅಭಿನಂದಿಸಿ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ದಿನಾಂಕವನ್ನು ಸೂಚಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಉಪಸ್ಥಿತರಿದ್ದರು.