ಬೆಂಕಿ ಬಿದ್ದಾಗ ಹವ್ವಹಾರಿ ಓಡಿ ಬರುವ ಅಗ್ನಿಶಾಮಕದಳ ಸಿಬ್ಬಂದಿಯವರು ಉರಿಯ ಕೆನ್ನಾಲಾಗಿಯ ನಿಯಂತ್ರಣಕ್ಕೆ ನೀರು ಸುರಿಸುವವರು ಬೆಳಗಾವಿಯ ಸದಾಶಿವ ನಗರದ ಸಿಪಿಐ ಅವರ ಮನೆಗೆ ಆಗಮಿಸಿ ಕಣ್ಣೀರು ಸುರಿಸಿದ ಅಂತಃಕರಣದ ಘಟನೆಯೊಂದು ಇಂದು ನಡೆದಿದೆ. ಇದೇನು ಹೀಗೆ? ಅವರು ಬರುವುದರದೊರಳಿಗೆ ಬೆಂಕಿಬಿದ್ದು ಅನಾಹುತ ಸಂಭವಿಸಿದಕ್ಕೆ ಕಣ್ಣೀರು ಇಟ್ಟಿರಬಹುದು ಎಂದು ಭಾವಿಸಬೇಡಿ. ಪೊಲೀಸ್ ಅಧಿಕಾರಿಯ ಮಕ್ಕಳ ಮಮತೆ, ಮಮಕಾರ, ಮಾನವೀಯ ಅಂತಃಕರಣಕ್ಕೆ ಕರಗಿ ಕಣ್ಣೀರು ಸುರಿಸಿದ್ದಾರೆ.
ಘಟನೆ ನಡೆದದ್ದು ಇಷ್ಟೆ : ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದ ಕಾಲಿ ಮಿರ್ಚಿ ಎಂಬುವರು ಈಗ ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಪೊಲೀಸ್ ಠಾಣೆಗೆ ವರ್ಗವಾಗಿ ಸೇವೆಯಲ್ಲಿದ್ದಾರೆ. ಸಿಪಿಐ ಕಾಲಿ ಮಿರ್ಚಿ ಅವರಿಗೆ ಇಬ್ಬರು ಮುದ್ದಾದ ಗಂಡುಮಕ್ಕಳು. ಮುದ್ದಾದ ಗಂಡುಮಕ್ಕಳನ್ನು ಈ ಪೊಲೀಸ್ ಅಧಿಕಾರಿ ಅಷ್ಟೇ ಮುದ್ದಾಗಿ, ಮಮಕಾರದ ಗೂಡಿನೊಳಗಿಟ್ಟು ಬೆಳೆಸಿದ್ದಾರೆ.
ಈ ಇಬ್ಬರೂ ಮಕ್ಕಳಿಗೆ ಸಾಕು ಪ್ರಾಣಿಗಳೆಂದರೆ ಪಂಚಪ್ರಾಣ. ಅದರಲ್ಲೂ ಮನೆಯಲ್ಲಿ ಸಾಕಿದ ಬೆಕ್ಕಿನ ಮರಿಗಳ ಮೇಲೆ ಎಲ್ಲಿಲ್ಲದ ಜೀವ, ಮಮಕಾರ. ಮೊದಲು ಪ್ರೀತಿಯಿಂದ ಸಾಕಿದ ತಾಯಿಬೆಕ್ಕು ಮೂರು ಮರಿಗಳಿಗೆ ಜನ್ಮ ನೀಡಿದಾಗ ಈ ಇಬ್ಬರೂ ಹುಡುಗರಿಗೆ ಅವುಗಳ ಮೇಲೆ ಪ್ರೀತಿ ಮತ್ತಷ್ಟು ಜಾಸ್ತಿಯಾಗುತ್ತದೆ. ಜನ್ಮಪಡೆದ ಮೂರು ಮುದ್ದಾದ ಬೆಕ್ಕಿನ ಮರಿಗಳಲ್ಲಿ ಎರಡು ಮರಿಗಳು ದೈಹಿಕವಾಗಿ ಸದೃಢವಾಗಿದ್ದರೆ ಅದರಲ್ಲಿಯ ಒಂದು ಮರಿ ದೈಹಿಕವಾಗಿ ವೀಕ್ ಆಗಿರುತ್ತದೆ. ಈ ಮುದ್ದಾದ ಮರಿಗೆ ಶಾರೀರಿಕ ಪರಿಸ್ಥಿತಿ ಹೀಗಾಯಿತಲ್ಲ ಎಂದು ವೀಕ್ ಆದ ಮರಿಯ ಮೇಲೆ ಇಬ್ಬರೂ ಹುಡುಗರ ಪ್ರೀತಿ ವಿಪರಿತ ಕಾಳಜಿಯಾಗಿ ಬೆಳೆಯುತ್ತದೆ.
ಇದ್ದಕ್ಕಿಂದಂತೆ ಇಂದು ಈ ಬೆಕ್ಕಿನ ಮರಿಗಳು ಮತ್ತು ಬೀದಿ ನಾಯಿಯ ಮಧ್ಯ ಒಂದು ಸಣ್ಣ ಘಟನೆ ನಡೆಯುತ್ತದೆ. ಮನೆಯ ಹೊರಗಡೆ ಬಂದು ಆಡುತ್ತಿದ್ದ ಮೂರು ಬೆಕ್ಕಿನ ಮರಿಗಳು ಬೀದಿನಾಯಿಯ ಕಣ್ಣಿಗೆ ಕಂಡಿವೆ. ಹಾಗೇ ಕಂಡ ನಾಯಿ ಬೆಕ್ಕುಗಳಿಗೆ ಬೊಗಳುತ್ತ ಓಡಿಸಿಕೊಂಡು ಬಂದಿದೆ. ಮಕ್ಕಳ ಅಂಗೈಯಲ್ಲಿ ಮುದ್ದಾಗಿ ಬೆಳೆದ ಬೆಕ್ಕಿನ ಮರಿಗಳಿಗೆ ನಾಯಿಯ ವರಟುತ, ಕರ್ಕಶ ಧ್ವನಿ ಗಾಬರಿ ಹುಟ್ಟಿಸಿದೆ. ಜೀವ ಹೋದಂತೆ ಬೆದರಿದ ಮೂರು ಮರಿಗಳಲ್ಲಿ ಸದೃಢವಾದ ಎರಡು ಮರಿಗಳು ಮನೆ ಸೇರಿಕೊಂಡು ರಕ್ಷಣೆ ಪಡೆದುಕೊಂಡಿವೆ. ಅಸಹಾಯಕ ಸ್ಥಿತಿಯಲ್ಲಿದ್ದ ವೀಕ್ ಇದ್ದ ಮರಿ ದಿಕ್ಕುಗಾನದೆ ಬೆದರಿ ಜೀವರಕ್ಷಣೆಗೆ ಎದುರಿಗಿರುವ ಮರಹತ್ತಿದೆ. ನಾಯಿಯಿಂದ ಬಚಾವ್‍ಆಗಿ ಮನೆ ಸೇರಿದ ಮರಿಗಳನ್ನು ಕಂಡು, ನಾಯಿಯ ಧ್ವನಿ ಕೇಳಿಸಿ ಹೊರಗೆ ಓಡಿಬಂದ ಹುಡುಗರಿಗೆ ಪ್ರೀತಿಯ ಮರಿ ಗಿಡವೇರಿರುವುದು ಆತಂಕ ಸೃಷ್ಟಿಸಿದೆ. ಕೈಗೆ ನಿಲುಕದ ಮಟ್ಟಕ್ಕೆ ಮೇಲೆರಿದ ಮರಿ ಹಿಡಿಯಲು ಹೋದರೆ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡೀತು ಎಂದು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಆವಾಗ ಹುಡುಗರಿಗೆ ನೆನಪಾದದ್ದು ತಂದೆ. ತಂದೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಬೆಕ್ಕಿನ ಮರಿಗೆ ಆದ ದುರ್ಘಟನೆಯನ್ನು ವಿವರಿಸಿದ್ದಾರೆ. ಮರಿಯನ್ನು ಸುರಕ್ಷಿತವಾಗಿ ಮರ ಇಳಿಸಿಕೊಡಲು ಕ್ರಮಕ್ಕೆ ಬಲವಂತ ಪಡೆಸಿದ್ದಾರೆ.
ಮುದ್ದಾದ ಮಕ್ಕಳ ಮಧ್ಯ ಪ್ರೀತಿಯಿಂದ ಬೆಳೆಯುತ್ತಿದ್ದ ಬೆಕ್ಕಿನ ಒಡನಾಟಗಳನ್ನು ಬಲ್ಲ ಕಾಲಿ ಮಿರ್ಚಿ ಅವರು, ತಕ್ಷಣ ಅಗ್ನಿಶಾಮಕ ದಳದವರಿಗೆ ಸಂಪರ್ಕಿಸಿ, ಪರಿಸ್ಥಿತಿ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಆಗಮಿಸಿ ಎರಡು ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ, ಮಕ್ಕಳ ಮುದ್ದಾದ ಬೆಕ್ಕಿನ ಮರಿಯನ್ನು ಗಿಡದಿಂದ ಕೆಳಗಿಳಿಸಿ ಮಕ್ಕಳ ಕೈಯಲ್ಲಿ ನೀಡಿದ್ದಾರೆ.
ತಮ್ಮ ಪ್ರೀತಿಯ ಮುದ್ದಾದ ಬೆಕ್ಕಿನ ಮರಿ ಕೈಸೇರಿದಾಗ ಪೊಲೀಸ್ ಅಧಿಕಾರಿಯ ಇಬ್ಬರೂ ಮಕ್ಕಳಿಗೆ ಎಲ್ಲಿಲ್ಲದ ಸಂತಸ. ಆನಂದ ಭಾಷ್ಪ. ಬೆಕ್ಕಿನ ಮರಿಯ ಮೇಲೆ ಹುಡುಗರು ಇಟ್ಟ ಪ್ರೀತಿ, ಅವರ ಚಡಪಡಿಕೆ, ನಿಟ್ಟೂಸಿರುವ, ಅಂತಃಕರಣ ಕಂಡು ಕರಗಿಹೋದ ಆಗ್ನಿಶಾಮಕ ಸಿಬ್ಬಂದಿಯ ಮನಸ್ಸು ಕರಗಿ ಕಣ್ಣೀರಾಗಿ ಹರಿದು ಹೋಯಿತು.
ಮನುಷ್ಯ ಇಂದು ಕಳೆದುಕೊಳ್ಳುತ್ತಿರುವುದು ಪ್ರೀತಿ, ಮಮಕಾರ, ಅಂತಃಕರಣದ ಮಾನವೀಯ ಸ್ವಭಾವಗಳನ್ನು. ಇವೆಲ್ಲವುಗಳನ್ನು ಒಬ್ಬ ಪೊಲೀಸ್ ಅಧಿಕಾರಿಯ ಮಕ್ಕಳು ಮುದ್ದಾದ ತಮ್ಮ ಪ್ರೀತಿಯ ಬೆಕ್ಕಿನ ಮರಿಗಳ ಮೂಲಕ ಎತ್ತಿಹಿಡಿದಿರುವುದು ವಿಶೇಷ.