ಬೆಳಗಾವಿ,- ನಲವತ್ತು ವರ್ಷಗಳಷ್ಟು ಹಳೆಯದಾಗಿರುವ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬ್ಯಾರೇಜ್ ಹೊಸದಾಗಿ ನಿರ್ಮಿಸುವ 35 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವಕ್ಕೆ ತಕ್ಷಣವೇ ಮಂಜೂರಾತಿ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಲಜೀವನ ಮಿಷನ್, ಬಹುಗ್ರಾಮ ಕುಡಿಯುವ ನೀರು, ಕೋವಿಡ್ ನಿಯಂತ್ರಣ ಮತ್ತಿತರ ವಿಷಯಗಳ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ (ಜು.18) ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
1980 ರಲ್ಲಿ ನಿರ್ಮಿಸಲಾಗಿರುವ 0.60 ಟಿ.ಎಂ.ಸಿ. ಸಾಮರ್ಥ್ಯದ ಕಲ್ಲೋಳ 40 ವರ್ಷ ಹಳೆಯ ಬ್ಯಾರೇಜ್ ಇರುವುದರಿಂದ ನೀರು ಸಂಗ್ರಹ ಆಗುತ್ತಿಲ್ಲ. 35 ಕೋಟಿ ವೆಚ್ಚದಲ್ಲಿ ಹೊಸ ಬ್ಯಾರೇಜ್ ನಿರ್ಮಾಣದ ಅಗತ್ಯವಿದೆ. ಸರಕಾರದ ಮಟ್ಟದಲ್ಲಿ ಪ್ರಸ್ತಾವ ಬಾಕಿ ಉಳಿದಿದೆ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಸಿ.ಡಿ.ಪಾಟೀಲ ಅವರು ಸಚಿವರ ಗಮನ ಸೆಳೆದರು.
ಆಗ ತಕ್ಷಣವೇ ದೂರವಾಣಿ ಮೂಲಕ ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ ಕಾರಜೋಳ ಅವರು, ಕೂಡಲೇ 35 ಕೋಟಿ ರೂಪಾಯಿ ವೆಚ್ಚದ ಕಲ್ಲೋಳ ಬ್ಯಾರೇಜ್ ನಿರ್ಮಾಣ ಪ್ರಸ್ತಾವಕ್ಕೆ ಮಂಜೂರಾತಿ ನೀಡುವಂತೆ ತಿಳಿಸಿದರು.
ಕಲ್ಲೋಳ ಬ್ಯಾರೇಜ್ ನಿರ್ಮಾಣದಿಂದ ರಾಜಾಪುರ ಹಾಗೂ ಕಾಳಮ್ಮವಾಡಿ ಬ್ಯಾರೇಜ್ ನಿಂದ ಬಿಡುಗಡೆಯಾಗುವ ನೀರು ಸಂಗ್ರಹಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಜಲಾಶಯ ಭರ್ತಿಯಾಗಿರುವುದು ಸಮಾಧಾನಕಾರಿಯಾಗಿದೆ. ಮಹಾರಾಷ್ಟದಲ್ಲಿಯೂ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ ಎಂದು ಹೇಳಿದರು.
ಜಲ ಜೀವನ ಮಿಷನ್ ಕಾಮಗಾರಿ ಅಕ್ಟೋಬರ್ ನಿಂದ ಆರಂಭ:
ಜಲಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಅನುದಾನ ನೀಡುವುದರಿಂದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಕ್ಟೋಬರ್ ಮೊದಲ ವಾರದ ವೇಳೆಗೆ ಎಲ್ಲ ಪೂರ್ವಸಿದ್ಧತೆ ಕೈಗೊಂಡು ನಂತರ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.
ಜಲಜೀವನ ಮಿಷನ್ ಮೂಲಕ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.
ಜಿಲ್ಲೆಯ 8.52 ಲಕ್ಷ ಮನೆಗಳಿಗೆ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲುಕೇಂದ್ರ ಸರಕಾರ 2100 ಕೋಟಿ ಮಂಜೂರು ಮಾಡಿದೆ.
918 ಜನವಸತಿಗಳಿಗೆ ನೂರಕ್ಕೆ ನೂರರಷ್ಟು ನೀರು
ಡಿಪಿಆರ್ ಆಗಿದೆ ಅಕ್ಟೋಬರ್ ನಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬೆಳಗಾವಿ ಜಿಲ್ಲೆಗೆ ದೊಡ್ಡ ಪ್ರಮಾಣದ ಅನುದಾನ ಮುಂದಿನ ವರ್ಷದಲ್ಲಿ ಎಲ್ಲ ಮನೆಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಹೊಸ ಕೊಳವೆಬಾವಿ ಕೊರೆಯುವ ಬದಲು ಇರುವ ಕೊಳವೆಬಾವಿಗಳ ದುರಸ್ತಿ, ಮರುಪೂರಣಕ್ಕೆ ಆದ್ಯತೆ ನೀಡಬೇಕು.
ನದಿಗಳ ಮೇಲ್ಮಟ್ಟದ ನೀರು ಬಳಕೆ ಮಾಡಿಕೊಂಡು ಜಲಜೀವನ ಮಿಷನ್ ಯೋಜನೆ ಮೂಲಕ ಎಲ್ಲ ಗ್ರಾಮಗಳ ಮನೆಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
ಕುಡಿಯುವ ನೀರು ಯೋಜನೆ ಅನುಷ್ಠಾನದ ಬಳಿಕ ವಿದ್ಯುತ್ ಬಿಲ್ ಪಾವತಿ ಕುರಿತು ಗೊಂದಲ ಉಂಟಾಗುತ್ತದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಮುರಗೋಡ ನೀರು ಸರಬರಾಜು ಯೋಜನೆಗೆ ಎಕ್ಸಪ್ರೆಸ್ ಫೀಡರ್ ಲೈನ್ ಮೂಲಕ ವಿದ್ಯುತ್ ಸಂಪರ್ಕ ವಿಳಂಬಕ್ಕೆ ಕಾರಣವಾದ ಹೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ಸಂಪರ್ಕ ಕಲ್ಪಿಸಿ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
1.91 ಲಕ್ಷ ಮನೆಗಳಿಗೆ ನಳದ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದ ಮನೆಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ಮನೆಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಸಿಇಓ ದರ್ಶನ್ ತಿಳಿಸಿದರು.
ಜಿಲ್ಲೆಗೆ ಜಲಜೀವನ ಮಿಷನ್ ಯೋಜನೆಗೆ ಒಟ್ಟಾರೆ 2100 ಕೋಟಿ ರೂಪಾಯಿ ಮಂಜೂರಾಗಿದೆ. ಇದುವರೆಗೆ 147 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ 106 ಕೋಟಿ ರೂಪಾಯಿ ಖರ್ಚಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಬಿತ್ತನೆ ಉತ್ತಮವಾಗಿದೆ. ಆದ್ದರಿಂದ ಬೀಜ-ಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ತಾಯಂದಿರಿಗೂ ಲಸಿಕೆ; ಆದ್ಯತಾ ಗುಂಪಿಗೆ ಸೇರ್ಪಡೆಗೆ ನಿರ್ದೇಶನ:
ಸಂಭವನೀಯ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗಲಿದರೆ ಮಕ್ಕಳಿಗೆ ಚಿಕಿತ್ಸೆ ನೀಡುವಾಗ ತಾಯಂದಿರಿಗೂ ಅವಕಾಶ ನೀಡಬೇಕಾಗುತ್ತದೆ. ಆದ್ದರಿಂದ ತಾಯಂದಿರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಅಗತ್ಯವಿದೆ ಎಂದು ಜಿಪಂ ಸಿಇಓ ದರ್ಶನ್ ಪ್ರತಿಪಾದಿಸಿದರು.
ತಕ್ಷಣವೇ ಇದಕ್ಕೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಜತೆ ದೂರವಾಣಿಯಲ್ಲಿ ಚರ್ಚಿಸಿ ಹದಿನೈದು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ತಾಯಂದಿರಿಗೂ ಲಸಿಕಾಕರಣದ ಆದ್ಯತಾ ಗುಂಪಿನಲ್ಲಿ ಸೇರ್ಪಡೆಗೊಳಿಸುವಂತೆ ನಿರ್ದೇಶನ ನೀಡಿದರು.
ಈ ವಿಷಯವನ್ನು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸರಕಾರದಿಂದ ಸುತ್ತೋಲೆ ಹೊರಡಿಸಲಾಗುವುದು ಎಂದು ಕೂಡ ತಿಳಿಸಿದರು.
ಆಕ್ಸಿಜನ್ ಉತ್ಪಾದನಾ ಘಟಕ ಇನ್ನೂ ಕೆಲ ತಾಲ್ಲೂಕುಗಳಲ್ಲಿ ಆರಂಭಿಸುವ ಅಗತ್ಯವಿದೆ. ಚಿಕ್ಕೋಡಿ ಕೋವಿಡ್ ತಪಾಸಣಾ ಪ್ರಯೋಗಾಲಯ ಸದ್ಯದಲ್ಲೇ ಕಾರ್ಯಾರಂಭಿಸಲಿದೆ. ಅಗತ್ಯ ತಜ್ಞ ಸಿಬ್ಬಂದಿಯನ್ನು ರಾಜ್ಯಮಟ್ಟದಿಂದ ಒದಗಿಸಲಾಗುವುದು ಎಂದು ಉನ್ನತಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಸಭೆಯಲ್ಲಿ ವಿವರಿಸಿದರು.
ಮೊದಲ ಹಾಗೂ ಎರಡನೇ ಡೋಸ್ ಸೇರಿ ಒಟ್ಟಾರೆ 14.74 ಲಕ್ಷ ಲಸಿಕೆ ನೀಡಲಾಗಿದೆ ಎಂದು ಡಾ.ಐ.ಪಿ.ಗಡಾದ ವಿವರಿಸಿದರು.
ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
***
ಬಾಕ್ಸ್ ಮಾಡಬಹುದು….
ಜಲಜೀವನ ಮಿಷನ್ ಮತ್ತು ಹಲಗಲಿ ಯಶೋಗಾಥೆ…
* ಜಲಜೀವನ ಮಿಷನ್ ಬರಲು ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಮತಕ್ಷೇತ್ರದ ಹಲಗಲಿ ಗ್ರಾಮದ ಯಶೋಗಾಥೆ ಕಾರಣ; ಆರು ವರ್ಷಗಳ ಹಿಂದೆ ಹಲಗಲಿ ಗ್ರಾಮದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಮೂಲಕ ಮನೆ ಮನೆಗೆ ನೀರು ಪೂರೈಕೆ ಆರಂಭಿಸಲಾಯಿತು.
ಇದರಿಂದ ನೀರು ಪೋಲು ತಡೆಗಟ್ಟುವುದು ಮಾತ್ರವಲ್ಲದೇ ಮೀಟರ್ ಅಳವಡಿಸುವ ಮೂಲಕ ಬಿಲ್ ಸಂಗ್ರಹ ಸಾಧ್ಯವಾಯಿತು.
ಇದರ ಯಶೋಗಾಥೆ ತಿಳಿದು ಕೇಂದ್ರ ಸರಕಾರದ ತಂಎ ಬಂದು ಅಧ್ಯಯನ ನಡೆಸಿತು. ಇದರ ಮಹತ್ವ ಅರಿತು ಜಲಜೀವನ ಮಿಷನ್ ಮೂಲಕ ಇಡೀ ದೇಶದ ಎಲ್ಲ ಗ್ರಾಮಗಳಿಗೆ ನೀರು ಪೂರೈಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಭೆಯಲ್ಲಿ ವಿವರಿಸಿದರು.
*****