Breaking News

ಬ್ರೀಟೀಷರು ನಿರ್ಮಿಸಿದ ಬೆಳಗಾವಿಯ ಹಿಂಡಲಗಾ ಜೈಲಿಗೆ 100 ವರ್ಷ..!!

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲು ನಿರ್ಮಿಸಿ ಈ ವರ್ಷಕ್ಕೆ ಬರೊಬ್ಬರಿ ನೂರು ವರ್ಷ ಆಗಿದೆ.ಈ ಜೈಲು ನೋಡಿದ್ರೆ ಸಾಕು,ಸ್ವಾತಂತ್ರ್ಯಪೂರ್ವದ ಇತಿಹಾಸವೇ ಕಣ್ಮುಂದೆ ಬಂದಂತೆ ಆಗುತ್ತದೆ.ನೂರು ವರ್ಷ ಕಂಡಿರುವ ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಜೈಲು ಸಹಸ್ರಾರು ಸಿಹಿ, ಕಹಿಗಳನ್ನೂ ಕಂಡಿದೆ.

ಮೂರು ನೇಣುಗಂಬಗಳನ್ನು ಒಳಗೊಂಡಿರುವ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಶುರುವಾಗಿ ಪ್ರಸಕ್ತ ಸಾಲಿಗೆ ನೂರು ವರ್ಷಗಳಾದವು. 1923ರಲ್ಲಿ ಬ್ರಿಟಿಷರಿಂದ ಆರಂಭವಾಗಿರುವ ಇದನ್ನು ಹಿಂಡಲಗಾ ಜೈಲು ಎಂದು ಕರೆಯುವುದು ವಾಡಿಕೆ. 1162 ಕೈದಿಗಳನ್ನು ಒಳಗೊಳ್ಳುವ ಸಾಮರ್ಥ್ಯ ಈ ಜೈಲಿಗಿದೆ. ಭಾರತ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡವರು ಇದೇ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಜೊತೆಗೆ ಬಿಜೆಪಿಗರಿಂದ ಆರಾಧಿಸಿಕೊಳ್ಳುವ ವಿನಾಯಕ ದಾಮೋದರ ಸಾವರ್ಕರ್ 4, ಏಪ್ರಿಲ್ 1950ರಿಂದ 13, ಜುಲೈ 1950ರವರೆಗೆ ನೂರು ದಿನ ಜೈಲಿನೂಟ ಉಂಡಿದ್ದಾರೆ. ಇಂಥ ಹಿನ್ನೆಲೆ ಇರುವ ಜೈಲಿಗೆ ಈಗ ಶತಮಾನದ ಇತಿಹಾಸ.

ಅಂದ ಹಾಗೆ ಈ ಹಿಂಡಲಗಾ ಜೈಲಿನಲ್ಲಿ ಕೊನೆಯ ಬಾರಿ ನೇಣುಗಂಬ ಏರಿದವನು ಗೋಕಾಕಿನ ಹನುಮಪ್ಪ ಮಾರಿಹಾಳ. ಐದು ಕೊಲೆ ಪ್ರಕರಣದಲ್ಲಿ 9, ನವೆಂಬರ್ 1983ರಲ್ಲಿ ಅವನನ್ನು ಮರಣದಂಡನೆ ಶಿಕ್ಷೆಗೆ ಒಳಪಡಿಸಲಾಗಿತ್ತು. ಇದಕ್ಕೂ ಮುನ್ನ 1976 ಮತ್ತು 1978ರಲ್ಲಿ ಆರು ಜನರು ನೇಣು ಶಿಕ್ಷೆ ಒಳಗಾಗಿದ್ದರು.

ಹಿಂಡಲಗಾ ಜೈಲು ಕುಖ್ಯಾತ ವೀರಪ್ಪನ್ ಸಹಚರರನ್ನು, ದಂಡುಪಾಳ್ಯ ಗ್ಯಾಂಗನ್ನು, ವಿಕೃತ ಕಾಮಿ ಉಮೇಶ ರೆಡ್ಡಿ ಸೇರಿದಂತೆ ಲೆಕ್ಕವಿಲ್ಲದಷ್ಟು ಅಪರಾಧ ಹಿನ್ನೆಲೆಯವರನ್ನು ತನ್ನ ಮುಷ್ಟಿಯೊಳಗೆ ಇಟ್ಟುಕೊಂಡಿತ್ತು.

ಈ ಕಾರಾಗೃಹವನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಹೋಗಬೇಕೆಂದಿಲ್ಲ. ಕನ್ನಡದ ಮಿಂಚಿನ ಓಟ ಅಥವಾ ಹಿಂದಿಯ ಮೊಹ್ರಾ ಸಿನಿಮಾ ನೋಡಿದರೆ ಸಾಕು ಹಿಂಡಲಗಾ ಜೈಲಿನ ದರ್ಶನವಾಗುತ್ತದೆ.ನೂರು ವರ್ಷ ಕಂಡ ಹಿಂಡಲಗಾ ಜೈಲು ಸಹಸ್ರಾರು ಸಿಹಿ- ಕಹಿಗಳನ್ನೂ ಕಂಡಿದೆ.

ಇವತ್ತಿಗೂ ಅನೇಕ ಕುಖ್ಯಾತ ರೌಡಿಗಳು,ಸೇರಿದಂತೆ ನೂರಾರು ಜನ ಕೈದಿಗಳು ಇದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *