Breaking News

ಜೈಲು ಆತ್ಮಶೋಧನೆಯ ಕೇಂದ್ರ-ಎಸ್ಪಿ ರವಿಕಾಂತೇಗೌಡ

ಜೈಲು ಆತ್ಮಶೋಧನೆಯ ಕೇಂದ್ರ-ಎಸ್ಪಿ ರವಿಕಾಂತೇಗೌಡ
ಬೆಳಗಾವಿ, ಆಗಸ್ಟ್ 15(ಕರ್ನಾಟಕ ವಾರ್ತೆ): ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿದ್ದ 35 ಬಂದಿ ನಿವಾಸಿ(ಕೈದಿ)ಗಳಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸನ್ನಡತೆಯ ಆಧಾರದ ಮೇಲೆ ಇಂದು ಸ್ವತಂತ್ರಗೊಳಿಸಲಾಯಿತು.
ಕಾರಾಗೃಹದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೈದಿಗಳಿಗೆ ಬಿಡುಗಡೆ ಪ್ರಮಾಣಪತ್ರವನ್ನು ವಿತರಿಸಿ, ಬೀಳ್ಕೊಡಲಾಯಿತು.
ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರಾದ ಅಶೋಕ ನಿಜಗಣ್ಣವರ ಅವರು, ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು, “ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಜೈಲುಗಳು ಸುಧಾರಣೆಯ ಕೇಂದ್ರಗಳಾಗಿವೆ. ಶಿಕ್ಷೆಯ ಅವಧಿಯನ್ನು ಆತ್ಮಶೋಧನೆಯ ಅವಧಿ” ಎಂದು ಪರಿಗಣಿಸಲಾಗಿದೆ ಎಂದರು.
ಜೀವನದ ಯಾವುದೋ ಒಂದು ಕಹಿ ಗಳಿಗೆಯಲ್ಲಿ ಸಿಟ್ಟು ಅಥವಾ ಅಚಾತುರ್ಯದಿಂದ ಅಪರಾಧ ಮಾಡಿ ಜೈಲು ಸೇರಿದವರ ಮನಪರಿವರ್ತನೆ ಮಾಡಿ ಪುನಃ ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಕೆಲಸವನ್ನು ಜೈಲುಗಳು ಮಾಡುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಜೈಲಿನಲ್ಲಿರುವ ಕೈದಿಗಳು ಹಲವು ವರ್ಷಗಳಿಂದ ಸನ್ನಡತೆ ಪ್ರದರ್ಶಿಸಿರುವುದರಿಂದ ಅವರನ್ನು ಬಿಡುಗಡೆಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಅವರಿಗೆ ಬಿಡುಗಡೆಯ ಭಾಗ್ಯ ಕಲ್ಪಿಸಿದೆ. ಅವರು ಇಲ್ಲಿಂದ ಬಿಡುಗಡೆಯಾದ ಮೇಲೂ ಸನ್ನಡತೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ರವಿಕಾಂತೇಗೌಡ ಸಲಹೆ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎನ್.ಜಯರಾಮ್, ಒಂದು ತಪ್ಪಿನಿಂದಾಗಿ ಜೀವನದ ಮಹತ್ವದ ಗಳಿಗೆಯನ್ನು ಜೈಲಿನಲ್ಲಿ ಕಳೆದಿರುವುದರಿಂದ ಮುಂಬರುವ ದಿನಗಳಲ್ಲಿ ಮತ್ತೇ ಅಂತಹ ತಪ್ಪು ಮರುಕಳಿಸದಂತೆ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಅಶೋಕ ನಿಜಗಣ್ಣವರ, “ದೇಶದ ಕಾನೂನು ಸುಧಾರಣೆಯ ತತ್ವದ ತಳಹದಿಯ ಮೇಲೆ ರಚಿತವಾಗಿದ್ದು, ಎಲ್ಲರಿಗೂ ಒಳ್ಳೆಯದನ್ನು ಮಾಡುವ ಉದ್ದೇಶ ಹೊಂದಿದೆ” ಎಂದರು.
ಇಂದು ಬಿಡುಗಡೆಗೊಳ್ಳುತ್ತಿರುವ ಕೈದಿಗಳ ಸನ್ನಡತೆಯು ಇತರೆ ಕೈದಿಗಳಿಗೂ ಸ್ಫೂರ್ತಿಯಾಗಲಿ ಎಂದು ಸಲಹೆ ನೀಡಿದ ಅವರು, ಬಿಡುಗಡೆಗೊಂಡವರು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂಡಲಗಾ ಕಾರಾಗೃಹದ ಮುಖ್ಯ ಅಧೀಕ್ಷಕ ಶೇಷ ಅವರು, “ಸನ್ನಡತೆ ಆಧಾರದ ಮೇಲೆ ಒಟ್ಟು 43 ಕೈದಿಗಳನ್ನು ಬಿಡುಗಡೆಗೊಳಿಸಲು ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಕ್ಕೆ 35 ಜನರನ್ನು ಮಾತ್ರ ಬಿಡುಗಡೆಗೊಳಿಸಲು ಸರ್ಕಾರ ನಿರ್ಧರಿಸಿದೆ” ಎಂದು ವಿವರಿಸಿದರು.
ಇನ್ನುಳಿದ ಎಂಟು ಜನರಿಗೆ ಮುಂಬರುವ ದಿನಗಳಲ್ಲಿ ಬಿಡುಗಡೆಯ ಭಾಗ್ಯ ಒದಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 35 ಜನರ ಬಿಡುಗಡೆಗೆ ಅವಕಾಶ ಒದಗಿಸಿದ ಕಾರಾಗೃಹ ಸ್ಥಾಯಿ ಸಲಹಾ ಸಮಿತಿಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಲಹಾ ಸಮಿತಿಯ ಸದಸ್ಯರಾದ ಸಿದ್ದನಗೌಡ ಪಾಟೀಲ, ವಿಜಯ ಮೋರೆ ಮತ್ತಿತರರು ಉಪಸ್ಥಿತರಿದ್ದರು. ಹಿಂಡಲಗಾ ಕಾರಾಗೃಹದ ಉಪ ಅಧೀಕ್ಷಕ ಎಂ.ವಿ.ಮೂಲಿಮನಿ ಅವರು ವಂದಿಸಿದರು.
ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ ಅನೇಕ ವರ್ಷಗಳಿಂದ ಬಂಧಿಯಾಗಿದ್ದ ಇಬ್ಬರು ಮಹಿಳೆಯರೂ ಸೇರಿದಂತೆ 35 ಜನರು ಸನ್ನಡತೆಯಿಂದ ಇಂದು ಮತ್ತೆ ಸ್ವಾತಂತ್ರ್ಯ ಪಡೆದುಕೊಂಡರು.
ಸ್ವಾತಂತ್ರ್ಯೋತ್ಸವ ಶುಭ ಸಂದರ್ಭದಲ್ಲಿ ಬಿಡುಗಡೆ ಪ್ರಮಾಣಪತ್ರ ಪಡೆದುಕೊಂಡು ಸಂಭ್ರಮಿಸಿದರು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *