ಬೆಳಗಾವಿ-ಮೈಸೂರಿನ ನ್ಯಾಯಾಲಯ ಆವರಣದಲ್ಲಿ ಬಾಂಬ್ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಾತಂತ್ರ್ಯೋತ್ಸವ ದಿನದಂದು ಬೆಳಗಾವಿ ಮಹಾನಗರ ಹಾಗೂ ಜಿಲ್ಲೆಯಾದ್ಯಂತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಅವರು ತಿಳಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಸರ್ಕಾರ ಸೂಚನೆ ನೀಡಿರುವುದರಿಂದ ಶನಿವಾರ(ಆ.13) ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಕೃಷ್ಣಭಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ಎಲ್ಲ ತಾಲ್ಲೂಕುಗಳ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಭದ್ರತೆಯ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಯಾವುದೇ ವಿಧ್ವಂಸಕ ಕೃತ್ಯ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ,ರೆಲ್ವೆ ನಿಲ್ದಾಣ ಸೇರಿದಂತೆ ಬೆಳಗಾವಿ ನಗರ ಹಾಗು ಜಿಲ್ಲೆಯಲ್ಲಿ ಬಿಗಿ ಪೋಲಿಸ್ ಪಹರೆಯನ್ನ ನಿಯೋಜನೆ ಮಾಡಲಾಗಿದೆ
ಡ್ರೋಣ್ ಬಳಕೆ ನಿಷೇಧ:
ಇದೇ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಕೃಷ್ಣಭಟ್ ಅವರು, ವಿಧ್ವಂಸಕ ಕೃತ್ಯಗಳನ್ನು ನಡೆಸಲು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡುವ ಸಾಧ್ಯತೆಗಳಿರುವುದರಿಂದ ಡ್ರೋಣ್ ಬಳಕೆ ಮತ್ತು ಪ್ಯಾರಾಗ್ಲೈಡಿಂಗ್ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ವಿಧ್ವಂಸಕ ಕೃತ್ಯ ಸಾಧ್ಯತೆ-ಗರಿಷ್ಠ ಭದ್ರತೆ:
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕಡಿಮೆ ಭದ್ರತೆ ಇರುವ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವುದರಿಂದ ಎಲ್ಲ ಕಡೆಗಳಲ್ಲೂ ಗರಿಷ್ಠ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ತಿಳಿಸಿದರು.
ತಾಲ್ಲೂಕು ಕೇಂದ್ರ ಸ್ಥಾನಗಳು ಹಾಗೂ ಪಟ್ಟಣಗಳಲ್ಲಿ ನಡೆಯುವಂತಹ ಕಾರ್ಯಕ್ರಮಗಳಿಗೂ ಹೆಚ್ಚಿನ ಭದ್ರತೆ ಒದಗಿಸಬೇಕು ಹಾಗೂ ನಿರಂತರ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.