Breaking News

ಜಾರಕಿಹೊಳಿ ಸಹೋದರರ ತಿಕ್ಕಾಟಕ್ಕೆ ತೆರೆ,ಮಾನಿಕ್ ಟ್ಯಾಗೋರ್ ಭರವಸೆ

ಬೆಳಗಾವಿ

ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ರಾಜಕೀಯ ತಿಕ್ಕಾಟ ಸದ್ಯದಲ್ಲಿಯೇ ತಾರ್ಕಿಕ ಅಂತ್ಯ ಕಾಣಲಿದ್ದು, ಪಕ್ಷದ ವಿವಿಧ ಹಂತದಲ್ಲಿ ಭಿನ್ನಮತ ಪರಿಹರಿಸುವ ಇಲ್ಲವೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಮಾರ್ಗೋಪಾಯ ಕಂಡುಕೊಳ್ಳಲಾಗುವುದು ಎಂದು ಬೆಳಗಾವಿ ವಿಭಾಗ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಕಾರ್ಯದರ್ಶಿ ಮಾಣಿಕ್ಯಮ್ ಟಾಗ್ಯೋರ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಾರಕಿಹೋಳಿ ಸಹೋದರರ ನಡುವಿನ ರಾಜಕೀಯ ತಿಕ್ಕಾಟ, ಆರೋಪ ಪ್ರತ್ಯಾರೋಪಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಮಾಣಿಕ್ಯಮ್, ಈ ತಿಕ್ಕಾಟಕ್ಕೆ ಸದ್ಯದಲ್ಲಿಯೇ ತೆರೆ ಬೀಳಲಿದ್ದು, ಚುನಾವಣೆ ಘೋಷಣೆಗೆ ಮುನ್ನ ಪಕ್ಷದ ಎಲ್ಲ ನಾಯಕರು ಒಂದೇ ವೇದಿಕೆಯಡಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ನನ್ನ ಅಭಿಪ್ರಾಯ ಏನು ಅನ್ನುವುದನ್ನು ಸ್ಪಷ್ಟಪಡಿಸಿದ್ದೇನೆ. ಟಿಕೇಟ್ ನೀಡುವುದು ಬಿಡುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಮತ್ತು ಅಲ್ಲಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಹೇಳಿದರು.

ಬೆಳಗಾವಿ  ವಿಭಾಗದ ವ್ಯಾಪ್ತಿಗೆ ಬರುವ 56 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಏನಿಲ್ಲವೆಂದರೂ 44 ಸ್ಥಾನಗಳಲ್ಲಿ ಜಯ ಸಾಧಿಸುವತ್ತ ಕಾಂಗ್ರೆಸ್ ಪಕ್ಷದ ಸಂಘಟನೆಯಾಗಬೇಕಿದೆ.  ಈ ನಿಟ್ಟಿನಲ್ಲಿ ಬೂಥ್ ಮಟ್ಟದ ಏಜೆಂಟ್ ರನ್ನು ನೇಮಕ ಮಾಡುವ ಮತ್ತು ಪಕ್ಷದ ಮತದಾರರನ್ನು ಗುರುತಿಸುವ ಕೆಲಸವನ್ನು ಜೂನ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು.

 

ಸ್ಲೋಗನ್ ಅಲ್ಲ ರಿಪೋರ್ಟ್ ಕಾರ್ಡ್

ಈ ಬಾರಿ ಕಾಂಗ್ರೆಸ್ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನಪ್ರಿಯ ಸ್ಲೋಗನ್ ಗಳಿಗಿಂತ ಹೆಚ್ಚು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬಡವರ ಪರ ಜಾರಿಗೊಳಿಸಿದ ಯೋಜನೆಗಳು ಮತ್ತು ಅವುಗಳ ಯಶಸ್ವಿ ಅನುಷ್ಠಾನಗಳ ರಿಪೋರ್ಟ್ ಕಾರ್ಡ್ ಮುಂದಿರಿಸಿಕೊಂಡು ಜನರ ಬಳಿ ಮತ ಯಾಚಿಸುತ್ತೇವೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸರ್ಕಾರ ಬಡವರ ಪರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿಯೂ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ ಕಾರ್ಯಕ್ರಮಗಳ ಒಟ್ಟು ಪಟ್ಟಿಯನ್ನು ಜನರ ಎದುರು ಹಿಡಿಯಲಿದ್ದೇವೆ. ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ ಗ್ರಾಮೀಣ ಜಿಲ್ಲಾ ಮಟ್ಟದ ಸಭೆ ನಡೆಸಲಾಗಿದ್ದು ಬೆಳಗಾವಿ ನಗರ ಜಿಲ್ಲಾ ಮಟ್ಟದ ಕಾಂಗ್ರೆಸ್ ಘಟಕದ ಸಭೆಯಲ್ಲೂ ಕೂಡ ಬೂತ್ ಮಟ್ಟದಲ್ಲಿ ಏಜೆಂಟ್ ರ ನೇಮಕಕ್ಕೆ ವೇಗ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಆರ್. ಬಿ. ತಿಮ್ಮಾಪುರ, ಬೆಳಗಾವಿ ನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜು ಸೇಠ್, ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *