ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ರಾಜ್ಯದಲ್ಲಿಯೇ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ ಜಾರಕಿಹೊಳಿಯವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಟಿಕೇಟ್ ಆಕಾಂಕ್ಷಿಗಳು, ಜಿಲ್ಲೆಯ ಪದಾಧಿಕಾರಿಗಳು ಹಾಗೂ ಪಕ್ಷದ ಹಿರಿಯ ಮುಖಂಡರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಗುಪ್ತ ಸಭೆ ನಡೆಸಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ತಂತ್ರ ರೂಪಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಶಾಸಕರಾದ ಫಿರೋಜ್ ಸೇಠ, ಅಶೋಕ ಪಟ್ಟಣ, ಡಿ.ಬಿ.ಇನಾಮದಾರ, ವಿವೇಕರಾವ್ ಪಾಟೀಲ, ವೀರಕುಮಾರ ಪಾಟೀಲ, ಶ್ಯಾಮ ಘಾಟಗೆ, ಮಹಾಂತೇಶ ಕೌಜಲಗಿ, ಚಿಂಗಳೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವಾರು ಜನ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಉಸ್ತುವಾರಿ ಮಂತ್ರಿ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿಯವರು ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ತಾಕೀತು ಮಾಡಿದರೆಂದು ತಿಳಿದು ಬಂದಿದೆ.
ಸಭೆಯ ಬಳಿಕ ಅವರನ್ನು ಭೇಟಿಯಾದ ಪತ್ರಿಕೆಗಾರರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ ಜಿಲ್ಲೆಯಲ್ಲಿ 18 ಕ್ಷೇತ್ರಗಳಲ್ಲಿ 14 ಸ್ಥಾನ ಗೆಲ್ಲುವ ವಿಶ್ವಾಸ ಇದೆ. 18 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಜವಾಬ್ದಾರಿ ಸತೀಶ ಜಾರಕಿಹೊಳಿ, ಪ್ರಕಾಶ ಹುಕ್ಕೇರಿ, ವೀರಕುಮಾರ ಪಾಟೀಲ ಮತ್ತು ತಮಗೆ ವಹಿಸಲಾಗಿದೆ. ಪಕ್ಷದ ಹಿತದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.
ಒಟ್ಟಾರೆ ಬೆಳಗಾವಿ ಜಿಲ್ಲೆಯನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಲು ಜಾರಕಿಹೊಳಿ ಸಹೋದರರು ಸೆಡ್ಡು ಹೊಡೆದಿದ್ದು, ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಕಲಹವನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದ್ದಾರೆ.