Breaking News

ಬೆಳಗಾವಿಯ ಕನ್ನಡ ಊರುಗಳ ಕನ್ನಡತ್ವದ ಅಸ್ಮಿತೆ…..!!

ಪ್ರಾಧ್ಯಾಪಕ, ಪತ್ರಕರ್ತ,ಲೇಖಕ ಡಾ. ಕೆ. ಎನ್. ದೊಡ್ಡಮನಿ ಬರೆದ ವಿಶೇಷ ಲೇಖನ*

ಗಡಿ ವಿವಾದವನ್ನು ಇಷ್ಟು ವರ್ಷಗಳಿಂದ ಜೀವಂತವಾಗಿ ಕಾಯ್ದುಕೊಂಡು ಬೆಳಗಾವಿಯನ್ನು ರಾಜಕೀಯ ದಾಳವನ್ನಾಗಿ ಉರುಳಿಸುತ್ತ ಬರಲಾರಗಿದ್ದರೂ ಕನ್ನಡತ್ವದ ಶಕ್ತಿ ಕೇಂದ್ರ ಇಂದಿಗೂ ಸ್ಪೋಟಗೊಳ್ಳುವುದು ಬೆಳಗಾವಿ ಹೊರವಲಯ ಅಪ್ಪಟ್ಟ ಕನ್ನಡ ಗ್ರಾಮಗಳಲ್ಲಿ. ಪೀರನವಾಡಿ, ಮಚ್ಛೆ, ಹುಂಚೆನಟ್ಟಿ, ಮಜಗಾವಿ, ಕಾಕತಿ, ಹೊನಗಾ, ಹಲಗಾ, ಬಸ್ತವಾಡ, ಅಲರವಾಡ ಮೊದಲಾದ ಗ್ರಾಮಗಳು ಕನ್ನಡ ನಾಡಿನ ಹಬ್ಬದಲ್ಲಿ ಸ್ವಯಂ ಉತ್ಸಹದಿಂದ ಅಲಂಕೃತಗೊಂಡು ಕನ್ನಡತ್ವದ ಸೊಬಗನ್ನು ಯಾವತ್ತೂ ಕಟ್ಟಿಕೊಡುತ್ತ ಬಂದಿವೆ. ಬೆಳಗಾವಿಯಲ್ಲಿ ಒಂದು ಹಗಲು ಮತ್ತು ರಾತ್ರಿವಿಡೀ ಹೊರಡುವ ಕನ್ನಡದ ಭವ್ಯ ತೇರಿನಲ್ಲಿ ಕನ್ನಡದ ಧ್ವನಿ ಮೊಳಗಿಸುವುದು ಈ ಊರುಗಳ ಯುವಶಕ್ತಿಯೇ. ಇದರೊಟ್ಟಿಗೆ ಕನ್ನಡಪರ ಸಂಘಟನೆಗಳ ನಿರ್ಣಾಯಕ ಪಾತ್ರ ವಿಶೇಷವಾದದ್ದು. ವಡಗಾವಿಯ ನೇಕಾರ ಬಂಧುಗಳ ಕನ್ನಡ ಪ್ರೀತಿ ಹಾಗೂ ಕೆಚ್ಚು ವಿಶಿಷ್ಟವಾದದ್ದು. ಇದಕ್ಕೆ ಪೂರಕವಾಗಿ ಜಿಲ್ಲಾ ಆಡಳಿತ ಅನುಕೂಲ ಮಾಡಿಕೊಡುತ್ತ ಬಂದಿದೆ.

ಮತಬ್ಯಾಂಕಿನ ಲೆಕ್ಕಾಚಾರದ ಕೆಲ ಜನ ಪ್ರತಿನಿಧಿಗಳು ಮೊಗಮ್ಮಾಗಿ ಉಳಿದುಕೊಂಡರೆ, ಕನ್ನಡದ ಬಗ್ಗೆ ಉದ್ದುದ್ದು ಭಾಷಣ ಬಿಗಿಯುವ ಚಿಂತಕ ಬುದ್ದಿವಂತ ವಲಯ ಮೌನತೆಯ ಬೆಚ್ಚಗನ್ನು ಹೊದ್ದುಕೊಂಡು ನಿದ್ರೆಯ ಸುಖಾನುಭವದಲ್ಲಿ ತೇಲಾಡುವುದು ವಿರ‍್ಯಾಸದ ಸಾಮಾನ್ಯ ಸಂಗತಿ. ಇಂಥ ಸಂದರ್ಭದಲ್ಲಿ ಕನ್ನಡತ್ವದ ಬಗ್ಗೆ ಗಂಭೀರ ಚಿಂತನೆಗಳು ಕಾಣಲು ಸಿಗದೇ ಇರುವುದು ಬೌದ್ಧಿಕ ವಲಯದ ಶೂನ್ಯತೆಗೆ ಸಾಕ್ಷಿ.

ಕನ್ನಡ ಅಸ್ಮಿತೆ ಜಾಗೃತಗೊಳಿಸಿ ಶಕ್ತಿ ತುಂಬುವಲ್ಲಿಯ ಬೆಳಗಾವಿ ಹೊರವಲಯದ ಈ ಊರುಗಳ ಸಾಂಸ್ಕೃತಿಕ ಒಳಗೊಳ್ಳುವಿಕೆಯ ಕನ್ನಡಿಗರ ಊತಿಹಾಸಿಕ ಉದಾರತ್ವದ ಗುಣವಿಶೇಷತೆ ಸಾಕ್ಷಿಯಾಗಿವೆ. ಈ ಗ್ರಾಮಗಳ ಕನ್ನಡ ಪ್ರೀತಿಯ ಬೆಚ್ಚಗಿನ ಅನುಭವ ಹಾಗೂ ಉತ್ಸವ ಸಂದರ್ಭದಲ್ಲಿನ ಪ್ರೀತಿಯ ಉದ್ವೇಗದ ಶಕ್ತಿ ಬೆಳಗಾವಿ ಬಹುತ್ವದ ಕನ್ನಡ ನೆಲಕ್ಕೆ ನವತಾರಣ್ಯ ಒದಗಿಸುತ್ತದೆ. ಸಂಗೋಳಿ ರಾಯಣ್ಣನ ಶೌರ್ಯದ ಸ್ಪೂರ್ತಿ ಹಾಗೂ ಕನಕದಾಸರ ಮನುಷ್ಯ ಪ್ರೀತಿಯನ್ನು ಮೈಗೂಡಿಸಿಕೊಂಡಿರುವ ‘ಚಿನ್ನಾಪಟ್ಟಣ’ವೆಂದು ಆಗಾಗ ಮಮಕಾರದಿಂದ ಕರೆಯಲ್ಪಡುವ ಪೀರನವಾಡಿ ಕನ್ನಡತ್ವ ಹೋರಾಟದ ಕೇಂದ್ರ ತಾಣವಾಗಿ ಪರಿವರ್ತಿತವಾಗಿ ಗಮನ ಸೆಳೆದಿದೆ. ಈ ಊರುಗಳಲ್ಲಿನ ಕನ್ನಡ ಪ್ರೀತಿ ದ್ವೇಷ ರಹಿತ ಬಹುತ್ವದ ಮಾತೃತ್ವ. ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದ ಭುವನೇಶ್ವೇರಿ ದೇವಿ ಭಕ್ತಿಯೊಂದಿಗೆ ಐತಿಹಾಸಿಕ ಗಣ್ಯಮಹಿಮರ ಗೌರವಕ್ಕೆ ಇಲ್ಲಿ ವಿಶೇಷ ಜಾಗೆ ಇದೆ. ಬುದ್ದನ ಮಮಕಾರ, ತೀರ್ಥಂಕರರ ತ್ಯಾಗ, ಶರಣರ ಸಮಾನತೆ- ಭಾತೃತ್ವ, ಕನಕದಾಸರ ಜೀವನ ಪ್ರೀತಿ, ವೀರ ಪುಲಕೇಶಿಯ ಕನ್ನಡ ಪ್ರೇಮ, ರಾಣಿ ಚನ್ನಮ್ಮನ ವೀರತ್ವ, ಸಂಗೋಳ್ಳಿ ರಾಯಣ್ಣನ ನಿಷ್ಠೆ, ಛತ್ರಪತಿ ಶಿವಾಜಿ ಮಹಾರಾಜರ ಹೋರಾಟ, ಮಹಾತ್ಮಾ ಗಾಂಧೀಜಿಯವರ ಗ್ರಾಮ್ಯ ಪರಿಕಲ್ಪನೆ, ಬಾಬಾಸಾಹೇಬ ಅಂಬೇಡ್ಕರರ ಸ್ವಾಭಿಮಾನ, ಕೆಂಪೇಗೌಡರ ನಾಡಪ್ರೇಮ, ಪುನಿತರಾಜಕುಮಾರನ ಮಮಕಾರ ಮೊದಲಾದ ಮನುಷ್ಯಪರವಾದ ಕಾಳಜಿ, ಮಮಕಾರ, ಹೋರಾಟ, ಧೀರತ್ವ, ಭಕ್ತಿ ಸಮಗ್ರತೆಯನ್ನು ಮೇಳೈಯಿಸಿಕೊಂಡ ಕರುನಾಡಿನ ನೆಲದ ಗುಣ ವಿಶೇಷ ಪ್ರಧಾನವಾದದ್ದು.

ಈ ವರ್ಷ (೨೦೨೪) ರಾಜ್ಯೋತ್ಸವ ಬೆಳಕಿನ ಹಬ್ಬದ ಹೆಗಲಮೇಲೆ ಕೈಹಾಕಿಕೊಂಡು ಬಂದಿದ್ದು, ಕನ್ನಡದ ಸಂಭ್ರಮಕ್ಕೆ ಹೊಸ ಬೆಳಕು ಮೂಡಿಸಿದೆ. ಬೆಳಗಾವಿಯ ಈ ಕನ್ನಡ ಊರುಗಳಲ್ಲಿ ಮುಂಜಾನೆ ಹಾಯ್ದು ಬರುವಾಗ ಇಡೀ ರಾತ್ರಿ ಕಟ್ಟಿದ ಕನ್ನಡ ಸಂಭ್ರಮ ಸೂರ್ಯೋದಯದಷ್ಟೋತ್ತಿಗೆ ಹೊಸ ಬೆಳಕಿನೊಂದಿಗೆ ಕಳೆ ಕಟ್ಟಿತ್ತು. ಕೆಲ ಓಣಿಗಳಲ್ಲಿ ಕೇವಲ ದೀಪಾವಳಿ ಹಬ್ಬದ ರಂಗೋಲಿ ಚಿತ್ತಾರ ಸಂತಸ ಮೂಡಿದ್ದರೆ, ಪ್ರಮುಖ ಬೀದಿಗಳಲ್ಲಿ ಕನ್ನಡದ ಪಣತಿಯೊಳಗೆ ಹೊಸದಿಟ್ಟ ಬತ್ತಿ ದೀಪಾವಳಿಯ ಸಾಂಸ್ಕೃತಿಕ ಚಿತ್ತಾರ ಏಕತ್ವ ಸಾಧಿಸಿ, ‘ಒಳಗೊಳ್ಳುವಿಕೆಯ ಒಲವಿಗೆ’ ಸಾಕ್ಷಿಯಾಗಿತ್ತು. ಈ ಊರುಗಳ ಸಾಂಸ್ಕೃತಿಕ ಒಳಗೊಳ್ಳುವಿಕೆಯ ಒಲವಿನ ಧ್ವನಿ – ಬೆಳಗಾವಿ ನಗರದ ಉದ್ದಕ್ಕೂ ಬೆಳಕಿನ ವೇಗದೊಂದಿಗೆ ಪ್ರತಿಧ್ವನಿಗೊಂಡಿದೆ.

*- ಡಾ. ಕೆ. ಎನ್. ದೊಡ್ಡಮನಿ*

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *