ಬೆಳಗಾವಿ-
ಖಾನಾಪುರ ತಾಲೂಕಿನ ಕಿರಾವಳಿ ಗ್ರಾಮದ ಬಳಿ ಚಿರತೆಯೊಂದನ್ನು ಬೇಟೆಯಾಡಿ ಅದರ ಪಂಜು ಮತ್ತು ಎಲುಬುಗಳನ್ನು ತೆಗೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಲೋಂಡಾ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕಿರಾವಳಿ ಮಠದ ಬಳಿ ಚಿರತೆಯನ್ನು ಬೇಟೆಯಾಡಲಾಗಿದ್ದು, ಸ್ಥಳೀಯರ ಪ್ರಕಾರ ಹತ್ಯೆಯಾಗಿರುವ ಚಿರತೆಯ ಎಲುಬುಗಳು, ನಾಲ್ಕು ಕಾಲಿನ ಪಂಜುಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಲಾಗಿದ್ದು, ಚಿರತೆಯ ದೇಹದ ಮೇಲೆ ಗುಂಡು ಹಾಕಿ ಕೊಂದಿರುವ ಗುರುತು ಇದೆ.
ಈ ಭಾಗದಲ್ಲಿ ಉತ್ತರ ಭಾರತದಿಂದ ಅದರಲ್ಲೂ ಹರ್ಯಾಣ ರಾಜ್ಯದಿಂದ ಬಂದಿರುವ ವನ್ಯಜೀವಿ ಹಂತಕರು ಭೀಮಗಡ ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಸುತ್ತಲಿನ ಕಾಡುಗಳಲ್ಲಿ ಸಕ್ರಿಯವಾಗಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ಪಾಟೀಲ ಅವರು, ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಚಿರತೆ ವೃದ್ದಾಪ್ಯದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಚಿರತೆಯ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ನಂತರವೇ ತಿಳಿಯಲಿದೆ.
ಒಂದು ವೇಳೆ ಚಿರತೆಯನ್ನು ಬೇಟೆಯಾಡಿ ಕೊಂದಿದ್ದಲ್ಲಿ, ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗಸ್ತು, ಫಾರೇಸ್ಟ್ ಕ್ಯಾಂಪಿಂಗ್ ಮಾಡಲಾಗುವುದು ಎಂದು ತಿಳಿಸಿದ್ದಾರೆ