Breaking News

ಬಂಗಾರದ ಮನುಷ್ಯ’ನ ಬಗ್ಗೆ ಒಂದಿಷ್ಟು

 

ಡಾ. ಕೆ. ಎನ್. ದೊಡ್ಡಮನಿ

ಕನ್ನಡಕ್ಕೊಬ್ಬನೆ ರಾಜಕುಮಾರ್ ರೇಷ್ಠ ಕಲಾವಿದ-ಒಂದು ಶಕ್ತಿಯಾಗಿ ಹೊಸ ತಲೆಮಾರಿನಲ್ಲೂ ಶಕ್ತಿ ಸಂಚಾರಗೊಳಿಸುವ ಮುತ್ತಿನಂತ ಮನುಷ್ಯ ಡಾ. ರಾಜಕುಮಾರ ಅವರು ಇನ್ನೊಂದು ಹುಟ್ಟು ಹಬ್ಬ ಬಂದಾಗ ಸಹಜವಾಗಿ ನಮ್ಮಂಥವರ ಅಂತರಂಗದಲ್ಲಿ ಒಂದು ರೀತಿಯ ಉಲ್ಲಾಸ-ಸಂಭ್ರಮ.

ಉನ್ನತ ಅಧ್ಯಯನ ಆರಂಭವಾಗುತ್ತಿದ್ದಂತೆ ಅನೇಕ ತತ್ವಜ್ಞಾನಿಗಳು, ಚಿಂತಕರು, ಸಾಮಾಜಿಕ ಹೋರಾಟಗಾರರು  ಆದರ್ಶ ಮತ್ತು ಮಾದರಿಗಳಾಗುದಕ್ಕಿಂತ ಮುಂಚೆ, ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಮತ್ತು ನನ್ನಂಥ ಲಕ್ಷಾಂತರ ಯುವಕರಿಗೆ ‘ಬಂಗಾರದ ಮನುಷ್ಯ’ ಡಾ. ರಾಜಕುಮಾರ ಆರಾಧ್ಯ ದೈವ.

ವೈಯಕ್ತಿಕವಾಗಿ ನಾನು ರಾಜಕುಮಾರ ಸಿನಿಮಾ ನೋಡಿಯೇ ಬೆಳೆದವ. ಅವರ ವ್ಯಕ್ತಿತ್ವಕ್ಕೆ ಮಾರುಹೋದವರಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳಲು ಯಾವುದೇ ಮುಜುಗರ ಉಂಟಾಗುವುದಿಲ್ಲ. ಅವರ ಕಂಠಮಾಧುರ್ಯದ ರಸವತ್ತಾದ ಹಾಡುಗಾರಿಕೆ, ತಕ್ಕುದಾದ ಅಭಿನಯ, ಬಡವರ ಬಗ್ಗೆ ಕಳಕಳಿಯ ದೃಶ್ಯಗಳು, ಬಂಡಾಯ, ಕನಿಕರ, ರಸಿಕತೆಯಲ್ಲಿ ಎತ್ತಿದ ಕೈ ಎಲ್ಲವೂ ಮೋಡಿ ಮಾಡಿದವು. ಸಾಮಾನ್ಯವಾಗಿ ಸಿನಿಮಾ ಎಂದತಕ್ಷಣ ಗಂಡಸರು ಸುಂದರವಾದ ನಟಿಯನ್ನು,ಹೆಂಗಸರು ಸುಂದರವಾದ ನಟನನ್ನು ಮೆಚ್ಚಿಕೊಳ್ಳುವುದು ಸಹಜ. ಆದರೆ, ರಾಜಕುಮಾರರನ್ನು ಎಲ್ಲರೂ ಅತ್ಯಂತ ಪ್ರೀತಿ-ಗೌರವದಿಂದ ಈಗಲೂ ಮೆಚ್ಚಿಕೊಳ್ಳುತ್ತ ಬಂದಿರುವುದು ಒಂದು ವಿಶೇಷ. ಅವರ ಕಲಾಶ್ರೀಮಂತಿಕೆಯ ಜೊತೆಗೆ ಅವರ ಸೌಂದರ್ಯವೂ ಇದಕ್ಕೆ ಕಾರಣ.

ಕಾಯಕನಿಷ್ಠೆ, ವಿನಯಶೀಲತೆ, ಸಾಮಾಜಿಕ ಕಳಕಳಿ,ಅನ್ಯಾಯದ ವಿರುದ್ದ ಸಿಡಿದೇಳುವ ಪ್ರವೃತ್ತಿ, ಪ್ರೇಮ ಭಾವದ ರಸಿಕತೆ ಮೊದಲಾದ ಸಂಗತಿಗಳು  ರಾಜಕುಮಾರರ ಸಿನಿಮಾಗಳ ಮೂಲಕ ಆದ ಪ್ರಭಾವದಿಂದ ಇಂದಿಗೂ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಬಾ ಸಂತೋಷವಾದಾಗ ಅಥವಾ ನೋವಿನಲ್ಲಿದ್ದಾಗ, ಬೇಸರ ತಂದಾಗ ರಾಜಕುಮಾರರ ಆ ಹಾಡುಗಳು ಕೇಳುತ್ತಿದ್ದಂತೆ ಒಂದು ಬಗೆಯ ಹೊಸ ಚೈತನ್ಯ ಇಂದಿಗೂ ಮೂಡುತ್ತದೆ.   ರಾಜಕುಮಾರರ ಈ ಪ್ರಭಾವದ ಸಂಗತಿಗಳಿಂದ ಅದೆಷ್ಟೋ ಪ್ರಭಾವಿ ವ್ಯಕ್ತಿಗಳು ಬೆಳೆದಿರುವುದನ್ನು ನೆನಪಿಸಿಕೊಳ್ಳುವುದನ್ನು ಮಾಧ್ಯಮಗಳಲ್ಲಿ ನಾವು ಕಾಣುತೇವೆ. ಅಂಥ ಒಂದು ವಿಶಿಷ್ಟ ವ್ಯಕ್ತಿ ಮತ್ತು ಶಕ್ತಿ ಕನ್ನಡಕ್ಕೆ ಇನ್ನೊಬ್ಬರು ಇದುವರೆಗೆ ತುಂಬಲು ಸಾಧ್ಯವಾಗಲಿಲ್ಲ.

ಸ್ನೇಹಿತರೆ, ಕನ್ನಡದ ಈ ಶಕ್ತಿಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ದೃಷ್ಟಿಯಿಂದ ವಿಶೇಷ ಮುತವರ್ಜಿವಹಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ.ಕಾಂ. ಪ್ರಥಮ ಸೆಮಿಸ್ಟರ್ ಕನ್ನಡ ಪಠ್ಯಪುಸಕ್ತದಲ್ಲಿ ಡಾ. ಪಾಟೀಲ ಪುಟ್ಟಪ್ಪನವರು ಬರೆದ ಲೇಖನವೊಂದನ್ನು ಸಂಯೋಜನೆಗೊಳಿಸಿ ಸಮಾಧಾನ ತಂದುಕೊಳ್ಳಲು ಪ್ರಯತ್ನಿಸಿದ್ದೇನೆ. ರಾಜಕುಮಾರರನ್ನು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದಲ್ಲಿ ಅಧ್ಯಾಪಕರು ಪರಿಚಯಿಸಲಿ ಎಂದು ಒಂದಿಷ್ಟು ದೀರ್ಘವೆನ್ನುವಷ್ಟು ಹಿನ್ನಲೆ ನೀಡಿದ್ದೇನೆ. ಈ ಬಗ್ಗೆ ವಿದ್ಯಾರ್ಥಿ ಹಾಗೂ ಅಧ್ಯಾಪಕ ಸಮುದಾಯದಿಂದ ಒಳ್ಳೆಯ ಅಭಿಪ್ರಾಯಗಳು ಬಂದಿವೆ.  ರಾಜಕುಮಾರ ಬಗ್ಗೆ  ಇನ್ನೂ ಒಂದಿಷ್ಟು ಬರೆಯಬೇಕಾಗಿದೆ.

–         ಡಾ. ಕೆ. ಎನ್. ದೊಡ್ಡಮನಿ

 

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *