Breaking News

ಪ್ರಯತ್ನ ಫಲಿಸಲಿಲ್ಲ…ಕಾವೇರಿ ಬದುಕಲಿಲ್ಲ….!

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹೊಲವೊಂದರಲ್ಲಿ ಕೊರೆಯಲಾದ ಕೊಳವೆಬಾವಿಯಲ್ಲಿ  ಬಿದ್ದ ಆರು ವರ್ಷದ ಹೆಣ್ಣು ಮಗುವಿನ  ಸಂರಕ್ಷಣೆಗಾಗಿ ಶನಿವಾರ ಸಂಜೆಯಿಂದ ನಿರಂತರ ಸುಮಾರು 50 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿದರೂ ಕೊಳವೆಬಾವಿಯಲ್ಲಿ ಸಿಲುಕಿದ ಕಾವೇರಿಯನ್ನು ಜೀವಂತವಾಗಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಸೋಮವಾರ ಸಂಜೆ 6- 30 ಘಂಟೆ ಸುಮಾರಿಗೆ ರಕ್ಷಣಾ ಸಿಬ್ಬಂಧಿ ಕೊಳವೆ ಬಾವಿಯಲ್ಲಿ ಸಿಲುಕಿರುವ ಕಾವೇರಿಯ ಶವದ ಶೇ 75 ರಷ್ಟು ಭಾಗ ಹೊರಬಂದಿದೆ ಉಳಿದ ಬಾಗವನ್ನು ಮಣ್ಣಿನಿಂದ ಹೊರ ತೆಗೆಯಲು ರಕ್ಷಣಾ ಸಿಬ್ಬಂಧಿ ತಮ್ಮ ರಕ್ಷಣಾ ಕಾರ್ಯವನ್ನು ಮುಂದುವರೆಸಿದ್ದಾರೆ ಎಂದು ಕೆಲವು  ದೃಶ್ಯಮಾದ್ಯಮಗಳಲ್ಲಿ ಸುದ್ಧಿ ಪ್ರಸಾರವಾಗುತ್ತಿದೆ

ವೈದ್ಯರ ತಂಡ ಸ್ಥಳದಲ್ಲಿ ಬೀಡಾರ ಹೂಡಿದ್ದು ಕಾವೇರಿಯ ಶವವನ್ನು ಸಂಪೂರ್ಣವಾಗಿ ಹೊರ ತೆಗೆದ ನಂತರ ಜಿಲ್ಲಾಡಳಿತ ಕಾವೇರಿಯ ಸಾವನ್ನು ಖಚಿತಪಡಿಸಲಿದೆ ಎಂದು ಕೆಲವು ದೃಶ್ಯ ಮಾದ್ಯಮಗಳು ಸುದ್ಧಿ ಯನ್ನು ಬಿತ್ತರಿಸುತ್ತಿವೆ

ಮಗುವನ್ನು ಜೀವಂತವಾಗಿ ಪಡೆದುಕೊಳ್ಳಲು ಅನೇಕ ಬಗೆಯ ಪ್ರಯತ್ನ ನಡೆದರೂ ಕಲ್ಲಬಂಡೆಗಳ ಕಾರಣದಿಂದಾಗಿ ಅಡೆತಡೆಗಳುಯುಂಟಾದರೂ ಅದನ್ನು ಲೆಕ್ಕಿಸದೆ ಕೊಳವೆಬಾವಿಯ ಮಗ್ಗಲಲ್ಲಿ ಬಾವಿ ಕೊರೆದು, ಅಡ್ಡಲಾಗಿ ಸುರಂಗ ಮಾರ್ಗದ ಮೂಲಕ ಪ್ರವೇಸಿ ಮಗುವನ್ನು ಭೂರ್ಗದಿಂದ ಹೊರತರುವಲ್ಲಿ ಹಟ್ಟಚಿನ್ನದ ಗಣಿಯ ತಂಡ ಯಶಸ್ವಿಯಾಗಿದೆಯಾದರೂ ಕಾವೇರಿ ಜೀವಂತವಾಗಿ ದಕ್ಕಲಿಲ್ಲ ಎಂಬ ಅವ್ಯಕ್ತ ನೋವು ಆವರಿಸಿಕೊಂಡಿದೆ.

ಸುಮಾರು 22 ಅಡಿಗಳ ಆಳದಲ್ಲಿ ಸಿಲುಕಿದ ಮಗುವಿನ ಮೇಲೆ ಮಣ್ಣು ಉಳಿರುಳಿಬಿದ್ದ ಕಾರಣ ಮಗು ಉಸುರಿಗಟ್ಟಿ ಅಸುನೀಗಿದೆ. ಶನಿವಾರ ಸಂಜೆ ಐದುವರೆ ಗಂಟೆಯ ಹೊತ್ತಿಗೆ ಮಗು ಕೊಳವೆಬಾವಿಯಲ್ಲಿ ಬಿದ್ದಾಗ ಆಕೆಯೊಂದಿಗೆ ಆಟವಾಡುತ್ತಿದ್ದ ಮಕ್ಕಳಿಂದ ಮಾಹಿತಿ ಪಡೆದುಕೊಂಡ ತಾಯಿ ಸವಿತಾ ಕೊಳವೆ ಬಾವಿಯಲ್ಲಿ ಕಾವೇರಿಯನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಕೆಲ ಸಮಯ ಪ್ರತಿಕ್ರಿಯೆ ನೀಡಿದ್ದಾಳೆ. ನಂತರ ಮಾತು ಬರದೇ ಇದ್ದಾಗ ಕೊಳವೆಬಾವಿಯಲ್ಲಿ ಹಗ್ಗ ಇಳಿಬಿಟ್ಟು ತಾಯಿ ಮಗಳನ್ನು ಮೇಲೆಕ್ಕೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನಂತರ ಕಾರ್ಯಾರಣೆಗೆ ಇಳಿದ ತಂಡ ಕೊಳವೆಬಾವಿಯಲ್ಲಿ ಕ್ಯಾಮರಾ ಇಳಿಬಿಟ್ಟಾಗ ಮಗುವಿನ ಬಟ್ಟೆ, ತಲೆಗೂದಲಿನ ದೃಶ್ಯ ಕಂಡು ಬರುತ್ತಿದೆ ಎಂಬ ಮಾಹಿತಿ ನೀಡಿತ್ತು.  ನಂತರ 22 ಗಡಿ ಆಳದಲ್ಲಿ ಮಗುವಿನ ಕೈಕಾಣಿಸಿಕೊಂಡಿದೆ. ಹುಕ್ಕಿನ ಮೂಲಕ ಮಗುವನ್ನು ಮೇಲೆಕ್ಕತ್ತಲ್ಲು ಮಾಡಿದ ಪ್ರಯತ್ನ ವಿಫಲವಾಗಿದೆ.

ನಂತರ ಮಹಾರಾಷ್ಟ್ರದ ಪುಣೆಯಿಂದ ಕರೆತರಲಾದ ಎನ್.ಡಿ.ಆರ್.ಎಫ್ ತಂಡದ ಕಾರ್ಯಚರಣೆ ಮೂಲಕ ಕೊಳವೆಬಾವಿಯ ತುಸು ದೂರದಲ್ಲಿ ನೆಲ ಅಗೆಯುವ ಕಾರ್ಯ ನಡೆಸಿದರೂ ಸುಮಾರು 12 ಅಡಿಗಳ ನಂತರ ದೊಡ್ಡ ಪ್ರಮಾಣದ ಬಂಡೆಗಲ್ಲುಗಳು ಎದುರಾದ ಕಾರಣ ಈ ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ನಂತರ ಬಂದ ಹಟ್ಟಿ ಚಿನ್ನದ ಗಣಿಯ ತಂಡದವರು ಕೊಳವೆಬಾವಿಯಲ್ಲಿ ಸಮೀಪ ಸ್ವಲ್ಪವೂ ಬಿಡುವಿಲ್ಲದೆ ಹಗಲು ರಾತ್ರಿ ಸುಮಾರು 25 ಅಡಿಗಳ ಆಳದ ವರೆಗೆ ಬಾವಿತೋಡಿ ಅಡ್ಡಲಾಗಿ  ಸುರಂಗ ಮಾರ್ಗ ಸೃಷ್ಟಿಸಿ ಕೊಳವೆಬಾವಿಯಿಂದ ಮಗುವನ್ನು ಹೊರತೆಗೆಯುವ ಸಾಹಸ ಮೆರೆದಿದೆ.

ಈ ಕಾರ್ಯಾಚರಣೆಯಲ್ಲಿ ಪುಣೆಯ ಎನ್.ಡಿ.ಆರ್. ಎಫ್ ತಂಡ, ಹಟ್ಟಿ ಚಿನ್ನದ ಗಣಿ ತಂಡ, ಅಗ್ನಿ ಶಾಮಕದಳ ನಿರಂತರ ಶ್ರಮ ಬೆರಗುಮೂಡಿಸಿದೆ.  ಸುಮಾರು 500 ಜನ ಸಿಬ್ಬಂದಿಯವರು ನಿರಂತರ ಶ್ರಮಿಸಿದ್ದಾರೆ.  ನಾಲ್ಕೈದು ಜೆಸಿಬಿ ಯಂತ್ರಗಳನ್ನು ಬಳಸಲಾಯಿತು. ಯಾವುದೇ ಕಾರಣಕ್ಕೂ ಮಗುವನ್ನು ಜೀವಂತವಾಗಿ ಪಾಲಕರಿಗೆ ಒಪ್ಪಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಆಡಳಿತ ಹಾಗೂ ಅಥಣಿ ತಾಲೂಕಾ ಆಡಳಿತ, ಪುರಸಬೆ ಸ್ಥಳದಲ್ಲಿಯೇ ಬೀಡುಬಿಟ್ಟಿತ್ತು. ಬೆಳಗಾವಿ ಜಿಲ್ಲಾಧಿಕಾರಿಗಳಾದ ಎನ್. ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರವಿಕಾಂತೆಗೌಡ ಹಾಗೂ ಇನ್ನುಳಿದ ಹಿರಿಯ ಅಧಿಕಾರಿಗಳು ಸತತ ಎರಡು ದಿನಗಳ ಕಾಲ ಘಟನಾ ಸ್ಥಳದಲ್ಲಿಯೇ ಬೀಡುಬಿಟ್ಟು ಕಾರ್ಯಚರಣೆಗೆ ಸಾಥ್ ನೀಡಿದರು. ಆದರೆ, ದುರದೃಷ್ಟವಶಾತ್ ಮಗು ಜೀವಂತವಾಗಿ ಕೈಗೆಟುಕಲು ಸಾಧ್ಯವಾಗಲಿಲ್ಲ.

ಮಗುವಿನ ದುರಂತದಿಂದ ಆಘಾತಕ್ಕೆ ಒಳಗಾದ ಮಗುವಿನ ತಂದೆ ತಾಯಿ ಸಂಬಂಧಿಕರ ಆಕ್ರಂಧನ ಮನ ಕರಗುವಂತಿತ್ತು. ಎರಡು ದಿನಗಳವರೆಗೆ ಅನ್ನ ನೀರು ಬಿಟ್ಟ ಮಗುವಿನ ತಾಯಿ ಸವಿತಾಳ ಆರೋಗ್ಯ ಅಸ್ವಸ್ಥಗೊಂಡ ಕಾರಣ, ಸಮೀಪದ ಕೊಕಟನೂರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು.  ನಾಡಿನ ಜನತೆ ಕಾವೇರಿ ದುರಂತಕ್ಕೆ ಮರುಕಪಟ್ಟಿದೆ. ಸುರಕ್ಷಿತವಾಗಿ ಹೊರಬರಲೆಂದು ಸಾರ್ವಜನಿಕರು ಪೂಜೆ ಪುನಸ್ಕಾರ ಮಾಡಿದರು. ಆದರೆ, ಭೂಗರ್ಭ ಸೇರಿದ ಕಾವೇರಿ ಮತ್ತೇ ಜೀವಸಹಿತ ಕೈಯಿಗೆ ಸಿಗಲಿಲ್ಲ ಎಂಬ ನೋವು ಮಡಗಟ್ಟಿದೆ.

ದುರಂತಕ್ಕೆ ಕಾರಣವಾದ ಕೊಳವೆಬಾವಿ ಕೊರೆಯಿಸಿದ ಜಮೀನಿನ ಮಾಲಿಕನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಮುಗ್ಧ ಮಕ್ಕಳು ಈ ರೀತಿ ಬಲಿಯಾದಂತೆ ಜಿಲ್ಲಾ ಆಡಳಿತ ನಿಷ್ಕ್ರಿಯೆಗೊಂಡ ಕೊಳವೆಬಾವಿಗಳ ಮುಚ್ಚುವುದಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದೆ. ಇನ್ನಾದರೂ ಕೊಳವೆಬಾವಿಗಳನ್ನು ಕೊರೆಯಿಸಿದವರು ಎಚ್ಚರವಹಿಸಿ ಮಗ್ಧ ಮಕ್ಕಳ ಪ್ರಾಣ ಹಾನಿಯಾದಂತೆ ಪಾಠ ಕಲಿಯಬೇಕಾದ ಅವಶ್ಯಕತೆಯಿದೆ.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.