ಬೆಳಗಾವಿ
ಬೆಳಗಾವಿಯಲ್ಲಿ ಸ್ವಾವಲಂಬಿ ಭಾರತ, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಅಡಿಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಾಹನ ತಯಾರಿಕಾ ಉದ್ಯಮವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕೆಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಕಿರಣ್ ಜಾಧವ ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದರು.
ಬೆಳಗಾವಿಯಲ್ಲಿ ನೆಲಬಾಂಬ್ ಪತ್ತೆಗೆ ಹಾಗೂ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಇತರ ಪ್ರಮುಖ ಕೆಲಸಗಳಿಗೆ ಗುಂಡು ನಿರೋಧಕ ಮತ್ತು ದಾಳಿ ನಿರೋಧಕ ವಾಹನಗಳನ್ನು ತಯಾರಿಸುವ ಕಾರ್ಖಾನೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸುವಂತೆ ರಕ್ಷಣಾ ಸಚಿವರಲ್ಲಿ ವಿನಂತಿಸಿದರು. ಅಲ್ಲದೆ, ದೇಶದಲ್ಲಿ ಅಗ್ನಿಪಥ ಯೋಜನೆ ಜಾರಿಗೆ ತಂದಿರುವುದಕ್ಕೆ ರಕ್ಷಣಾ ಸಚಿವರಿಗೆ ಕಿರಣ್ ಅಭಿನಂದನೆಗಳನ್ನು ತಿಳಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಿರಣ್ ಜಾಧವ್, ರಕ್ಷಣಾ ಪಡೆಗೆ ಸಂಬಂಧಿಸಿದ ಈ ವಾಹನ ತಯಾರಿಕಾ ಕಾರ್ಖಾನೆ ಬೆಳಗಾವಿಯಲ್ಲಿ ಆರಂಭವಾದರೆ ಈ ಭಾಗದ ಸುಮಾರು ಎರಡೂವರೆ ಮೂರು ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿದ್ದು, ಇದರ ಈಡೇರಿಕೆಗೂ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಕನಸು ಸಮರ್ಥ ಭಾರತ ನಿರ್ಮಾಣ ಮಾಡಲು ಸಹಕಾರವಾಗುತ್ತದೆ ಎಂದರು.
ಉದ್ಯಮ ಬಾಗ್ ಪ್ರದೇಶದ ಕೆಲವು ಕಾರ್ಖಾನೆ ಮಾಲೀಕರು ಈ ವಾಹನ ಉತ್ಪಾದನಾ ಉದ್ಯಮದ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ತಮ್ಮ ಸಿದ್ಧತೆಯನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ ಎಂದರು.