Breaking News

ಕಿತ್ತೂರು ಉತ್ಸವಕ್ಕೆ ಎರಡು ಕೋಟಿ,ಬೆಂಗಳೂರಿಗೆ ಜ್ಯೋತಿ….!!

ಬೆಳಗಾವಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಈ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲಾಗುತ್ತಿದ್ದು, ಸರಕಾರ ಎರಡು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿರುತ್ತದೆ. ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸಲಿರುವ ವೀರಜ್ಯೋತಿಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.2 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಮಹಾಂತೇಶ್ ದೊಡ್ಡಗೌಡ್ರ ತಿಳಿಸಿದರು.

ಚೆನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಶುಕ್ರವಾರ (ಸೆ.30) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚೆನ್ನಮ್ಮ ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಆಚರಣೆ; ರಾಜ್ಯದಾದ್ಯಂತ ವೀರಜ್ಯೋತಿಯಾತ್ರೆ ಸಂಚಾರ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಡೇರಿಸಿದ್ದಾರೆ.

ಅ.2 ರಂದು ಮುಖ್ಯಮಂತ್ರಿಗಳು ಸ್ವತಃ ವೀರಜ್ಯೋತಿಯಾತ್ರೆಗೆ ಚಾಲನೆ ನೀಡಲಿದ್ದಾರೆ. ವೀರಜ್ಯೋತಿಯಾತ್ರೆಯನ್ನು ಎಲ್ಲ ಜಿಲ್ಲೆಗಳಲ್ಲಿ ಅತ್ಯಂತ ಗೌರವಯುತವಾಗಿ ಸ್ವಾಗತಿಸಿ ಬೀಳ್ಕೊಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರಕಾರ ಆದೇಶ ನೀಡಲಿದೆ ಎಂದು ಶಾಸಕ ಮಹಾಂತೇಶ್ ದೊಡ್ಡಗೌಡ್ರ ಹೇಳಿದರು.
ಪ್ರತಿಯೊಬ್ಬರು ಸ್ವಯಂಪ್ರೇರಣೆಯಿಂದ ಉತ್ಸವದಲ್ಲಿ ಭಾಗವಹಿಸುವ ಮೂಲಕ ಕಿತ್ತೂರು ಉತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದು ಮನವಿ ಮಾಡಿಕೊಂಡರು.

ಎರಡು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದ್ದು, ಈಗಾಗಲೇ ಒಂದು ಕೋಟಿ ರೂಪಾಯಿ ಬಿಡುಗಡೆಯಾಗಿರುತ್ತದೆ. ಉಳಿದ ಅನುದಾನ ಬಿಡುಗಡೆ ಉತ್ಸವ ಆರಂಭಗೊಳ್ಳುವ ವೇಳೆಗೆ ಬಿಡುಗಡೆಯಾಗಲಿದೆ ಎಂದರು.

ಮೂರು ವೇದಿಕೆ-ವಿಶಿಷ್ಟ ವಸ್ತುಪ್ರದರ್ಶನ:

ಈ ಬಾರಿ ಉತ್ಸವದಲ್ಲಿ ಮೂರು‌ ವೇದಿಕೆ ನಿರ್ಮಿಸಲಾಗುವುದು. ಮಹಿಳೆಯರಿಗಾಗಿ ಒಂದು ದಿನ ಮೀಸಲಿಡಲು ನಿರ್ಧರಿಸಲಾಗಿದೆ. ಇದೇ ರೀತಿ ವಿವಿಧ ಬಗೆಯ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ದೊರಕಲಿದೆ ಎಂದು ಶಾಸಕ ದೊಡ್ಡಗೌಡ್ರ ಹೇಳಿದರು.

ಆಹಾರ, ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಬಗೆಯ ವಸ್ತುಪ್ರದರ್ಶನ ಮೇಳವನ್ನು ಆಯೋಜಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಇದಲ್ಲದೇ ಮೂರು ದಿನಗಳ ಕಾಲ ಅತ್ಯುತ್ತಮ ದೀಪಾಲಂಕಾರ ಮಾಡಲು ಟೆಂಡರ್ ನೀಡಲಾಗುವುದು ಎಂದು ತಿಳಿಸಿದರು.

ಕಿತ್ತೂರು ಪಟ್ಟಣ ಮತ್ತು ಕೋಟೆಯ ಆವರಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.
ಚೆನ್ನಮ್ಮ ಉತ್ಸವದಲ್ಲಿ ವಿವಿಧ ಸಮಿತಿಗಳಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಹೆಸರು ನೋಂದಾಯಿಸಲು ತಹಶೀಲ್ದಾರ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು ಎಂದು ಹೇಳಿದರು.

ಉತ್ಸವ ಯಶಸ್ವಿಗೆ ಪೂರ್ವಸಿದ್ಧತೆ ಆರಂಭ:

ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಘೋಷಣೆಯಾಗಿದೆ. ಈ ಬಾರಿ ಎರಡು ಕೋಟಿ ರೂಪಾಯಿ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮೊದಲ ಬಾರಿ ರಾಜ್ಯಮಟ್ಟದ ಉತ್ಸವವನ್ನಾಗಿ ಸಂಭ್ರಮದಿಂದ ಅಚರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾಂಸ್ಕೃತಿಕ ಸಮಿತಿಯು ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರಿಗೆ ಅವಕಾಶ ನೀಡಲಿದೆ.
ಈ ಬಾರಿಯ ಉತ್ಸವದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗುವುದು. ಇತಿಹಾಸ ತಜ್ಞರ ಜತೆ ಚರ್ಚಿಸಿ ಈ‌ ವೇದಿಕೆಗಳಿಗೆ ಹೆಸರುಗಳನ್ನು ಇಡಲಾಗುವುದು.

ಮುಖ್ಯಮಂತ್ರಿಗಳ ಜತೆ ಚರ್ಚಿಸಿ ರಾಷ್ಟ್ರಪತಿ ಅಥವಾ ಇತರೆ ಗಣ್ಯರನ್ನು ಆಹ್ವಾನಿಸುವ ಕುರಿತು ತೀರ್ಮಾನಿಸಲಾಗುವುದು.
ಕೋಟೆಯ ಆವರರಣದ ಸ್ವಚ್ಛತೆಯ ಕೆಲಸವನ್ನು ನಾಳೆಯಿಂದಲೇ ಆರಂಭಿಸಲಾಗುವುದು. ಮುಂಬರುವ ದಿನಗಳಲ್ಲಿ ವರ್ಷವಿಡೀ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು.

ಮೂರು ವೇದಿಕೆಗಳಲ್ಲಿ ಮೂರು ದಿನಗಳ ಕಾಲ‌ ನಡೆಯಲಿರುವ ಕಾರ್ಯಕ್ರಮಗಳ ಪಟ್ಟಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುವುದು.
ವೀರಜ್ಯೋತಿಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ(ಅ.2) ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚೆನ್ನಮ್ಮ ಜನ್ಮಸ್ಥಳ ಅಭಿವೃದ್ದಿಗೆ ಕ್ರಮ:

ಕಾಕತಿಯಲ್ಲಿರುವ ಚೆನ್ನಮ್ಮನ ಜನ್ಮಸ್ಥಳವಾಗಿರುವ ವಾಡೆ ಖರೀದಿಸಲು ಸರಕಾರ 30 ಲಕ್ಷ ಅನುದಾನ ಒದಗಿಸಿದೆ. ಇದರ ವಾರಸುದಾರರು ಬೇರೆ ಕಡೆ ಇದ್ದು ಅವರೊಂದಿಗೆ ಚರ್ಚೆ ನಡೆದಿದೆ.
ಆದಷ್ಟು ಬೇಗನೇ ಆ ಜಾಗೆಯನ್ನು ಖರೀದಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಸಾನಿಧ್ಯ ವಹಿಸಿದ್ದ ಕಿತ್ತೂರು ಕಲ್ಮಠದ ರಾಜಯೋಗೀಂದ್ರ ಮಡಿವಾಳೇಶ್ವರ ಸ್ವಾಮೀಜಿ ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು, ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಕಿತ್ತೂರು ಚೆನ್ನಮ್ಮನ ಉತ್ಸವವನ್ನು ಈ ಬಾರಿ ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲಾಗುವುದು ಎಂದರು.
ಪ್ರಸಕ್ತ ವರ್ಷ ಮೂರು‌ ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮೋದನೆ ದೊರೆತಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಡಿವೈಎಸ್ಪಿ ಶಿವಾನಂದ ಕಟಗಿ, ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಉಳಿವೆಪ್ಪ ಉಳ್ಳಾಗಡ್ಡಿ, ಮುತ್ನಾಳ, ಡಿಡಿಪಿಐ ಬಸವರಾಜ ನಾಲತವಾಡ ಮತ್ತಿತರರು ಉಪಸ್ಥಿತರಿದ್ದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಸ್ವಾಗತಿಸಿದರು.
ಉತ್ಸವದ ಯಶಸ್ವಿಗಾಗಿ ರಚಿಸಲಾಗಿರುವ 15 ವಿವಿಧ ಉಪ ಸಮಿತಿಯ ಕುರಿತು ಮಾಹಿತಿಯನ್ನು ನೀಡಿದರು.

ನಾಗರಿಕರ ಸಲಹೆ-ಸೂಚನೆಗಳು:

ರಾಷ್ಟ್ರಪತಿ ದ್ರೌಪದಿ ಮುರ್ಮು ಅಥವಾ ಪ್ರಧಾನಮಂತ್ರಿ ಅವರನ್ನು ಉತ್ಸವಕ್ಕೆ ಆಹ್ವಾನಿಸಬೇಕು; ಪ್ರತಿಯೊಬ್ಬರಿಗೂ ಕಾರ್ಯಕ್ರಮ ಪಟ್ಟಿ ತಲುಪಿಸಲು ಕರಪತ್ರಗಳನ್ನು ಮುದ್ರಿಸಿ ಹಂಚಬೇಕು; ಸ್ವಾತಂತ್ರ್ಯ ಯೋಧರು-ವೀರಸೈನಿಕರನ್ನು ಸನ್ಮಾನಿಸಬೇಕು; ಕೃಷಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು; ಸೇನಾ ದಂಡ ನಾಯಕರಾಗಿದ್ದ ಸರದಾರ ಗುರುಶಿದ್ದಪ್ಪನವರ ತ್ಯಾಗ-ಬಲಿದಾನದ ಮೇಲೆ ಬೆಳುಕು ಚೆಲ್ಲುವ ಕೆಲಸವಾಗಬೇಕು; ಚನ್ನಮ್ಮನ ಜನ್ಮಸ್ಥಳ ಕಾಕತಿಯಲ್ಲಿ ಅಭಿವೃದ್ಧಿ ಕೆಲಸವಾಗಬೇಕು; ಉತ್ಸವದ ಸಂದರ್ಭದಲ್ಲಿ ಪಟ್ಟಣದ ಸ್ವಚ್ಛತೆ ಹಾಗೂ ಮೂಲಸೌಕರ್ಯವನ್ನು ಒದಗಿಸಬೇಕು; ದಸರಾ ಕ್ರೀಡಾಕೂಟ ಮಾದರಿಯಲ್ಲಿ ಕ್ರೀಡೆಗಳನ್ನು ಏರ್ಪಡಿಸಬೇಕು ಎಂಬುದು ಸೇರಿದಂತೆ ಒಟ್ಟಾರೆ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *