ಬೆಳಗಾವಿ:
ಐತಿಹಾಸಿಕ ಚನ್ನಮ್ಮನ ಕಿತ್ತೂರು ಕೋಟೆಯ ನೂರು ಮೀಟರ್ ವ್ಯಾಪ್ತಿ ಪ್ರದೇಶದ ಒಳಗಡೆ ಇರುವ ಎಲ್ಲ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕಿತ್ತೂರು ಪಟ್ಟಣ ಪಂಚಾಯಿತಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಚನ್ನಮ್ಮನ ಕಿತ್ತೂರಿನಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ಅವರು, ಕಿತ್ತೂರು ಕೋಟೆ ಐತಿಹಾಸಿಕ ಸ್ಮಾರಕವಾಗಿದೆ. ಈ ಕೋಟೆ ಸುತ್ತಲೂ ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ಇದರಿಂದ ಕಿತ್ತೂರು ಕೋಟೆ ಕಾಣದಾಗಿದೆ. ಕೋಟೆಯ ಸಂರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು, ಕೋಟೆಯ ಸುತ್ತುವರೆದು ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸುವಂತೆ ಕಿತ್ತೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚನ್ನಮ್ಮನ ಕಿತ್ತೂರಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾದ್ವಾರವನ್ನು ನಿರ್ಮಿಸಲಾಗುತ್ತಿದೆ. ಈ ಮಹಾದ್ವಾರದ ಸೌಂದರ್ಯಿಕರಣಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. 2007ರಿಂದ ಇಲ್ಲಿವರೆಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 12 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ 11 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ. ಪ್ರಾಧಿಕಾರದಿಂದ ನಡೆಯುತ್ತಿರುವ ಬೈಲಹೊಂಗಲದಲ್ಲಿರುವ ವೀರರಾಣಿ ಕಿತ್ತೂರರಾಣಿ ಚನ್ನಮ್ಮ ಸಮಾಧಿ, ಸಂಗೊಳ್ಳಿ ರಾಯಣ್ಣ ಉದ್ಯಾನವನ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.
ಶಾಸಕ ವಿಶ್ವನಾಥ ಪಾಟೀಲ, ವಿವೇಕರಾವ್ ಪಾಟೀಲ, ಜಿಲ್ಲಾಧಿಕಾರಿ ಎನ್.ಜಯರಾಮ್, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಸೇರಿದಂತೆ ಪ್ರಾಧಿಕಾರದ ಸದಸ್ಯರು ಭಾಗವಹಿಸಿದ್ದರು. ಆದರೆ ಕಿತ್ತೂರು ಶಾಸಕ ಡಿ.ಬಿ.ಇನಾಮದಾರ ಹಾಜರಿಲ್ಲದಿರುವುದು ಚರ್ಚೆಗೆ ಗ್ರಾಸವಾಯಿತು.
ಕಿತ್ತೂರು ಕೋಟೆ ವೀಕ್ಷಣೆ:
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶನಿವಾರ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಐತಿಹಾಸಿಕ ಕೋಟೆಯನ್ನು ವೀಕ್ಷಿಸಿದರು. ಕೋಟೆಯ ಸುತ್ತಲೂ ಬೆಳೆದಿರುವ ಗಿಡಗಂಡಿಗಳನ್ನು ಸ್ವಚ್ಚಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಎನ್.ಜಯರಾಮ್ ಕೋಟೆ ವೀಕ್ಷಣೆಯಲ್ಲಿ ಸಚಿವರಿಗೆ ಸಾಥ್ ನೀಡಿದರು.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …