ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡರೆ ಅವರ ಸಿಎಂ ಸ್ಥಾನ ಹೋಗುತ್ತದೆ ಎನ್ನುವ ಮೂಡನಂಬಿಕೆ ಇದೆ.ಈ ಮೂಡನಂಬಿಕೆಗೆ ಹೆದರಿ ಬಹಳಷ್ಟು ಜನ ಮುಖ್ಯಮಂತ್ರಿಗಳು ಕಿತ್ತೂರಿಗೆ ಬಂದಿರಲಿಲ್ಲ.ಆದ್ರೆ ಸಿಎಂ ಬಸವರಾಜ ಬೊಮ್ಮಾಯಿ ಕಿತ್ತೂರು ಉತ್ಸವದಲ್ಲಿ ಪಾಲ್ಗೊಂಡು ಮೌಡ್ಯದ ವಿರುದ್ದ ಸೆಡ್ಡು ಹೊಡೆಯಲಿದ್ದಾರೆ.
ಬೆಳಗಾವಿ- ರಾಣಿ ಚೆನ್ಮಮ್ಮನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಎಂದು ಘೋಷಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ. ಉತ್ಸವವನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಈ ಕುರಿತು ಮನವಿ ಮಾಡಲಾಗುವುದು ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಅ.18)
ಕಿತ್ತೂರು ಉತ್ಸವ – 2021 ರ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
1997 ರಿಂದ ಉತ್ಸವ ಆಚರಣೆ ಆರಂಭಗೊಂಡಿದ್ದು, 1998 ರಿಂದ ಸರಕಾರದ ವತಿಯಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ಬಾರಿ ಕಿತ್ತೂರು ಉತ್ಸವದ ಬೆಳ್ಳಿಹಬ್ಬ ಆಚರಿಸಲಾಗುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಸರಳ ಆಚರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಮಟ್ಟದ ಉತ್ಸವ ಘೋಷಣೆಗೆ ಒತ್ತಾಯ :
ಜಿಲ್ಲಾ ಉತ್ಸವಗಳಿಗೆ 30 ಲಕ್ಷ ನೀಡಲಾಗುತ್ತಿದೆ. ಈ ವರ್ಷ 75 ಲಕ್ಷ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಎಂದು ಸರಕಾರ ಘೋಷಿಸಿದರೆ ಪ್ರತಿವರ್ಷ 2 ರಿಂದ 5 ಕೋಟಿ ರೂಪಾಯಿ ಅನುದಾನ ದೊರಕಲಿದೆ. ಆದ್ದರಿಂದ, ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದ ಉತ್ಸವ ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ತಿಳಿಸಿದರು.
ಅ.23 ಹಾಗೂ ಅ.24 ರಂದು ನಡೆಯಲಿರುವ ಕಿತ್ತೂರು ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಚಾರ ಗೋಷ್ಠಿಗಳಿಗೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುವುದು. ಉತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ, ಜಿಲ್ಲಾಧಿಕಾರಿ ಹಾಗೂ ಕಿತ್ತೂರು ಚನ್ನಮ್ಮ ಉತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಜಿ. ಹಿರೇಮಠ,
ಅ.23 ಹಾಗೂ 24 ರಂದು ಕಿತ್ತೂರು ಉತ್ಸವ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಮಹಾಂತೇಶ ದೊಡ್ಡಗೌಡ್ರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಉತ್ಸವದ ಎರಡನೇಯ ದಿನವಾದ ಅ.24 ರಂದು ಕಿತ್ತೂರು ರಾಣಿ ಚನ್ನಮ್ಮನ ಚರಿತ್ರೆ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ರಾಣಿ ಚನ್ನಮ್ಮ ಮತ್ತು ಬಿಚಗತ್ತಿ ಚನ್ನಬಸಪ್ಪ, ರಾಣಿ ಚನ್ನಮ್ಮನ ಪೂರ್ವಜರ ಚರಿತ್ರೆ, ರಾಣಿ ಚನ್ನಮ್ಮ ಮತ್ತು ಬ್ರಿಟಿಷ್ ಸೆರೆಯಾಳುಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಒಟ್ಟು ಏಳು ವಿಚಾರಗೋಷ್ಠಿಗಳು ನಡೆಯಲಿವೆ.
ಇದರೊಂದಿಗೆ ಸೈಕ್ಲಿಂಗ್, ಮುಕ್ತ ವಾಲಿಬಾಲ್ ಮತ್ತಿತರ ಕ್ರೀಡೆಗಳು ನಡೆಯಲಿವೆ. ಜಿಲ್ಲೆಯ ಹಾಗೂ ರಾಜ್ಯಮಟ್ಟದ ಕಲಾವಿದರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಈ ಸಲದ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜ್ಯೋತಿ ಯಾತ್ರೆಯು ಅ.18 ರಂದು ಬೈಲಹೊಂಗಲದಿಂದ ಆರಂಭಗೊಂಡಿದ್ದು, ಅ.23 ರಂದು ಕಿತ್ತೂರಿನಲ್ಲಿ ಜ್ಯೋತಿಯನ್ನು ಸ್ವಾಗತಿಸಲಾಗುವುದು. ಉತ್ಸವಕ್ಕೆ ಒಟ್ಟಾರೆ 1.05 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಲಿದೆ. ಈ ಅನುದಾನವನ್ನು ಬಳಕೆ ಮಾಡಿಕೊಂಡು ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಕಿತ್ತೂರು ಚನ್ನಮ್ಮ ಉತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಜಿ. ಹಿರೇಮಠ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಡಾ.ಈಶ್ವರ ಉಳ್ಳಾಗಡ್ಡಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.
*******