Breaking News

ಈ ವರ್ಷ ಒಂದೇ ದಿನ,ಮುಂದಿನ ವರ್ಷ ಅದ್ದೂರಿ ಕಿತ್ತೂರು ಉತ್ಸವ

ಬೆಳಗಾವಿ,-ಕೋವಿಡ್-೧೯ ಹಿನ್ನೆಲೆಯಲ್ಲಿ ಜನರ ಒಮ್ಮತದ ಅಭಿಪ್ರಾಯದಂತೆ ಇದೇ ಅಕ್ಟೋಬರ್ 23 ರಂದು ಒಂದು ದಿನ ಮಾತ್ರ ಸಂಪ್ರದಾಯಬದ್ಧವಾಗಿ ಸರಳರೀತಿಯಲ್ಲಿ ಕಿತ್ತೂರು ಉತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರು ತಿಳಿಸಿದ್ದಾರೆ.

ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ಚೆನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ (ಸೆ.30) ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚೆನ್ನಮ್ಮ ಸ್ವಾಭಿಮಾನದ ಸಂಕೇತ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಜೀವ ರಕ್ಷಣೆ ಮುಖ್ಯವಾಗಿದೆ.
ಆದ್ದರಿಂದ ಈ ಬಾರಿ ಮೂರು ದಿನಗಳ ಅದ್ಧೂರಿ ಉತ್ಸವದ ಬದಲಾಗಿ ಸಂಪ್ರದಾಯದಂತೆ ಜ್ಯೋತಿಯಾತ್ರೆ; ವಿಜಯದ ಸಂಕೇತವಾದ ದೀಪೋತ್ಸವ; ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರಳ ರೀತಿಯಲ್ಲಿ ಒಂದು ದಿನ ಮಾತ್ರ ಉತ್ಸವವನ್ನು ಆಚರಿಸಲಾಗುವುದು ಎಂದು ತಿಳಿಸಿದರು.

ಸರಳ ರೀತಿಯಲ್ಲಿ ಆಚರಣೆಗೆ ಸಲಹೆ ನೀಡುವ ಮೂಲಕ ಎಲ್ಲರೂ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಹಿರೇಮಠ ಅವರು, ಕೊರೊನಾದಿಂದ ಮುಕ್ತರಾಗುವ ಕಡೆಗೆ ನಾವು ಹೆಜ್ಜೆ ಇಟ್ಟಿದ್ದೇವೆ. ಇಂತಹ ಸಂದರ್ಭದಲ್ಲಿ ಉತ್ಸವವನ್ನು ಸರಳವಾಗಿ ಆಚರಿಸುವುದು ಸೂಕ್ತವಾಗಿದೆ.
ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡಗೌಡ್ರ, ಕಳೆದ 24 ವರ್ಷಗಳಿಂದ ಕಿತ್ತೂರು ಉತ್ಸವವನ್ನು ಅಭಿಮಾನದಿಂದ ಅದ್ಧೂರಿಯಾಗಿ ಆಚರಿಸುತ್ತ ಬರಲಾಗಿದೆ. ಆದರೆ ಜಗತ್ತಿಗೆ ಎದುರಾಗಿರುವ ಮಹಾಮಾರಿಯಿಂದ ಸಮಾಜವನ್ನು ರಕ್ಷಿಸಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಕಿತ್ತೂರು ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಸರಳವಾಗಿ ಆಚರಿಸೋಣ ಎಂದು ತಿಳಿಸಿದರು.

ಕಳೆದ ಬಾರಿ ಪ್ರವಾಹದ ಮಧ್ಯೆಯೂ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗಿದೆ.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಅನನ್ಯ ಕೊಡುಗೆಯನ್ನು ಸ್ಮರಿಸಿದ ಶಾಸಕ ದೊಡಗೌಡ್ರ ಅವರು, ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ, ಖ್ಯಾತ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯ ಸೇರಿದಂತೆ ಅನೇಕ ಮಹನೀಯರನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಉತ್ಸವವನ್ನು ಆಡಂಬರದ ಬದಲು ಸಂಪ್ರದಾಯದ ಪ್ರಕಾರ ಆಚರಿಸೋಣ ಎಂದರು.
ಸಾರ್ವಜನಿಕರ ಅಭಿಪ್ರಾಯದಂತೆ ಜ್ಯೋತಿಯಾತ್ರೆ, ಅನ್ನಪ್ರಸಾದ, ಕೋಟೆಯಲ್ಲಿ ದೀಪೋತ್ಸವಗಳನ್ನು ಆಯೋಜಿಸಿ ಒಂದು‌ ದಿನದ ಕಿತ್ತೂರು ಉತ್ಸವ ಆಚರಿಸಲಾಗುವುದು ಎಂದರು.

ಮುಂದಿನ ವರ್ಷ್ 25 ನೇ ಉತ್ಸವ ಅದ್ಧೂರಿ ಆಚರಣೆ: ಶಾಸಕ ದೊಡಗೌಡ್ರ

ಮುಂದಿನ ವರ್ಷ ನಡೆಯಲಿರುವ 25 ನೇ ಉತ್ಸವದ ಬೆಳ್ಳಿಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಈ‌ ಬಾರಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಸರಳ ಉತ್ಸವ ಒಂದೇ‌ ದಿನ‌ ಆಚರಿಸೋಣ. ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಮಹಾಂತೇಶ ದೊಡಗೌಡ್ರ ಮನವಿ ಮಾಡಿಕೊಂಡರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ತೀರ್ಮಾನದಂತೆ ಸರಳ ರೀತಿಯಲ್ಲಿ ಈ ಬಾರಿ ಉತ್ಸವ ಆಚರಿಸಬೇಕು.
ಜ್ಯೋತಿಯಾತ್ರೆ, ಧ್ವಜಾರೋಹಣ ಮತ್ತಿತರ ಸಾಂಪ್ರದಾಯಿಕ ರೀತಿಯಲ್ಲಿ ಉತ್ಸವ ನಡೆಸಬೇಕು ಎಂದು ಶ್ರೀಗಳು ತಿಳಿಸಿದರು.

ಸಾನಿಧ್ಯ ವಹಿಸಿದ್ದ ನಿಚ್ಚಣಿಕಿ ಮಠದ ಪಂಚಾಕ್ಷರಿ ಸ್ವಾಮೀಜಿ, ಚನ್ನಮ್ಮನ ಜ್ಯೋತಿಯನ್ನು ಬರಮಾಡಿಕೊಂಡು ಒಂದು ದಿನದ ಉತ್ಸವವನ್ನು ಆಚರಿಸಬೇಕು. ಸಂಜೆ 5 ಗಂಟೆಯೊಳಗೆ ಕಾರ್ಯಕ್ರಮ ಮುಗಿಸುವುದು ಸೂಕ್ತ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಉತ್ಸವದ ಹಿನ್ನೆಲೆಯಲ್ಲಿ ಅತೀ ಹೆಚ್ಚು ಜನಸಂದಣಿ ಸೇರುವುದು ಸೂಕ್ತವಲ್ಲ; ಆದಾಗ್ಯೂ ಜನರ ಒಮ್ಮತದ ಅಭಿಪ್ರಾಯದಂತೆ ಉತ್ಸವ ಆಚರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಕೋವಿಡ್-೧೯ ಸಂದಿಗ್ಧ ಪರಿಸ್ಥಿತಿ ಇರುವುದರಿಂದ ಯಾವುದೇ ಸಭೆ-ಸ‌ಮಾರಂಭಗಳಲ್ಲಿ ನೂರಕ್ಕಿಂತ ಅಧಿಕ ಜನರು ಭಾಗವಹಿಸುವಂತಿಲ್ಲ. ಸುದೈವದಿಂದ ಕಿತ್ತೂರು ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಬಾರಿ ಕಿತ್ತೂರು ಉತ್ಸವವನ್ನು ಈ ಬಾರಿ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಿಸಬೇಕಿದೆ ಎಂದರು.

ಇದಕ್ಕೂ ಮುಂಚೆ ಸಭೆಯಲ್ಲಿ ಸಲಹೆ ನೀಡಿದ ಸಾರ್ವಜನಿಕರು, ಇಡೀ ಜಗತ್ತಿನಲ್ಲಿ ಮನುಕುಲ ಕಂಡ ಅತ್ಯಂತ ಭೀಕರ ಸ್ಥಿತಿಯನ್ನು ಕೊರೊನಾ ವೈರಾಣು ಸೃಷ್ಟಿಸಿದೆ. ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಬೇಕು.
ಮುಂದಿನ ವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಬಹುದು ಎಂದು ಸಲಹೆ ನೀಡಿದರು.

ಜ್ಯೋತಿಯಾತ್ರೆ, ಚೆನ್ನಮ್ಮನ ಪುತ್ಥಳಿ ಬಳಿ ಬರಮಾಡಿಕೊಂಡು ನಿಚ್ಚಣಿಕಿ‌ಮಠಕ್ಕೆ ತೆರಳುವುದು ಸಂಪ್ರದಾಯವಾಗಿದ್ದು ಇದನ್ನು ಪಾಲಿಸಬೇಕು ಎಂದರು.
ಮೂರುದಿನದ ಬದಲು ಒಂದೇ ದಿನ ಉತ್ಸವ ಆಚರಿಸಿ, ಆರೋಗ್ಯ ಜಾಗೃತಿ ಮಾಡಿಸಬೇಕು ಎಂದು ಬಸವರಾಜ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮಾತನಾಡಿದ ಪತ್ರಕರ್ತರು, ಸಾರ್ವಜನಿಕರ ಆಶಯ, ಸಂಪ್ರದಾಯ ಹಾಗೂ ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಸಬೇಕು ಎಂದರು.

ಉಪ ವಿಭಾಗಾಧಿಕಾರಿಗಳಾದ ಅಶೋಕ ತೇಲಿ, ತಾಪಂ ಅಧ್ಯಕ್ಷೆ ಚನ್ನಮ್ಮ ಹೊಸಮನಿ ಮತ್ತಿತರರು ಉಪಸ್ಥಿತರಿದ್ದರು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *