Breaking News

ವೈದ್ಯರು ಸಾಹಿತ್ಯದ ಮೂಲಕ ಸಮಾಜವನ್ನು ಸುಧಾರಿಸುವಂತಾಗಬೇಕು: ಜಯಂತ ಕಾಯ್ಕಿಣಿ

ಜೆಎನ್‌ಎಂಸಿ ಕನ್ನಡ ಬಳಗದ ಅಡಿಯಲ್ಲಿ ವೈದ್ಯ ಬರಹಗಾರರ ಐದನೇ ರಾಜ್ಯ ಸಮ್ಮೇಳನ

ಬೆಳಗಾವಿ ೨೪ : ವೈದ್ಯರು ಕಾಯಿಲೆಯನ್ನು ಗುಣ ಪಡಿಸಿದರೆ ಸಾಲದು. ಸಮಾಜವನ್ನು ಸುಧಾರಿಸಬೇಕು. ಜಾತಿ, ಮತ, ಭಾಷೆ ಬೇಧ ಭಾವ ತೊಲಗಿಸುವ ಶಕ್ತಿ ವೈದ್ಯರಲ್ಲಿದೆ. ಕಲೆ ಮತ್ತು ವಿಜ್ಞಾನ ಬೇರೆ ಬೇರೆ ಅಲ್ಲ. ಅವರೆಡನ್ನೂ ಒಂದೇ ಆಗಿ ಸಮೀಕರಿಸಬೇಕು. ನಾವು ಓದಿದ ಕ್ಷೇತ್ರಗಳು ಬೇರೆಯಾಗಿದ್ದರೆ ಏನಾಯಿತು. ಅಭಿರುಚಿಯಿದ್ದ ವ್ಯಕ್ತಿ ಯಾವುದನ್ನೂ ಬರೆಯಬಲ್ಲ ಎಂದು ಹಿರಿಯ ಸಾಹಿತಿ ಡಾ.ಜಯಂತ ಕಾಯ್ಕಿಣಿ ಅವರಿಂದಿಲ್ಲಿ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಕೆಎಲ್‌ಇ ವಿಶ್ವವಿದ್ಯಾಲಯದ ಜೆಎನ್‌ಎಂಸಿ ಕನ್ನಡ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ ಐದನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನ ಪ್ರೀತಿಯ ಒಲುಮೆ ವಿಸ್ಮಯವನ್ನುಂಟುಮಾಡುತ್ತದೆ. ನೂರಾರು ಭಾಷೆ, ಸಾವಿರಾರು ಜಾತಿ ಇದ್ದರೂ ಕೂಡ ನಾವು ನಂಬಿಕೆ ಮೇಲೆ ಬದುಕಿದ್ದೇವೆ. ಆದರೆ ಯಾರೋ ರಾಜಕಾರಣಿ ಬಂದರೆ ನಮಗೆ ಜಾತಿ ವಿಷ ಕೂಡುತ್ತದೆ. ಆದರೆ ವೈದ್ಯಕೀಯ ಮನಸ್ಥಿತಿ ಮಾತ್ರ ಇದ್ಯಾವದನ್ನೂ ಪರಿಗಣಿಸುವುದಿಲ್ಲ. ಆದರೆ ಒಂದು ವೇಳೆ ಆ ಮನಸ್ಥಿತಿ ಬಂದರೆ ತೀವ್ರ ತೊಂದರೆ ಹಾಗೂ ಅಲ್ಲೋಲಕಲ್ಲೋಲ ಉಂಟಾಗುತ್ತದೆ. ಯಾವುದೇ ಧರ್ಮ ಇದ್ದರೂ ಕೂಡ ದಯವೇ ಮೂಲತರಂಗ ಎಂದು ಹೇಳಿದರು.
ಕವಿ ಕಾದಂಬರಿಗಳು ನಮ್ಮ ಸಮಾಜದ ಹೃದಯದ ರಿಪೋರ್ಟ್ದ್ದಂತೆ, ರೋಗಿಯ ದೈಹಿಕ ಆರೋಗ್ಯಕಷ್ಟೇ ಚಿಕಿತ್ಸೆ ಕೊಡದೆ ಅವರ ಮಾನಸಿಕ ಆರೋಗ್ಯಕ್ಕೂ ಕೂಡ ಚಿಕಿತ್ಸೆ ನೀಡುವಂತದ್ದು ಮುಖ್ಯ. ವೈದ್ಯ ಬರಹಗಾರರು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಸಾಹಿತ್ಯ ರಚಿಸಿದ್ದೆ ಆದರೆ ಒಂದು ಅದ್ಭುತ ಕ್ರಾಂತಿಯಾಗುತ್ತದೆ. ವೈದ್ಯರ ತಲೆಯಲ್ಲಿ ಜಾತಿ ಧರ್ಮಗಳ ಲವಲೇಶವೂ ಸುಳಿಯಬಾರದು. ಮಾನವೀಯತೆ ಮುಖದ ಪ್ರತಿರೂಪವೇ ವೈದ್ಯ. ವೈದ್ಯ ಸಮಾಜದ ಇಸಿಜಿ ಇದ್ದಂತೆ. ರೋಗಿಯ ಹೃದಯದಲ್ಲಿರುವ ನೋವುಗಳನ್ನು ಆತ ಸದಾ ನಿವಾರಿಸಬೇಕು ಎಂದು ಹೇಳಿದರು.
ವೈದ್ಯಕೀಯದಲ್ಲಿ ಸಾಮಾಜಿಕ ವಿಜ್ಞಾನ ಕೋರ್ಸ ಅತ್ಯವಶ್ಯಕವಾಗಿದೆ. ಅದನ್ನು ಎಲ್ಲ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರಾರಂಭಿಸಬೇಕು. ಆಧುನಿಕತೆಯ ಭರದಲ್ಲಿ ನಗರಜೀವನ ಹಳ್ಳಿಗರನ್ನು ಸಾಕಷ್ಟು ಆಕರ್ಷಿಸಿದೆ. ಇದರಿಂದ ಹಳ್ಳಿಯ ಸಂಸ್ಕೃತಿ ಮಾಯವಾಗುತ್ತಿದೆ ಎಂದ ಅವರು ಡಾ. ಶಿವರಾಮ ಕಾರಂತರು ೯೦೦೦ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳ ಚಿತ್ರಗಳನ್ನಾಗಿ ಕೈಯಿಂದ ಬಿಡಿಸಿದ್ದರು. ಬೇಂದ್ರೆ ಕುವೆಂಪು, ಬಿ ಜಿ ಎಲ್ ಸ್ವಾಮಿ, ಯಶ್ವಂತ್ ಚಿತ್ತಾಲ್ ಅವರು ಮನೋ ಆರೋಗ್ಯವನ್ನು ಕುರಿತು ತಮ್ಮ ಸಾಹಿತ್ಯದಲ್ಲಿ ಅದ್ಭುತವಾಗಿ ಅಭಿವ್ಯಕ್ತಿಸಿದರು. ಹಾಗಾಗಿ ಕನ್ನಡ ಅನೇಕ ಶ್ರೇಷ್ಠ ಸಾಹಿತಿಗಳು ವೈದ್ಯವಿಜ್ಞಾನ ಕುರಿತು ಗ್ರಂಥಗಳನ್ನು ರಚಿಸಿರುವುದನ್ನು ಅವಲೋಕಿಸಬೇಕು. ಮನುಷ್ಯನಿಗೆ ಮನುಷ್ಯ ಬಿಟ್ಟು ಬೇರೆ ಯಾರೂ ಕಾಣಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು ಎಂದರು.
ಮುAಬರುವ ವರ್ಷ ಕನ್ನಡ ಭವನ ನಿರ್ಮಾಣ: ಡಾ.ಪ್ರಭಾಕರ ಕೋರೆ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಮಾತನಾಡಿ, ಜವಾರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಕನ್ನಡ ಬಳಗ ಬೆಳಗಾವಿಯ ಪರಿಸರದಲ್ಲಿ ಕನ್ನಡ ಕಟ್ಟುವ ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಗಡಿಭಾಗದಲ್ಲಿ ಅದರ ಕೊಡುಗೆ ಅನನ್ಯ ಅವಿಸ್ಮರಣೀಯ. ಖ್ಯಾತ ಸಾಹಿತಿಗಳನ್ನ ಬೆಳಗಾವಿಗೆ ಕರೆ ತಂದ ಹೆಗ್ಗಳಿಕೆ ಕನ್ನಡ ಬಳಗಕ್ಕಿದೆ. ಬೆಳಗಾವಿಯಲ್ಲಿ ಒಂದು ಸಂದರ್ಭದಲ್ಲಿ ಕನ್ನಡದಲ್ಲಿ ಉಸಿರಾಡುವುದು ಕಷ್ಟವಾಗಿತ್ತು. ಅಂತಹ ಘಳಿಗೆಯಲ್ಲಿ ರಾಜ್ಯೋತ್ಸವದ ಮೆರವಣಿಗೆಗಳನ್ನು ಸಂಘಟಿಸಿ ಕನ್ನಡ ಧ್ವನಿಯಾಗಿದ್ದು ಕನ್ನಡ ಬಳಗ. ಅದರ ರಚನಾತ್ಮಕ ಕೆಲಸಗಳು ದಾಖಲಾರ್ಹವೆನಿಸಿವೆ. ಅದರ ವಜ್ರಮಹೋತ್ಸವ ಸಂಭ್ರಮಾಚರಣೆ ಅಭಿಮಾನ ಮೂಡಿಸಿದೆ ಎಂದರು. ಮುಂದುವರೆದು ಮಾತನಾಡಿದ ಕೋರೆಯವರು ಇಂತಹ ವೈದ್ಯಕೀಯ ಬರಹಗಾರರ ಸಮ್ಮೇಳನವು ನಮ್ಮ ಸಂಸ್ಥೆಯಲ್ಲಿ ಸಂಘಟಿಸಿರುವುದು ಅಭಿಮಾನ ತಂದಿದೆ. ಮುಂಬರುವ ಒಂದು ವರ್ಷದ ಒಳಗಾಗಿ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದೆಂದು ಘೋಷಿಸಿದರು.
ಸಮ್ಮೇಳನಾಧ್ಯಕ್ಷರ ನುಡಿ: ಸಮ್ಮೇಳನಾಧ್ಯಕ್ಷರಾದ ಚಂದನ ವಾಹಿನಿಯ ಥಟ್ ಅಂಥ ಹೇಳಿ ಸಂಯೋಜಕರು ಹಾಗೂ ಖ್ಯಾತ ವೈದ್ಯ ಬರಹಗಾರ ಡಾ.ನಾ. ಸೋಮೇಶ್ವರ ಅವರು ಸಮ್ಮೇಳಾಧ್ಯಕ್ಷರ ನುಡಿಗಳನ್ನಾಡಿ, ಬದುಕಿನ ಆರೋಗ್ಯ ಮತ್ತು ಸೌಂದರ್ಯವನ್ನು ಸಮೀಕರಿಸುವ ಶಕ್ತಿ ವೈದ್ಯ ಬರಹಗಾರರಲ್ಲಿ ಇರಬೇಕು. ಕನ್ನಡದಲ್ಲಿ ಆರೋಗ್ಯ ಸಾಹಿತ್ಯವನ್ನು ಗುರುತು ಅಧಿಕೃತ ವಾದಂತಹ ಗ್ರಂಥಗಳ ಕೊರತೆ ಇದೆ. ವೈದ್ಯರೇ ಆರೋಗ್ಯ ಸಾಹಿತ್ಯವನ್ನು ಕುರಿತು ಗ್ರಂಥಗಳನ್ನು ರಚಿಸುವಂತೆ ಆಗಬೇಕು. ಆರೋಗ್ಯ ಸಾಹಿತ್ಯವನ್ನು ಕುರಿತು ಸರ್ಕಾರಿ ವಲಯದಲ್ಲಿ ಯಾವುದೇ ಕೆಲಸ ಕಾರ್ಯಗಳು ಜರುಗುತ್ತಿಲ್ಲ. ಪರಸ್ಪರ ಸಂವಹನವಿಲ್ಲ. ಒಂದೇ ವಿಷಯದ ಬಗ್ಗೆ ಹಲವು ಸಲ ಗ್ರಂಥಗಳು ಪ್ರಕಟವಾಗಿರುವುದನ್ನು ಗಮನಿಸಬಹುದು. ಆರೋಗ್ಯ ಸಾಹಿತ್ಯ ಕುರಿತು ಆದ್ಯತೆ ಕಡಿಮೆಯಾಗಿದೆ. ರಾಜ್ಯದ ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡ ಸಂಘವಿರಬೇಕು. ಅದು ತನ್ನ ಪ್ರಾಸಾರಂಗದ ಮೂಲಕ ಪ್ರಸ್ತುತ ಆರೋಗ್ಯ ವಿಚಾರಗಳ ಗ್ರಂಥಗಳನ್ನು ಪ್ರಕಟಿಸುತ್ತಾ ಇರಬೇಕು. ವರ್ತಮಾನದ ವೈದ್ಯಕೀಯ ಸಂಶೋಧನೆಗಳನ್ನು ಕೂಡ ದಾಖಲಿಸುವ ಕೆಲಸ ನಡೆಯಬೇಕು. ಈಗಾಗಲೇ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಮಾತೃಭಾಷೆಯಲ್ಲಿ ಬೋಧಿಸುವ ಕಾರ್ಯ ನಡೆದಿದೆ. ಕರ್ನಾಟಕದಲ್ಲಿ ಕೂಡ ವೈದ್ಯಕೀಯ ಶಿಕ್ಷಣ ಪಠ್ಯಪುಸ್ತಕಗಳು ಕನ್ನಡದಲ್ಲಿ ದೊರೆಯುವಂತಾಗಬೇಕು. ಆರೋಗ್ಯ ಪಠ್ಯಪುಸ್ತಕಗಳು ಶಾಲಾ ಮಕ್ಕಳಿಗೆ ಅಳವಡಿಸಬೇಕು. ಆರೋಗ್ಯ ಪತ್ರಿಕೋದ್ಯಮ ಬರಬೇಕು. ಸಮ್ಮೇಳನಗಳಲ್ಲಿ ಆರೋಗ್ಯ ಸಾಹಿತ್ಯ ವಿಮರ್ಶೆ ಜರುಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಮ್ಮೇಳನಗಳಲ್ಲಿ ಆರೋಗ್ಯ ಗೋಷ್ಠಿಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ನೋಂದಾಯಿತ ವೈದ್ಯರು ೧,೪೧,೧೫೪, ಕನ್ನಡದಲ್ಲಿ ಬರೆಯಬಲ್ಲ ವೈದ್ಯರು ೧೨೦, ನಿಯಮಿತವಾಗಿ ಬರೆಯುವವರು ೫೦, ಗಂಭೀರವಾಗಿ ತೆಗೆದುಕೊಂಡವರು ೨೦. ಉಳಿದವರು ಏಕೆ ಬರೆಯುತ್ತಿಲ್ಲ? ಕನ್ನಡ ಬರುವುದಿಲ್ಲವೆ? ಆಸಕ್ತಿಯಿಲ್ಲವೆ ಸಮಯವಿಲ್ಲವೆ? ಕನ್ನಡದಲ್ಲಿ ಆರೋಗ್ಯ ಸಾಹಿತ್ಯ ಸಂವಹನದ ಸ್ನಾತಕೋತ್ತರ ಡಿಪ್ಲೋಮವನ್ನು ನೀಡುವ ವ್ಯವಸ್ಥೆಯಿಲ್ಲ. ರಾಜೀವ್ ಗಾಂಧಿ ಆರೋಗ್ಯ ವಿವಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ವಿರಳವಾದ ಕಾರ್ಯಾಗಾರಗಳನ್ನು ನಡೆಸಿತ್ತು. ಸೂಕ್ತ ಆರೋಗ್ಯ ನಿಘಂಟು ಬೇಕಾಗಿದೆ. ಆರೋಗ್ಯ ಪುಸ್ತಕವನ್ನು ಬರೆಯುವುದು ಹೇಗೆ’ ಎನ್ನುವ ಬಗ್ಗೆಯೇ ಒಂದು ಪುಸ್ತಕ ಬರಬೇಕಾಗಿದೆ. ನಮ್ಮಲ್ಲಿ ‘ಕಂಟಿನ್ಯೂಡ್ ಮೆಡಿಕಲ್ ಎಜುಕೇಶನ್’ ಇರುವ ಹಾಗೆ ಜನಪ್ರಿಯ ಆರೋಗ್ಯ ಸಾಹಿತ್ಯದಲ್ಲಿ ವರ್ತಮಾನ ಸಂಶೋಧನೆಗಳ ಆಯ್ದ ಭಾಗಗಳ ಸಾರಾಂಶವು ಸಾರ್ವಜನಿಕರಿಗೆ ದೊರೆಯಬೇಕು. ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿಯು, ಪ್ರಸಾರಾಂಗದ ಜೊತೆಗೂಡಿ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷರಾದ ಡಾ.ಶ್ರೀಧರ ಕೆ.ಆರ್ ಈ ಸಂದರ್ಭದಲ್ಲಿ ಮಾತನಾಡಿದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ್ ಎಸ್. ಅಧ್ಯಕ್ಷೀಯ ನುಡಿಗಳನ್ನಾಡಿದರು.
೯ ಗ್ರಂಥಗಳ ಲೋಕಾರ್ಪಣೆ: ‘ವೈದ್ಯಸಂಗಮ’ ಸ್ಮರಣಸಂಚಿಕೆಯನ್ನು ಹಾಗೂ ೯ ವೈದ್ಯಕೀಯ ಗ್ರಂಥಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ೨೦೨೩-೨೪ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿಯನ್ನು ಡಾ.ಸುರೇಶ ಸಗರದ, ಡಾ.ಸುನಂದಾ ಆರ್.ಕುಲಕರ್ಣಿಯವರಿಗೆ, ಹಸ್ತಪ್ರತಿ ಪ್ರಶಸ್ತಿಯನ್ನು ಡಾವೀಣಾ ಎಸ್.ಭಟ್, ಡಾ.ದಿವ್ಯಾ ಕೆ.ಎನ್. ಡಾ.ರಣಜಿತ ಬೀರಣ್ಣ ನಾಯ್ಕ ಕೆಂಚನ್, ಡಾ.ಸಲೀಮ್ ನದಾಫ್ ಇವರಿಗೆ ಪ್ರದಾನ ಮಾಡಲಾಯಿತು.
ವೇದಿಕೆಯ ಮೇಲೆ ಡಾ.ಎಚ್.ಬಿ.ರಾಜಶೇಖರ, ಡಾ.ವ್ಹಿ.ಡಿ.ಪಾಟೀಲ, ಕಾಹೆರ್ ಕುಲಪತಿ ಡಾ.ನೀತಿನ್ ಗಂಗಾನೆ, ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಡಾ.ಕರುಣಾಕರಣ ಬಿ.ಪಿ, ಡಾ.ವೀಣಾ ಸುಳ್ಯ, ಜೆಎನ್‌ಎಂಸಿ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ರವೀಂದ್ರ ಅನಿಗೋಳ ಉಪಸ್ಥಿತರಿದ್ದರು. ಡಾ.ಅವಿನಾಶ ಕವಿ ಸ್ವಾಗತಿಸಿದರು. ಡಾ.ಸುಶೃತ ಕಾಮೋಜಿ ಪ್ರಮಾಣವಚನ ಬೋಧಿಸಿದರು. ಡಾ.ಷಮಾ ಬೆಲ್ಲದ, ಡಾ.ನೇತ್ರಾವತಿ ಕವಿ ನಿರೂಪಿಸಿದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *