Breaking News

ಕೆರೆ ತುಂಬಿಸಲು 500 ಕೋಟಿ ರೂ. ಪ್ರಸ್ತಾವನೆ – ಹೆಬ್ಬಾಳಕರ.

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈಗ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಆರಂಭಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 90 ಕ್ಕೂ ಹೆಚ್ಚು ಕೆರೆಗಳಿದ್ದು, ಈ ಎಲ್ಲ ಕೆರೆಗಳನ್ನು ವಿವಿಧ ಮೂಲಗಳಿಂದ ತುಂಬಿಸಲು 500 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸುತ್ತಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಭೇಟಿ ನೀಡಿ ಕೆರೆ ತುಂಬಿಸುವ ಯೋಜನೆ ಕುರಿತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಲಕ್ಷ್ಮೀ ಹೆಬ್ಬಾಳಕರ ಅವರು ನೀರಾವರಿ ನಿಗಮದ ಅಧಿಕಾರಿ ತಂಡದ ಜೊತೆ ಸಿದ್ಧನಭಾಂವಿ ಕೆರೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಇಡೀ ಕ್ಷೇತ್ರದ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಅಧಿಕಾರಗಳ ಜೊತೆ ಸುಧೀರ್ಘವಾದ ಸಮಾಲೋಚನೆ ನಡೆಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ, ಸಾಂಬ್ರಾ, ನಿಲಜಿ, ಮುತಗಾ, ಮೋದಗಾ, ಬಾಳೇಕುಂದ್ರಿ, ಮಾರಿಹಾಳ, ಕರಡಿಗುದ್ದಿ ಸೇರಿದಂತೆ ಈ ಭಾಗದ ಎಲ್ಲ ಕೆರೆಗಳನ್ನು ಶಿರೂರ ಜಲಾಶಯ ಹಾಗೂ ಹಿಡಕಲ್ ಜಲಾಶಯದಿಂದ ತುಂಬಿಸುವುದು ಕುರಿತು ಅಧಿಕಾರಿಗಳ ಜೊತೆ ಹೆಬ್ಬಾಳಕರ ಅವರು ಸಮಾಲೋಚನೆ ಮಾಡಿ ಕೂಡಲೇ ಕ್ರೀಯಾ ಯೋಜನೆಯ ಪ್ರಸ್ತಾವನೆ ರೂಪಿಸುವಂತೆ ಸೂಚನೆ ನೀಡಿದರು.

ಹಿರೇಬಾಗೇವಾಡಿಯ ಸಿದ್ಧನಭಾಂವಿ ಕೆರೆ ಹಾಗೂ ಮುತ್ನಾಳ, ಗಜಪತಿ, ಭೇಂಡಿಗೇರಿ ಗ್ರಾಮಗಳ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ನಡೆಸಿ ಕಾಲಮಿತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಜೊತೆಗೆ ಈ ಭಾಗದ ಬಡಾಲ ಅಂಕಲಗಿ, ಬಡಸ, ಕುಕಡೊಳ್ಳಿ, ಬಸ್ಸಾಪೂರ, ಅರಳಿಕಟ್ಟಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಕೆರೆ ತುಂಬಿಸಲು ತಿಗಡಿ ಹರಿನಾಲಾ ಜಲಾಶಯದಿಂದ ನೀರು ಹರಿಸುವ ಯೋಜನೆಯ ಪ್ರಸ್ತಾವನೆ ರೂಪಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗುಂದಿ, ಉಚಗಾಂವ, ಅಂಬೇವಾಡಿ, ಹಿಂಡಲಗಾ, ಕಂಗ್ರಾಳಿ (ಕೆ.ಹೆಚ್.), ಕಂಗ್ರಾಳಿ (ಬಿ.ಕೆ), ಬೆಕ್ಕಿನಕೇರಿ, ಅತಿವಾಡ, ಬೆನಕನಹಳ್ಳಿ, ಬಸೂರತೆ, ಕೋನೆವಾಡಿ, ತುರಮರಿ, ಬಾಚಿ, ಕುದ್ರೇಮನಿ, ಕಲ್ಲೇಹೋಳ, ರಾಕಸಕೊಪ್ಪ, ಬೆಳವಟ್ಟಿ, ಬಡಸ ಇನಾಮ, ಬಿಜಗರ್ಣಿ, ಕವಳೆವಾಡಿ, ಕರ್ಲೆ, ಬಾದರವಾಡಿ, ರಣಕುಂಡೆ, ಕುಟ್ಟಲವಾಡಿ, ಬಾಮನವಾಡಿ, ಕಿನಯೆ ಸೇರಿದಂತೆ ಈ ಭಾಗದ ಎಲ್ಲ ಕೆರೆಗಳನ್ನು ತುಂಬಿಸಲು ಮತ್ತು ಈ ಭಾಗದ ರೈತರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಮಾರ್ಕಂಡೇಯ ನದಿಯಲ್ಲಿ ಚಿಕ್ಕ ಬಾಂದಾರಗಳನ್ನು ನಿರ್ಮಿಸುವ ಯೋಜನೆಯನ್ನು ಕೂಡಲೇ ರೂಪಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಒಟ್ಟು ಎಲ್ಲ ಕೆರೆಗಳ ತುಂಬಿಸುವ ಯೋಜನೆಯನ್ನು ರೂಪಿಸಿ ಆದಷ್ಟೂ ಬೇಗನೇ ಪ್ರಸ್ತಾವನೆಗಳನ್ನು ಸಿದ್ಧಪಡಿಸಬೇಕೆಂದು ಲಕ್ಷ್ಮೀ ಹೆಬ್ಬಾಳಕರ ಅವರು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಅವರು ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ನೀರು, ಹಳ್ಳಿ ಹಳ್ಳಿಗೆ ರಸ್ತೆ ಎಂಬ ಘೋಷ ವಾಕ್ಯದ ಭರವಸೆಯನ್ನು ನೀಡಿದ್ದೆ, ಈ ಭರವಸೆಯನ್ನು ನೂರಕ್ಕೆ ನೂರರಷ್ಟು ಬಗೆಹರಿಸುವ ಸಂಕಲ್ಪ ಮಾಡಿದ್ದೇನೆ. ಗ್ರಾಮೀಣ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲು 500 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನವಾರ ನೀರಾವರಿ ನಿಗಮದ ಅಧಿಕಾರಿಗಲು ಯೋಜನೆಯ ಸರ್ವೆ ಕಾರ್ಯವನ್ನು ಆರಂಭಿಸಲಿದ್ದಾರೆ ಎಂದು ಹೆಬ್ಬಾಳಕರ ತಿಳಿಸಿದರು.
ನೀರಾವರಿ ನಿಗಮದ ಧಾರವಾಡ ವಿಭಾಗದ ಮುಖ್ಯ ಇಂಜಿನಿಯರ ಜಗದೀಶ ಸೇರಿದಂತೆ ನೀರಾವರಿ ನಿಗಮದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *