ಪಣಜಿ :
ಗೋವಾದಲ್ಲಿ ಮತ್ತೆ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುವುದು ಶತಸಿದ್ದ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಪಣಜಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿ ವಿಚಾರ ಮುಂದಿಟ್ಟು ಮತಯಾಚನೆ ಮಾಡುತ್ತಿದೆ. ಗೋವಾ ಕನ್ನಡಿಗರ ಬೇಡಿಕೆಗೆ ಸ್ಪಂದನೆ ಮಾಡಲಾಗುವುದು.
ಪಕ್ಷವು ನನಗೆ ದಕ್ಷಿಣ ಗೋವಾ ಉಸ್ತುವಾರಿ ವಹಿಸಿದ್ದು, ಈಗಾಗಲೇ ಈ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಬಿಜೆಪಿಗೆ ಪೂರಕ ವಾತಾವರಣ ಇದೆ. ದಕ್ಷಿಣ ಗೋವಾ ದ 15 ಕ್ಷೇತ್ರದ ಪೈಕಿ 12 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಐದು ವರ್ಷಗಳ ಕಾಲ ಸುಸ್ಥಿರ ಸರ್ಕಾರ ನೀಡಿದೆ. ಜನ ಅಭಿವೃದ್ಧಿ ನೋಡಿ ಬಿಜೆಪಿ ಬೆಂಬಲ ನೀಡಲಿದ್ದಾರೆ.
ಮಾಜಿ ಸಿಎಂ ಮನೋಹರ್ ಪರಿಕರ ಪುತ್ರನ ಸ್ಪರ್ಧೆಯಿಂದ ಗೋವಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು. ಸ್ಥಳೀಯ ವಿಚಾರದ ಮೇಲೆಯೇ ಬಿಜೆಪಿ ಚುನಾವಣೆ ಎದುರಿಸಲಿದೆ. ಗೋವಾ ಕನ್ನಡಿಗರಿಗಾಗಿ ಶಾಲೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಕರ್ನಾಟಕ ಸರ್ಕಾರ ಕೂಡ ಶಾಲೆಗಳಿಗೆ ಅನುದಾನ ನೀಡಲಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಹಿಜಾಬ್ ವಿವಾದ ಏಕೆ ಪ್ರಾರಂಭವಾಯಿತು. ಈ ವಿವಾದಕ್ಕೆ ಕಾಂಗ್ರೆಸ್ ನಾಯಕರೇ ಪ್ರಮುಖ ಕಾರಣ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕರ್ನಾಟಕ ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಮತಿಭ್ರಮಣೆಯಾಗಿದೆ. ಈ ಕುರಿತು ಕಾಂಗ್ರೆಸ್ ನಾಯಕರು ಅವಲೋಕನ ಮಾಡಲಿ ಎಂದು ಅಭಯ ಪಾಟೀಲ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹೆಚ್ಚಾಗುತ್ತಿದೆ. ಆದರೆ, ಪ್ರತಿಪಕ್ಷಗಳಿಗೆ ಇದನ್ನು ಸಹಿಸಲಾಗುತ್ತಿಲ್ಲ ಎಂದು ಆರೋಪಿಸಿದರು.
ಗೋವಾ ವಿಧಾನ ಸಭೆ ಚುನಾವಣೆ ಫಲಿತಾಂಶ ಕರ್ನಾಟಕ ವಿಧಾನ ಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅವರು ಹೇಳಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ