ಚುನಾವಣೆ ಕರ್ತವ್ಯ ನಿಯೋಜಿತ ಅಧಿಕಾರಿಗಳ ತರಬೇತಿ
ಬೆಳಗಾವಿ, ಮೇ.17 (ಕರ್ನಾಟಕ ವಾರ್ತೆ) : ನಿಯೋಜಿತ ಅಧಿಕಾರಿಗಳು ಯಾವುದೇ ಗೊಂದಲವಿಲ್ಲದೆ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಲಿದ್ದು ಅಭ್ಯರ್ಥಿಗಳ ಸಭೆ, ಸಮಾರಂಭಗಳ ಕುರಿತು ನಿರಂತರ ಪರಿಶೀಲನೆ ನಡೆಸಿ ನಿಗಾ ವಹಿಸಬೇಕು ಎಂದು ತರಬೇತುದಾರ ಎನ್. ವ್ಹಿ ಶಿರಗಾಂವಕರ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ (ಮೇ.17) ನಡೆದ ಕರ್ನಾಟಕ ವಾಯುವ್ಯ ಪದವೀಧರ ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2022 ರ ಕರ್ತವ್ಯ ನಿರ್ವಹಣೆಯ ಕುರಿತು ಅಧಿಕಾರಿಗಳಿಗೆ ಅವರು ತರಬೇತಿ ನೀಡಿದರು.
ಮಾದರಿ ನೀತಿ ಸಂಹಿತೆ ಜಾರಯಲ್ಲಿರುವುದರಿಂದ ನಿಯೋಜಿತ ಅಧಿಕಾರಿಗಳು ಅಭ್ಯರ್ಥಿಗಳ, ಸಭೆ ಸಮಾರಂಭಗಳ ಕುರಿತು ನಿರಂತರ ಪರಿಶೀಲನೆ ನಡೆಸಬೇಕು. ಅಭ್ಯರ್ಥಿಗಳ ಪರ ಪ್ರಚಾರ ಹಾಗೂ ಕಾರ್ಯಕ್ರಮಗಳನ್ನು ನಡೆಸುವುದು ಕಂಡುಬಂದಲ್ಲಿ ವಿಡಿಯೋ ಸಂಗ್ರಹಣ ಮೂಲಕ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಎಂದು ತಿಳಿಸಿದರು.
ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮತಾರರನ್ನು ಕುರಿತು ಭಾಷಣ ಮಾಡುವುದು ಸರ್ಕಾರಿ ಸೌಲಭ್ಯಗಳ ವಿಸ್ತರಣೆ, ಮತ್ತು ನೀತಿ ನಿರ್ದೇಶನಾತ್ಮಕ ವಿಷಯಗಳ ಕುರಿತು ಭರವಸೆ ನೀಡುವುದು ಕಂಡು ಬಂದಲ್ಲಿ, ತಕ್ಷಣ ಸ್ಥಳೀಯ ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ನಿರ್ದೇಶನದಂತೆ ದೂರು ದಾಖಲಿಸಬೇಕು ಎಂದು ತಿಳಿಸಿದರು.
ಪ್ರತಿ ಸ್ಪರ್ಧಿಗಳ ಚಾರಿತ್ರ್ಯ ಹರಣ, ಅವಹೇಳನ, ಪ್ರಚೋದನಕಾರಿ ಭಾಷಣ ಮಾಡುವುದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಸಾಮಾಜಿಕ ಶಾಂತಿ ಕೆದಾಡುವ ತೀಕ್ಷ್ಣ ಹೇಳಿಕೆಗಳು ನೀಡುವುದು ಹಾಗೂ ಹೊಸ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳಾಗಿವೆ.
ಅದೇ ರೀತಿಯಲ್ಲಿ ನೈಸರ್ಗಿಕ ವಿಕೋಪ ಮತ್ತು ಕುಡಿಯುವ ನೀರಿನ ವಿಷಯಗಳನ್ನು ಹೊರತುಪಡಿಸಿ ಅಧಿಕಾರಿಗಳ ಸಭೆ ಜರುಗಿಸುವುದು. ಕಚೇರಿ ಕೆಲಸಗಳನ್ನು ಹೊರತುಪಡಿಸಿ ಪಕ್ಷದ ಅಥವಾ ಸ್ವಂತದ ಕೆಲಸಗಳಿಗೆ ಸರ್ಕಾರಿ ವಾಹನಗಳನ್ನು ಬಳಸುವುದು ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಕೋವಿಡ್ ನಿಯಮ ಪಾಲನೆಗೆ ಸೂಚನೆ:
ಚುನಾವಣೆ ಕರ್ತವ್ಯದ ಜೊತೆಗೆ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಪ್ರತಿ ಕಂದಾಯ ತಾಲೂಕಿನಲ್ಲಿ ಕನಿಷ್ಠ ಮೂರು ಎಫ್.ಎಸ್.ಟಿ ತಂಡಗಳು ಇರುತ್ತವೆ. ಎಲ್ಲ ನಿಯೋಜಿತ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಚುನಾವಣೆ ಘೋಷಣೆಯಾದ ಕ್ಷಣದಿಂದ ಮತದಾನ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾಗುವ ವರೆಗೂ ಯೋಜಿತ ತಂಡಗಳು 24*7 ಕಾರ್ಯ ನಿರ್ವಹಿಸಬೇಕು.
ಹಣ, ಮದ್ಯ ಹಂಚಿಕೆ ಹಾಗೂ ಬೆದರಿಕೆ ಸೇರಿದಂತೆ ಅನೇಕ ಸವಾಲುಗಳು ಎದುರಾಗಬಹುದು. ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುವುದು ಹಾಗೂ ಮತದಾರರಿಗೆ ಹಣದ ಆಮಿಷ ಒಡ್ಡುವುದು ಕಂಡುಬಂದಲ್ಲಿ ತಕ್ಷಣ ಮೇಲಾಧಿಕಾರಿಗಳಿಗೆ ತಿಳಿಸಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ದೂರುಗಳಿಗೆ ತಕ್ಷಣ ಸ್ಪಂದಿಸಬೇಕು:
ಪಕ್ಷ ಮತ್ತು ಸ್ಪರ್ಧಾಳು ಅಭ್ಯರ್ಥಿಗೆ ಸಂಬಂಧಿಸಿದ ನಿಯಮಬಾಹಿರ ಖರ್ಚುವೆಚ್ಚಗಳ ಕುರಿತು ದೂರುಗಳು ಸ್ವೀಕರಿತಗೊಂಡಲ್ಲಿ, ತಕ್ಷಣವೇ ಅಂತಹ ದೂರುಗಳನ್ನು ಪರಿಶೀಲನೆ ನಡೆಸಿ ನಿಜ ಎಂದು ಕಂಡುಬಂದಲ್ಲಿ, ನಿಯಮಾನುಸಾರ ಸಂಬಂಧಿಸಿದ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕ್ರಮವಹಿಸಬೇಕು ಎಂದು ನಿಯೋಜಿತ ಅಧಿಕಾರಿಗಳಿಗೆ ತಿಳಿಸಿದರು.
ನಿರಂತರ ಪರಿಶೀಲನೆ ನಡೆಸಬೇಕು:
ಸಭೆ, ಸಮಾರಂಭ ಹಾಗೂ ಸಾಮೂಹಿಕವಾಗಿ ಮತದಾರರು ಸೇರುವ ಸ್ಥಳಗಳನ್ನು ಪರಿಶೀಲನೆ ನಡೆಸಬೇಕು. ಅನಾಮಧೇಯ ಕರೆಗಳು ಮತ್ತು ದೂರುಗಳು ಬಂದಲ್ಲಿ ಅವುಗಳಿಗೆ ತಕ್ಷಣವೇ ಸ್ಪಂದಿಸಿ ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ವಿಡಿಯೋಗ್ರಾಫಿ ಸಾಕ್ಷಿ ಸಮೇತ ಪ್ರತಿನಿತ್ಯ ನಮೂನೆಗಳಲ್ಲಿ ವರದಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು
ಪಕ್ಷಗಳು ಮತ್ತು ಅಭ್ಯರ್ಥಿಗಳು ಧರ್ಮ, ಜಾತಿ, ಭಾಷೆ ಸೇರಿದಂತೆ ವಿವಿಧ ನಿಯಮ ಬಾಹಿರ ರೀತಿಯಲ್ಲಿ ಮತ ಯಾಚನೆ ಮಾಡಬಾರದು ಹಾಗೂ ಪ್ರಚೋದನಕಾರಿ ಹೇಳಿಕೆಯ ಮೂಲಕ ಮತದಾರರನ್ನು ಪೂರೈಸುವುದು ಕಂಡುಬಂದಲ್ಲಿ ತಕ್ಷಣ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತರಬೇತಿಯಲ್ಲಿ ಶಿರಗಾಂವಕರ ತಿಳಿಸಿದರು.
ಈ ವೇಳೆ ಮಾತನಾಡಿದ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಅವರು ಸೆಕ್ಟರ್ ಅಧಿಕಾರಿಗಳು, ಪ್ಲೇಯಿಂಗ್ ಸ್ಕಾಡ, ವಿಡಿಯೋ ವಿವಿಂಗ್ ಟಿಮ್ ಹಾಗೂ ವಿಡಿಯೋ ಸರ್ವೆಲೆನ್ಸ್ ಟೀಮ್ ಗಳು ನಿರಂತರ ಸಕ್ರಿಯವಾಗಿರಬೇಕು. ಪರಿಶೀಲನೆಯ ಪ್ರತಿ ಸಾಕ್ಷಿಗಳನ್ನು ವಿಡಿಯೋ ಮೂಲಕ ತಪ್ಪದೇ ಸಂಗ್ರಹಿಸಬೇಕು.
ಯಾವುದೇ ತೊಂದರೆಗಳು ಎದುರಾದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಸಂಬಂಧಿಸಿದ ತಹಶೀಲ್ದಾರ ಕಚೇರಿಯಲ್ಲಿ ದೂರು ನೋಂದಣಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ರವೀಂದ್ರ ಗಡಾದಿ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿಲಾದ ವಿವಿಧ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
***