ಬೆಳಗಾವಿ- ಸ್ಥಳೀಯ ಸಂಘ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಎರಡು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿ ಈಗಾಗಲೇ ಎರಡು ದಿನ ಕಳೆದರೂ ಇನ್ನುವರೆಗೆ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಿ ಎರಡು ದಿನ ಕಳೆದು ಇವತ್ತು ಮೂರನೇಯ ದಿನವಾದರೂ ಯಾರೊಬ್ಬರು ಇನ್ನುವರೆಗೆ ನಾಮಪತ್ರ ಸಲ್ಲಿಸಿಲ್ಲ. ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ಪ್ರಚಾರ ಜೋರಾಗಿಯೇ ನಡೆದಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರು ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದು ಅವರ ಹೆಸರು ಕಾಂಗ್ರೆಸ್ ಪಕ್ಷ ಇನ್ನುವರೆಗೆ ಘೋಷಣೆ ಮಾಡದಿದ್ದರೂ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಚನ್ನರಾಜ ಅವರ ಪ್ರಚಾರಕ್ಕೆ ನಿನ್ನೆಯಷ್ಟೇ ಚಾಲನೆ ನೀಡಿದ್ದಾರೆ.
ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ, ಆದರೂ ಬೆಳಗಾವಿ ಜಿಲ್ಲೆಯಲ್ಲಿ ಮತದಾರರಿಗೆ ಆಮಿಷವೊಡ್ಡುವ ಕೆಲಸ ಮಾತ್ರ ಗುಪ್ತವಾಗಿಯೇ ನಡೆದಿದೆ. ಈ ಚುನಾವಣೆಯಲ್ಲಿ ಪಾರ್ಟಿ ಮುಖ್ಯ ಅಲ್ಲ ಇಲ್ಲೇನಿದ್ದರೂ ಪ್ಯಾಕೇಟ್ ಆಟವೇ ಮುಖ್ಯ ಹೀಗಾಗಿ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಈಗಿನಿಂದಲೇ ಉಡುಗರೆ ನೀಡುತ್ತಿದ್ದಾರೆ.
ಪಕ್ಷಗಳು ಅಭ್ಯರ್ಥಿ ಗಳನ್ನು ಘೋಷಣೆ ಮಾಡಿಲ್ಲ,ಯಾರೊಬ್ಬರೂ ಇನ್ನುವರೆಗೆ ನಾಮಪತ್ರ ಸಲ್ಲಿಸಿಲ್ಲ,ಆದ್ರೂ ಬೆಳಗಾವಿ ಜಿಲ್ಲೆಯಲ್ಲಿ ಸಿಲೆಂಡರ್ ಇಲ್ಲದೇ ಗ್ಯಾಸ್ ಒಲೆಗಳು ಹೊತ್ತಿ ಉರಿಯುತ್ತಿವೆ .ಕರೆಂಟ್ ಇಲ್ಲದೇ ಇಸ್ತ್ರೀ ಕಲ್ಲುಗಳು ಫುಲ್ ಗರಂ ಆಗಿವೆ, ಒಂದು ತೊಲೆ ತೂಕದ ಬಂಗಾರದ ನಾಣ್ಯಗಳು ರೆಡಿ ಆಗುತ್ತಿವೆ. ಇನ್ನೊಂದು ಕೊಡೆ ಪ್ಯಾಕೇಟ್ ಮತ್ತು ಪ್ಯಾಕೇಜ್ ಯಾವ ರೀತಿ ಇರಬೇಕು ಎನ್ನುವ ಚಿಂತನೆ ಮಾತ್ರ ವ್ಯೆವಸ್ಥಿತವಾಗಿ ನಡೆದಿದೆ.
ಬಿಜೆಪಿಯಿಂದ ಮಹಾಂತೇಶ್ ಕವಟಗಿಮಠ,ಕಾಂಗ್ರೆಸ್ಸಿನಿಂದ ಚನ್ನರಾಜ ಹಟ್ಟಿಹೊಳಿ ,ಪಕ್ಷೇತರರಾಗಿ ಲಖನ್ ಜಾರಕಿಹೊಳಿ, ಮತ್ತು ಜೆಡಿಎಸ್ ನಿಂದ ನಾಸೀರ ಬಾಗವಾನ್ ಸ್ಪರ್ದೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ವಿವೇಕರಾವ್ ಪಾಟೀಲ ಅವರ ನಡೆ ಇನ್ನೂ ನಿಗೂಢವಾಗಿದೆ.
ವಿವೇಕರಾವ್ ಪಾಟೀಲರ ನಡೆ ಈ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ,ಅವರು ಸ್ಪರ್ದೆ ಮಾಡ್ತಾರೋ ಇಲ್ಲವೋ ಎನ್ನುವ ನಿರ್ಣಯ ಚುನಾವಣೆಯ ದಿಕ್ಕು ಬದಲಿಸಲಿದೆ.