Breaking News

ಕೈಗಾರಿಕಾ ಅದಾಲತ್ ನಲ್ಲಿ ಭರಪೂರ ಭರವಸೆ….

ಬೆಳಗಾವಿ, -ರಾಜ್ಯದ ಎಲ್ಲ 188 ಕೈಗಾರಿಕಾ ಪ್ರದೇಶಗಳ ಕುರಿತು ಸಮಗ್ರ ಅಧ್ಯಯನ ನಡೆಸಲಾಗುತ್ತಿದ್ದು, ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕೈಗಾರಿಕಾ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ (ಏ.8) ನಡೆದ ಬೆಳಗಾವಿ ಕಂದಾಯ ವಿಭಾಗದ ಏಳು ಜಿಲ್ಲೆಗಳ ಕೈಗಾರಿಕೋದ್ಯಮಿಗಳ ಜತೆ‌ ನಡೆದ ಕೈಗಾರಿಕಾ ಅದಾಲತ್ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಒಟ್ಟಾರೆ 188 ಕೈಗಾರಿಕಾ ಪ್ರದೇಶಗಳ ಸಮಗ್ರ ಸಮೀಕ್ಷೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಇಡೀ ರಾಜ್ಯದ ಕೈಗಾರಿಕಾ ಪ್ರದೇಶಗಳ ಸಂಪೂರ್ಣ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಅಳವಡಿಸಲಾಗುವುದು.
ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆ, ನೀರು, ವಿದ್ಯುತ್ ದೀಪ ಮತ್ತಿತರ ಮೂಲಸೌಕರ್ಯವನ್ನು ಒದಗಿಸುವುದರ ಜತೆಗೆ ಉದ್ಯಮದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಲಾಗುವುದು ಎಂದರು.
ಹೆಚ್ಚುವರಿ ಅಭಿವೃದ್ಧಿ ಶುಲ್ಕ ಕೈಬಿಡಲು ಒತ್ತಾಯ:
ಕೈಗಾರಿಕಾ ನಿವೇಶನವನ್ನು ಪ್ರತಿ ಎಕರೆಗೆ 40 ರಿಂದ 60 ಲಕ್ಷ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ. ಹತ್ತಾರು ವರ್ಷಗಳ ಬಳಿಕ ನಿವೇಶನ ಪಡೆದವರು ಕ್ರಯಪತ್ರ ಮಾಡಿಸುವ ಸಂದರ್ಭದಲ್ಲಿ 80 ರಿಂದ 90 ಲಕ್ಷ ರೂಪಾಯಿಗೆ  ಕ್ರಯಪತ್ರ ಮಾಡಲಾಗುತ್ತಿದೆ. ಇದರಿಂದ ಉದ್ಯಮಿಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ನಿವೇಶನದಾರರು ಅಳಲು ತೋಡಿಕೊಂಡರು.
ಇದಕ್ಕೆ ಉತ್ತರಿಸಿದ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಅರಿತುಕೊಂಡಿರುವ ಸರಕಾರವು ಇದೀಗ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಿಗೆ ಅಭಿವೃದ್ಧಿ ಆಧಾರದ ಮೇಲೆ ಶೇ.20 ರವರೆಗೆ ಹೆಚ್ಚುವರಿ ಅಭಿವೃದ್ಧಿ ಶುಲ್ಕ ಆಕರಿಸಲಾಗುತ್ತಿದೆ ಎಂದು ವಿವರಣೆ ನೀಡಿದರು.
ಈ ಸಮಸ್ಯೆ ಬಗೆಹರಿಸಲು ಈಗಾಗಲೇ ಮುಖ್ಯಮಂತ್ರಿಗಳ ಜತೆ ಕೂಡ ಚರ್ಚೆ ನಡೆಸಲಾಗಿದ್ದು, ಇಂತಹ ವ್ಯತ್ಯಾಸದ ಶುಲ್ಕ ಪಾವತಿಸಲು ಸರಕಾರದಿಂದಲೂ ನೆರವು ಒದಗಿಸುವಂತೆ ಕೋರಲಾಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಹುಬ್ಬಳ್ಳಿ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಹದಗೆಟ್ಟಿದ್ದು, ಕೂಡಲೇ ಸರಿಪಡಿಸಬೇಕು. ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಕೈಗಾರಿಕೋದ್ಯಮಿಗಳು ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಸಚಿವ ಮುರುಗೇಶ್ ನಿರಾಣಿ ಅವರು, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಲಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ದೊಡ್ಡ ರಸ್ತೆ ನಿರ್ಮಿಸಿಕೊಡಬೇಕು. ಅನೇಕ ಕೈಗಾರಿಕೆಗಳು ಆರಂಭಗೊಂಡಿರುವುದರಿಂದ ಉತ್ಪನ್ನಗಳ ಸಾಗಾಣಿಕೆಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ಬೆಳಗಾವಿ ಆಟೋನಗರ-ಸಂಪರ್ಕ ರಸ್ತೆ ನಿರ್ಮಿಸುವ ಭರವಸೆ:
ಬೆಳಗಾವಿ ಆಟೋನಗರದಲ್ಲಿ ಒಂದು ಕಡೆ ಹಿಂಡಾಲ್ಕೊ ಮತ್ತು ಇನ್ನೊಂದೆಡೆ ರಕ್ಷಣಾ ಇಲಾಖೆಯ ಜಾಗೆ ಇರುವುದರಿಂದ ಆಟೋನಗರ ಕೈಗಾರಿಕಾ ಪ್ರದೇಶ ಮತ್ತು ರಾಷ್ಟ್ರೀಯ ಹೆದ್ದಾರಿ ನಡುವೆ ಸಂಪರ್ಕ ರಸ್ತೆ ಇಲ್ಲದಿರುವುದರಿಂದ ಕಾರ್ಮಿಕರಿಗೆ ತೀವ್ರ ಅನಾನುಕೂಲ ಆಗುತ್ತಿದೆ. ಆದ್ದರಿಂದ ತಕ್ಷಣವೇ ಸಂಪರ್ಕ ರಸ್ತೆ ಮತ್ತು ಬೀದಿದೀಪ ವ್ಯವಸ್ಥೆ ಒದಗಿಸಬೇಕು ಎಂದು ಆಟೋನಗರದ ಉದ್ಯಮಿಗಳ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಹೆದ್ದಾರಿ-ಆಟೋನಗರ ನಡುವೆ ಸಂಪರ್ಕ ರಸ್ತೆ ನಿರ್ಮಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಆಟೋನಗರದಲ್ಲಿ ಟ್ರಕ್ ಟರ್ಮಿನಲ್ ಜಾಗೆಯಲ್ಲಿ ಕೆಲವು ಸರಕಾರಿ ಕಚೇರಿಗಳನ್ನು ಸ್ಥಾಪಿಸಲು ಮಾತ್ರ‌ ಒದಗಿಸುವಂತೆ ಸರಕಾರದ ಆದೇಶವಾಗಿದೆ. ಆದ್ದರಿಂದ ಆ ಜಾಗೆಯನ್ನು ಬೇರೆ ಉದ್ದೇಶಕ್ಕೆ ಒದಗಿಸುವುದು ಸಾಧ್ಯವಾಗುವುದಿಲ್ಲ ಎಂದು ಸಚಿವ ನಿರಾಣಿ ಸ್ಪಷ್ಟಪಡಿಸಿದರು.
2007ರಲ್ಲಿ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಹಂಚಿಕೆ ಮಾಡಲಾಗಿದ್ದು, ಇದುವರೆಗೆ ಕೆ.ಜೆ.ಪಿ. ಆಗಿಲ್ಲ. ಇದರಿಂದ ಕೈಗಾರಿಕೋದ್ಯಮಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಚಿವರ ಗಮನಸೆಳೆದರು.
ಈ ಬಗ್ಗೆ ಜಿಲ್ಲಾಧಿಕಾರಿ ಹಂತದಲ್ಲಿ ಸೂಕ್ತ ಕ್ರಮಕ್ಕೆ ಸಲಹೆ ನೀಡಲಾಗುವುದು ಎಂದರು.
ಕೈಗಾರಿಕಾಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾದ ಗುಂಜನ್ ಕೃಷ್ಣ, ಕೈಗಾರಿಕೆ ಮತ್ತು ‌ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ (ಎಂಎಸ್ಎಂಇ ಮತ್ತು ಪಿಪಿ) ಹೆಚ್.ಎಂ.ಶ್ರೀನಿವಾಸ್, ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಎನ್.ಶಿವಶಂಕರ್ ಮತ್ತಿತರರು ಲೋಕ ಅದಾಲತ್ ನಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಕಂದಾಯ ವಿಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೈಗಾರಿಕೋದ್ಯಮಿಗಳು ಅದಾಲತ್ ನಲ್ಲಿ ಪಾಲ್ಗೊಂಡಿದ್ದರು.
******

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *