ಬೆಳಗಾವಿ-
ಕೊರೋನಾ ಲಾಕ್ ಔಟ್ ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡು ಉಪವಾಸ ವನವಾಸ ಅನುಭವಿಸುತ್ತಿರುವ ಕೂಲಿಕಾರರಿಗೆ,ಕಡು ಬಡವರಿಗೆ ಆಹಾರ ಧಾನ್ಯ ಮತ್ತಿತರ ವಸ್ತುಗಳನ್ನು ಪೂರೈಸುವ ದಾನಿಗಳು ಮುಂದೆ ಬರುತ್ತಿದ್ದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮೀಜಿ ಅವರು ಇಂದು ಐವತ್ತು ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯವನ್ನು ನೀಡಿದ್ದಾರೆ.
ಇಂದು ಮುಂಜಾನೆ ಶಿವಬಸವನಗರದ ಮಠದ ಆವರಣದಲ್ಲಿಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವರು ಸಾಮಾನುಗಳ ಐವತ್ತು ಚೀಲಗಳನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕ ಶ್ರೀ ಅನೀಲ ಬೆನಕೆ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ ಚಂದರಗಿ,ಶ್ರೀ ಹರೀಶ ಕರಿಗಣ್ಣವರ ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ಅವರು, ಕೊರೋನಾ ವೈರಾಣು ಎದುರಿಸಲು ಎಲ್ಲರೂ ಕೈಗೂಡಿಸಿ ಕೆಲಸ ಮಾಡಬೇಕಾಗಿದೆ.ಕಡುಬಡವರಿಗೆ ತಮ್ಮ ಮಠವು ಒಂದು ತಿಂಗಳಿಗೆ ಅವಶ್ಯವಿರುವ ಅಕ್ಕಿ,ಸಕ್ಕರೆ,ಸಾಬೂನು,ಟೂಥ ಪೇಸ್ಟು,ಎಣ್ಣೆ,ಜೀರಿಗೆ,ಸಾಸಿವೆ ಮತ್ತಿತರ ವಸ್ತುಗಳನ್ನು ನೀಡುತ್ತಿದ್ದೇವೆ.ಇನ್ನೂ ಹೆಚ್ಚಿಗೆ ಕುಟುಂಬಗಳಿಗೆ ಅವಶ್ಯವೆನಿಸಿದರೆ ಇನ್ನೂ ಒದಗಿಸಲಾಗುವದು ಎಂದು ಹೇಳಿದರು.
ಶಾಸಕ ಬೆನಕೆ ಅವರು ಮಾತನಾಡಿ,ಕೊರೋನಾ ಮಹಾಮಾರಿಯನ್ನು ಎದುರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶಕ್ಕೆ ನೀಡಿರುವ ಸಲಹೆಯನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಬೇಕಾಗಿದೆ ಎಂದರು.