Breaking News

ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂತು ಒಂದು ಲಕ್ಷ ಕೆಜಿ ..

ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ಬ್ಯಸಿ ಆಗಿದ್ದಾಗ ಭಾರತೀಯ ರಿಸರ್ವ ಬ್ಯಾಂಕ್ ಸದ್ದಿಲ್ಲದೇ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ಸಾಧನೆ ಮಾಡಿದೆ.

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನಿಂದ, ಬ್ಯಾಂಕ್ ಆಫ್ ಇಂಗ್ಲಡ್ ನಲ್ಲಿದ್ದ ಸುಮಾರು 100 ಟನ್ ಅಥವಾ 1 ಲಕ್ಷ ಕೆಜಿ ಚಿನ್ನವನ್ನು ಮರಳಿ ಭಾರತಕ್ಕೆ ತಂದಿದೆ.

1991ರ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರ್‌ಬಿಐ ಚಿನ್ನವನ್ನು ಮರಳಿ ತಂದಿರುವುದು ಇದೇ ಮೊದಲು.
2023-24ರ ತನ್ನ ಹಣಕಾಸು ವರದಿಯಲ್ಲಿ ಆರ್‌ಬಿಐ ಈ ವಿವರ ಪ್ರಕಟಿಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಚಿನ್ನ ತರಲಾಗುವುದು ಎಂದು ಹೇಳಿದೆ. ತಂದ ಚಿನ್ನವನ್ನು ಮುಂಬೈ ಮತ್ತು ನಾಗ್ಪುರದಲ್ಲಿ ಆರ್‌ಬಿಐ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಆರ್‌ಬಿಐ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತ್ತು. ವಿದೇಶದಲ್ಲಿ ದಾಸ್ತಾನು ಹೆಚ್ಚುತ್ತಿರುವ ಕಾರಣ, ಸ್ವಲ್ಪ ಚಿನ್ನವನ್ನು ಭಾರತಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ವಿದೇಶದಲ್ಲಿ ಆರ್‌ಬಿಐ 413.8 ಟನ್ ಚಿನ್ನವನ್ನು ಇಟ್ಟಿದೆ. ಕೆಲ ವರ್ಷಗಳ ಹಿಂದೆ ಆರ್‌ಬಿಐ ವಿದೇಶಗಳಿಂದ ಚಿನ್ನ ಖರೀದಿಯಲ್ಲಿ ತೊಡಗಿದೆ. ಚಿನ್ನದ ಸಂಗ್ರಹ ಹೆಚ್ಚಿದ್ದಷ್ಟು ಆ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದರ್ಥ. ಈ ಕಾರಣಕ್ಕೆ ಆರ್‌ಬಿಐ ಚಿನ್ನದ ಸಂಗ್ರಹ ಮಾಡಲು ಮುಂದಾಗಿದೆ.

ಇಂಗ್ಲೆಂಡ್‌ನಲ್ಲಿ ಇರಿಸಿದ್ದು ಯಾಕೆ?

1991 ರಲ್ಲಿ ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ ಚಂದ್ರಶೇಖರ್ ನೇತೃತ್ವದ ಸರ್ಕಾರ ಹಣವನ್ನು ಸಂಗ್ರಹಿಸಲು ಚಿನ್ನವನ್ನು ಒತ್ತೆ ಇಟ್ಟಿತ್ತು. ಜುಲೈ 4 ಮತ್ತು 18 ರ ನಡುವೆ ಆರ್‌ಬಿಐ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್‌ ಸಾಲ ಪಡೆದುಕೊಂಡಿತ್ತು.

ಪ್ಲ್ಯಾನ್‌ ಮಾಡಿದ್ದು ಯಾರು  ಗೊತ್ತಾ..?

100 ಟನ್‌ ಚಿನ್ನವನ್ನು ತರಲು ತಿಂಗಳುಗಟ್ಟಲೇ ಪ್ಲ್ಯಾನಿಂಗ್‌ ಮಾಡಿ ಎಲ್ಲಿಯೂ ಈ ವಿಚಾರ ಸೋರಿಕೆ ಆಗದಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆರ್‌ಬಿಐ, ಹಣಕಾಸು ಸಚಿವಾಲಯ, ಸರ್ಕಾರದ ಇತರೇ ಇಲಾಖೆಗಳ ಸಂಪೂರ್ಣ ಸಹಕಾರದಿಂದ ವಿಶೇಷ ವಿಮಾನದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಸುರಕ್ಷಿತವಾಗಿ ತರಲಾಗಿದೆ. ದೇಶದ ʼಸಾರ್ವಭೌಮ ಆಸ್ತಿʼಯಾಗಿದ್ದ ಕಾರಣ ಈ ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.

ಚಿನ್ನ ಮರಳಿ ಭಾರತಕ್ಕೆ ತರಲು ಕಾರಣ ಏನು..?

ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಸಾಕಷ್ಟು ಚಿನ್ನವನ್ನು ಲಂಡನ್‌ನಲ್ಲಿ ಇಟ್ಟಿದೆ. ವಿಶ್ವದಲ್ಲಿ ಬದಲಾಗುತ್ತಿರುವ ರಾಜಕೀಯ ವಿದ್ಯಮಾನ ಮತ್ತು ಕರೆನ್ಸಿ ಮೌಲ್ಯದ ಏರಿಳಿತದ ಭೀತಿಯಿಂದಾಗಿ ಆರ್‌ಬಿಐ ಈಗ ಚಿನ್ನವನ್ನು ಮರಳಿ ಭಾರತಕ್ಕೆ ತರಲು ಮುಂದಾಗಿದೆ.

ಇಂಗ್ಲೆಂಡ್‌ನಲ್ಲಿ ದೇಶಗಳು ಚಿನ್ನ ಇಡೋದು ಯಾಕೆ ಗೊತ್ತಾ..?

ಈ ಹಿಂದಿನಿಂದಲೂ ಬಹುತೇಕ ದೇಶಗಳು ಯನೈಟೆಡ್ ಕಿಂಗ್‌ಡಮ್‌ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟುಕೊಂಡು ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಭದ್ರತೆ. ಭಾರೀ ಪ್ರಮಾಣದ ಚಿನ್ನ ಸಂಗ್ರಹಿಸಲು ಸುರಕ್ಷಿತ ವ್ಯವಸ್ಥೆ, ಸಂಗ್ರಹಾಲಯಗಳು ಇಲ್ಲದೇ ಇದ್ದಾಗ ದೇಶಗಳು ಯುಕೆ ಬ್ಯಾಂಕ್‌ನಲ್ಲಿ ಇಡುತ್ತಿವೆ. ಈ ರೀತಿಯಾಗಿ ಚಿನ್ನವನ್ನು ಇರಿಸಿದ್ದಕ್ಕೆ ದೇಶಗಳು ಗೌರವ ಧನ ನೀಡಬೇಕಾಗುತ್ತದೆ.

ಆರ್‌ಬಿಐ ಬಳಿ ಎಷ್ಟು ಚಿನ್ನವಿದೆ?

ಮಾರ್ಚ್ 2023 ರ ಮಾಹಿತಿಯ ಪ್ರಕಾರ ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು ಈ ಪೈಕಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. 15 ವರ್ಷಗಳ ಹಿಂದೆ ಆರ್‌ಬಿಐ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 200 ಟನ್ ಚಿನ್ನವನ್ನು ಖರೀದಿಸಿತ್ತು.

2019ರಲ್ಲಿ ಚಿನ್ನ ಸಂಗ್ರಹ 618.2 ಟನ್‌ಗೆ ಏರಿಕೆಯಾಗಿದ್ದರೆ 2020ರ ವೇಳೆಗೆ ಇದು 661.4 ಟನ್‌ಗೆ ಏರಿಕೆಯಾಗಿತ್ತು. 2021ರ ವೇಳೆಗೆ 695.3 ಟನ್, 2022ಕ್ಕೆ 760.4 ಟನ್, 2023ಕ್ಕೆ 794.6 ಟನ್ ಹಾಗೂ 2024ರ ವೇಳೆಗೆ ಬರೋಬ್ಬರಿ 822.1 ಟನ್ ಚಿನ್ನದ ಸಂಗ್ರಹ ಹೊಂದಿದೆ.

ಚಿನ್ನದಿಂದ ಯಾವ ದೇಶ ಶ್ರೀಮಂತವಾಗಿದೆ ಗೊತ್ತಾ..?

ಎರಡನೇ ಮಹಾಯುದ್ಧಕ್ಕೆ ಅಮೆರಿಕ ತಡವಾಗಿ ಪ್ರವೇಶ ಮಾಡಿದ್ದರಿಂದ ಯುಕೆ, ಯುಎಸ್‌ಎಸ್‌ಆರ್‌ಗೆ ಬಲ ಬಂದಿತ್ತು. ಆದರೆ ಈ ಮಿತ್ರ ರಾಷ್ಟ್ರಗಳ ಮಧ್ಯೆ ಮಧ್ಯೆ ವ್ಯವಹಾರಕ್ಕೆ ಬಹಳ ಸಂಕಷ್ಟ ಎದುರಾಗಿತ್ತು. ಯಾಕೆಂದರೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಕರೆನ್ಸಿ ಇತ್ತು. ಈ ಸಮಸ್ಯೆ ಪರಿಹಾರಕ್ಕೆ ಅಮೆರಿಕದಲ್ಲಿ 1944ರಲ್ಲಿ ಬ್ರೆಟ್ಟನ್‌ವುಡ್ಸ್‌ ಒಪ್ಪಂದಕ್ಕೆ 44 ದೇಶಗಳು ಸಹಿ ಹಾಕಿದ್ದವು.

ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಮೆರಿಕನ್‌ ಡಾಲರ್‌ ಅನ್ನು ಎಲ್ಲಾ ದೇಶಗಳು ವ್ಯವಹಾರಕ್ಕೆ ಬಳಸಲು ಅಧಿಕೃತ ಒಪ್ಪಿಗೆ ನೀಡಿದವು. ದೇಶಗಳು ಚಿನ್ನವನ್ನು ನೀಡಿ ಅಮೆರಿಕನ್‌ ಡಾಲರ್‌ ಖರೀದಿಸುವುದು ಒಪ್ಪಂದದ ಮುಖ್ಯ ತಿರುಳು. ಈ ವೇಳೆ ಒಂದು ಔನ್ಸ್‌ ಅಥವಾ 28.35 ಗ್ರಾಂ ಚಿನ್ನಕ್ಕೆ 35 ಡಾಲರ್‌ ದರವನ್ನು ನಿಗದಿ ಮಾಡಲಾಗಿತ್ತು. ಈ ಚಿನ್ನದ ಒಪ್ಪಂದಕ್ಕೆ ಅಮೆರಿಕ ಬಂದಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. 1910ರಲ್ಲಿ 2 ಸಾವಿರ ಟನ್‌ ಚಿನ್ನ ಅಮೆರಿಕದಲ್ಲಿ ಇದ್ದರೆ ತನ್ನ ಎಲ್ಲಾ ವ್ಯವಹಾರಗಳಿಂದ 1940ರ ವೇಳೆಗೆ ಇದು 20 ಸಾವಿರ ಟನ್‌ಗೆ ಏರಿಕೆಯಾಗಿತ್ತು. ಮಾಹಿತಿಗಳ ಪ್ರಕಾರ ಅಂದು ವಿಶ್ವದ 75% ಚಿನ್ನ ಅಮೆರಿಕದ ಬಳಿ ಇತ್ತು. ಚಿನ್ನ ಹೊಂದಿದ್ದವರೇ ಬಾಸ್‌ ಎನ್ನುವಂತೆ ಬ್ರೆಟ್ಟನ್‌ವುಡ್ಸ್‌ ಒಪ್ಪಂದದ ಬಳಿಕ ಡಾಲರ್‌ ವಿಶ್ವದ ಕರೆನ್ಸಿಯಾಗಿ ಬದಲಾಯ್ತು. ಪರಿಣಾಮ ಅಮೆರಿಕ ಶ್ರೀಮಂತ ದೇಶವಾಗಿ ಹೊರಹೊಮ್ಮಿದೆ.

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *